ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿಎಸ್ ಯಡಿಯೂರಪ್ಪ ಅವರು ರಾಜ್ಯದ ರೈತರ ಓಲೈಕೆಗೆ ಮುಂದಾಗಿದ್ದು, ಆಚ್ಛೇ ದಿನ್ ಭರವಸೆ ನೀಡಿದ್ದಾರೆ.
ಮೇ 12ರಂದು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್ ಗಳಲ್ಲಿರುವ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ. ಮತ್ತೊಂದು ಕಡೆ 2022ರ ವೇಳೆಗೆ ರೈತರ ಆದಾಯ ಡಬಲ್ ಮಾಡಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಬಿಜೆಪಿ ಚುನಾವಣಾ ಪ್ರಣಾಳಿಕೆ ನಾಳೆ ಬಿಡುಗಡೆಯಾಗುತ್ತಿದ್ದು, ಇದರಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ರೈತರ ಸಾಲ ಮನ್ನಾ ಸೇರಿದಂತೆ ಹಲವು ಭರವಸೆಗಳನ್ನು ನೀಡುವ ಸಾಧ್ಯತೆ ಇದೆ.
ನಿನ್ನೆ ಶಿವಮೊಗ್ಗದಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಬಿಎಸ್ ವೈ, ರೈತರ ಸಾಲ ಮನ್ನಾ ಮಾಡುವುದು ನನ್ನ ಮೊದಲ ಆದ್ಯತೆಯಾಗಿದ್ದು, ಅಧಿಕಾರಕ್ಕೆ ಬಂದ ತಕ್ಷಣ ಸಾಲ ಮನ್ನಾ ಮಾಡಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು 1 ಲಕ್ಷ ಕೋಟಿ ರುಪಾಯಿ ಅನುದಾನ ಬಿಡುಗಡೆ ಮಾಡುವುದಾಗಿ ಮಾಜಿ ಸಿಎಂ ಭರವಸೆ ನೀಡಿದ್ದಾರೆ.