ಬಹಿರಂಗ ವಾಗ್ದಾಳಿ ಮೂಲಕ ಜೆಡಿಎಸ್ ಮೂಲೆಗುಂಪು ಮಾಡಲು ಕಾಂಗ್ರೆಸ್, ಬಿಜೆಪಿ ಯತ್ನ?

ಕಿಂಗ್ ಮೇಕರ್ ಅಲ್ಲ ಕಿಂಗ್ ಆಗಬೇಕು ಎಂದು ಪ್ರಯತ್ನಿಸುತ್ತಿರುವ ಪ್ರಾದೇಶಿಕ ಪಕ್ಷ ಜೆಡಿಎಸ್ ಅನ್ನು ಮೂಲೆಗುಂಪು ಮಾಡಲು ಪ್ರಯತ್ನಿಸುತ್ತಿವೆಯೇ ಎಂಬ ಮಾತುಗಳು ಕೇಳಿಬರುತ್ತಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮೈಸೂರು: ಹಾಲಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳು ದಿಢೀರ್ ತಮ್ಮ ಚುನಾವಣಾ ಪ್ರಚಾರ ಕಾರ್ಯತಂತ್ರವನ್ನೇ ಬದಲಿಸಿದಂತೆ ಕಾಣುತ್ತಿದ್ದು, ಕಿಂಗ್ ಮೇಕರ್ ಅಲ್ಲ ಕಿಂಗ್ ಆಗಬೇಕು ಎಂದು ಪ್ರಯತ್ನಿಸುತ್ತಿರುವ ಪ್ರಾದೇಶಿಕ ಪಕ್ಷ ಜೆಡಿಎಸ್ ಅನ್ನು ಮೂಲೆಗುಂಪು ಮಾಡಲು ಪ್ರಯತ್ನಿಸುತ್ತಿವೆಯೇ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಹಿಂದೆ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶದ ಸಾಧ್ಯತೆ ಕುರಿತು ಕೆಲ ಸಮೀಕ್ಷೆಗಳು ವರದಿ ನೀಡಿದ್ದವು. ವರದಿಗಳ ಹಿನ್ನಲೆಯಲ್ಲೇನೋ ಎಂಬಂತೆ ತಮ್ಮ ಚುನಾವಣಾ ಪ್ರಚಾರ ಕಾರ್ಯತಂತ್ರ ಹೆಣೆದಿದ್ದ ರಾಷ್ಟ್ರೀಯ ಪಕ್ಷಗಳ ಕಾಂಗ್ರೆಸ್ ಮತ್ತು ಬಿಜೆಪಿ ಜೆಡಿಎಸ್ ಕುರಿತು ಮೃದು ಧೋರಣೆ ಅನುಸರಿಸಿದ್ದವು.
ಈ ಹಿಂದೆ ಕರ್ನಾಟಕದಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ಜೆಡಿಎಸ್ ವರಿಷ್ಟ ದೇವೇಗೌಡರ ಕುರಿತು ಒಳ್ಳೆಯ ಮಾತುಗಳನ್ನಾಡುವ ಮೂಲಕ ಜೆಡಿಎಸ್ ಸಂತೈಸುವ ಪ್ರಯತ್ನ ಮಾಡಿದ್ದರು. ಅತ್ತ ಜೆಡಿಎಸ್ ವರಿಷ್ಟರೂ ಕೂಡ ಅದೇ ಧಾಟಿಯಲ್ಲೇ ಪ್ರಧಾನಿ ಮೋದಿಯನ್ನು ಹೊಗಳಿದ್ದರು. ಇತ್ತ ಸಿಎಂ ಸಿದ್ದರಾಮಯ್ಯ ಅವರೂ ಕೂಡ ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಲು ಜಾತ್ಯಾತೀತ ಶಕ್ತಿಗಳೊಂದಿಗೆ ಕೈ ಜೋಡಿಸಲು ಸಿದ್ಧ ಎಂದು ಬಹಿರಂಗ ಹೇಳಿಕೆ ನೀಡಿದ್ದರು.
ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಅವರು, ಜೆಡಿಎಸ್ ಪೂರ್ಣಬಲದ ಮೇಲೆ ಅಧಿಕಾರಕ್ಕೇರಲಿದೆ. ತಾವು ಯಾವುದೇ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಮೈತ್ರಿ ಸರ್ಕಾರದಲ್ಲಿ ತಾವು ಸಿಎಂ ಆಗುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಬೆಳವಣಿಗೆಳ ಬೆನ್ನಲ್ಲೇ ಗೇರ್ ಬದಲಿಸಿರುವ ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ವಿರುದ್ಧ ಟೀಕಾ ಪ್ರಹಾರವನ್ನು ಆರಂಭಿಸಿವೆ. ಈ ಹಿಂದೆ ಜೆಡಿಎಸ್ ವರಿಷ್ಠರನ್ನು ಹಾಡಿಹೊಗಳಿದ್ದ ಪ್ರಧಾನಿ ಮೋದಿ, ಕೆಂಗೇರಿಯಲ್ಲಿ ನಡೆದ ಪ್ರಚಾರದಲ್ಲಿ ಜೆಡಿಎಸ್ ಗೆ ಮತ ನೀಡಿದರೆ ಕಾಂಗ್ರೆಸ್ ಗೆ ಮತ ನೀಡಿದಂತೆ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದರು. ಅಲ್ಲದೆ ತಾವು ಜೆಡಿಎಸ್ ನೊಂದಿಗೆ ಸೇರಿ ಸರ್ಕಾರ ರಚನೆ ಮಾಡುವುದಿಲ್ಲ ಎಂದು ಬಿಜೆಪಿ ನಾಯಕರು ಹೇಳಿಕೆ ನೀಡಿದ್ದರು. 
ಇತ್ತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿ ಜೆಡಿಎಸ್ ಬಿಜೆಪಿಯ ಬಿ ಟೀಮ್ ಎಂದು ವ್ಯಂಗ್ಯ ಮಾಡಿದ್ದರು. ಅಲ್ಲದೆ ಜೆಡಿಎಸ್ ಕೆಸರಿಯಾಗಿ ಬದಲಾಗುತ್ತಿದ್ದು, ಅದು ಜಾತ್ಯಾತೀವಾಗಿ ಉಳಿದಿಲ್ಲ ಎಂದು ವಾಗ್ದಾಳಿ ನಡೆಸಿದರು. ಈ ಹೇಳಿಕೆ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ಕೂಡ ಜೆಡಿಎಸ್ ಬಿಜೆಪಿಯೊಂದಿಗೆ ರಹಸ್ಯ ಮೈತ್ರಿ ಮಾಡಿಕೊಂಡಿದೆ ಎಂದು ಆರೋಪಿಸಿದ್ದರು. ಅಲ್ಲದೆ ಕುಮಾರಸ್ವಾಮಿ  ಮುಖ್ಯಮಂತ್ರಿಯಾಗಲು ಸಾದ್ಯವಿಲ್ಲ ಎಂದು ಹೇಳಿದ್ದರು.
ಈ ಎಲ್ಲ ಅಂಶಗಳನ್ನು ಗಮನಿಸಿದರೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಬಹಿರಂಗ ವಾಗ್ದಾಳಿ ಮೂಲಕ ಜೆಡಿಎಸ್ ಕುರಿತಂತೆ ಮತದಾರರ ಮೇಲೆ ವ್ಯತಿರಿಕ್ತ ಪರಿಣಾಮ ಮೂಡಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. 
ಜೆಡಿಎಸ್ ಮೇಲಿನ ವಾಗ್ದಾಳಿಗೆ ಆಂತರಿಕ ಸಮೀಕ್ಷೆ ಕಾರಣ?
ಇನ್ನು ಹಳೇ ಮೈಸೂರು ಭಾಗದಲ್ಲಿ  ಹಿಡಿತ ಹೊಂದಿರುವ ಜೆಡಿಎಸ್ ಅನ್ನು ಬಗ್ಗಿಸಲು ಕಾರ್ಯತಂತ್ರ ಹೆಣೆದಿರುವ ರಾಷ್ಟ್ರೀಯ ಪಕ್ಷಗಳು ಈ ಸಂಬಂಧ ಆಂತರಿಕ ಮತದಾರರ ಸಮೀಕ್ಷೆ ನಡೆಸಿವೆ. ಈ ವೇಳೆ ಜೆಡಿಎಸ್ ಪರ ಅಥವಾ ಜೆಡಿಎಸ್ ಕುರಿತು ಮೃದು ಧೋರಣೆಯ ಮಾತುಗಳನ್ನು ಆಡಿದರೆ ಪಕ್ಷಕ್ಕೆ 20-25 ಕ್ಷೇತ್ರಗಳ ನಷ್ಟವಾಗುವ ಎಚ್ಚರಿಕೆ ಬಂದಿದೆ. ಅದೇ ಜೆಡಿಎಸ್ ವಿರುದ್ದ ವಾಗ್ದಾಳಿ ಮುಂದುವರೆಸಿದರೆ ಕನಿಷ್ಛ 3-4 ಹೆಚ್ಚುವರಿ ಕ್ಷೇತ್ರಗಳ ಜಯಸಾಧಿಸುವ ಸಾಧ್ಯತೆ ಇದೆ. ಈಗಾಗಲೇ ಜೆಡಿಎಸ್ ತಾನು ಕಿಂಗ್ ಮೇಕರ್ ಅಲ್ಲ, ತಾವೇ ಕಿಂಗ್ ಎಂದು ಘೋಷಣೆ ಮಾಡಿರುವುದು ಜೆಡಿಎಸ್ ಕಾರ್ಯಕರ್ತರಲ್ಲಿನ ಹೊಸ ಚೈತನ್ಯಕ್ಕೆ ಕಾರಣವಾಗಿದ್ದು, ಹಳೇ ಮೈಸೂರು ಭಾಗದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಹೀಗಾಗಿ ಅವರ ಅಬ್ಬರದ ಪ್ರಚಾರಕ್ಕೆ ಸರಿಸಮಾನವಾಗಿ ಪ್ರಚಾರ ನಡೆಸಿದರೆ ಮಾತ್ರ ಪಕ್ಷಕ್ಕೆ ಲಾಭ ಎಂಬ ಸಲಹೆ ಮೇರೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಜೆಡಿಎಸ್ ವಿರುದ್ಧ ತೀವ್ರ ಪ್ರಮಾಣದಲ್ಲಿ ವಾಗ್ಳಾಳಿ ನಡೆಸುತ್ತಿವೆ ಎನ್ನಲಾಗಿದೆ. ಇದೇ ಕಾರಣಕ್ಕೆ ಹಳೇ ಮೈಸೂರಿನ 7 ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com