ಬೆಂಗಳೂರು: ರಾಜಕೀಯ ನಾಯಕರ ಬೆಂಬಲಿಗರಿಗೆ ಅಸಲಿ ವೋಟರ್ ಐಡಿ ಕೊಟ್ಟಿರುವ ಮತದಾರರಿಗೆ ಈಗ ಆತಂಕ

ಇತ್ತೀಚೆಗೆ ಸಾವಿರಾರು ಚುನಾವಣಾ ಗುರುತು ಪತ್ರವನ್ನು ವಶಪಡಿಸಿಕೊಂಡಿದ್ದು ಮತ್ತಿಕೆರೆಯ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಇತ್ತೀಚೆಗೆ ಸಾವಿರಾರು ಚುನಾವಣಾ ಗುರುತು ಪತ್ರವನ್ನು ವಶಪಡಿಸಿಕೊಂಡಿದ್ದು ಮತ್ತಿಕೆರೆಯ ಎಸ್ ಬಿಎಂ ಕಾಲೊನಿ ನಿವಾಸಿಗಳಲ್ಲಿ ಆತಂಕವನ್ನುಂಟುಮಾಡಿದೆ.
 
ಕಳೆದ ಜನವರಿಯಲ್ಲಿ ಅಭ್ಯರ್ಥಿಯೊಬ್ಬರ ಸಹಚರರು ಮನೆಯೊಂದರಿಂದ ಸಾವಿರಾರು ಮೂಲ ಚುನಾವಣಾ ಗುರುತು ಪತ್ರವನ್ನು ವಶಪಡಿಸಿಕೊಂಡಿದ್ದರು. ಅದು ರಾಜರಾಜೇಶ್ವರಿ ನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತದೆ. ತಮ್ಮ ಮೂಲ ಗುರುತು ಪತ್ರಗಳನ್ನು ವಶಪಡಿಸಿಕೊಂಡು ಅದನ್ನು ನಕಲಿ ಮಾಡಿರಬಹುದು ಎಂಬ ಭೀತಿಯಲ್ಲಿ ಮತ್ತಿಕೆರೆ ನಿವಾಸಿಗಳಿದ್ದಾರೆ.

ಕಾಂಗ್ರೆಸ್ ಮುಖಂಡರೊಬ್ಬರ ನಿವಾಸದಲ್ಲಿ ಮತದಾರರಿಗೆ ಉಚಿತ ಸೀರೆ ವಿತರಿಸಲೆಂದು ಮತ್ತಿಕೆರೆಯ ನಿವಾಸಿಗಳಿಂದ ಚುನಾವಣಾ ಗುರುತು ಪತ್ರಗಳನ್ನು ಸಂಗ್ರಹಿಸಲಾಗಿತ್ತು. ಎರಡು ದಿನಗಳು ಕಳೆದ ನಂತರ ಬಾಕ್ಸೊಂದರಲ್ಲಿ ಸೀರೆ ಜೊತೆಗೆ ಗುರುತು ಪತ್ರವನ್ನು ಹಿಂತಿರುಗಿಸಲಾಗಿತ್ತು. ಕಾಂಗ್ರೆಸ್ ಮುಖಂಡನ ಬೆಂಬಲಿಗರು ಮನೆ ಮನೆಗೆ ಬಂದು ನಮ್ಮಲ್ಲಿ ವೋಟರ್ ಐಡಿ ಕೇಳಿದರು. ನಮಗೆ ಯಾವುದೇ ಸಂಶಯ ಬರಲಿಲ್ಲ, ಕೊಟ್ಟುಬಿಟ್ಟೆವು. ಅದನ್ನು ನಕಲಿ ಮಾಡಿರಬಹುದೇ ಎಂಬ ಆತಂಕ ನಮಗಾಗುತ್ತಿದೆ. ಮೂಲ ಗುರುತು ಪತ್ರವನ್ನು ಯಾರಿಗೆ ಸಹ ಕೊಡಬೇಡಿ ಎಂದು ನಮಗೆ ಯಾರು ಕೂಡ ಹೇಳಲಿಲ್ಲ ಎನ್ನುತ್ತಾರೆ 6ನೇ ಕ್ರಾಸ್ ನಿವಾಸಿ ಸುಮತಿ.

ಮತ್ತೊಬ್ಬ ನಿವಾಸಿ ಮಾತನಾಡಿ, ನನ್ನ ಗುರುತು ಪತ್ರ ಕಾಣೆಯಾಗಿದೆ. ನನ್ನಲ್ಲಿ ಗುರುತು ಪತ್ರ ಸಂಖ್ಯೆ ಕೇಳಿದರು, ಅದಕ್ಕೆ ಕೊಟ್ಟೆ. ನನಗೆ ಕೂಡ ಉಚಿತ ಸೀರೆ ಸಿಕ್ಕಿದೆ. ಈಗ ಆ ನಕಲಿ ಗುರುತು ಚೀಟಿಯಲ್ಲಿ ನನ್ನ ಹೆಸರುಗಳಿರಬಹುದೇ ಎಂಬ ಚಿಂತೆಯುಂಟಾಗಿದೆ ಎನ್ನುತ್ತಾರೆ.

8ನೇ ಕ್ರಾಸ್ ನಲ್ಲಿರುವ ಸುವರ್ಣ ಮಾತನಾಡಿ, ಈ ಬಾರಿ ಮತ ಹಾಕಲು ಸಾಧ್ಯವಾಗುತ್ತದೆಯೇ ಇಲ್ಲವೇ ಎಂಬ ಸಂಶಯ ನನಗುಂಟಾಗುತ್ತಿದೆ. ನಕಲಿ ವೋಟರ್ ಐಡಿ ನೀಡಿರಬಹುದೇ ಎಂಬ ಸಂಶಯ ಕೂಡ ಬರುತ್ತಿದೆ. ಪ್ರತಿ ರಸ್ತೆಯ ಪ್ರತಿ ಮನೆಗಳಿಂದ ರಾಜಕೀಯ ಮುಖಂಡನ ಬೆಂಬಲಿಗರು ಬಂದು ವೋಟರ್ ಐಡಿ ಸಂಗ್ರಹಿಸಿದ್ದಾರೆ. ವೋಟ್ ಹಾಕಲು ಸಾಧ್ಯವಾಗುತ್ತದೆಯೇ ಇಲ್ಲವೇ ಎಂದು ನಾಳೆ ನೋಡಬೇಕಷ್ಟೆ ಎನ್ನುತ್ತಾರೆ.

ಫಾತಿಮಾ ಎಂಬ ಮತ್ತೊಬ್ಬ ಮಹಿಳೆ, ಸಂಕ್ರಾಂತಿ ಸಮಯದಲ್ಲಿ ಅಭ್ಯರ್ಥಿಗಳು ನಮಗೆ ಪ್ರತಿವರ್ಷ ಸೀರೆ ನೀಡುತ್ತಾರೆ. ಆದರೆ ಈ ವರ್ಷ ಮೊದಲ ಸಲ ನಮ್ಮ ಚುನಾವಣಾ ಗುರುತು ಪತ್ರವನ್ನು ಕೇಳಿ ಪಡೆದುಕೊಂಡಿದ್ದರು ಎನ್ನುತ್ತಾರೆ. ಇಲ್ಲಿ ಇನ್ನೊಂದು ಆಸಕ್ತಿಕರ ವಿಷಯವೆಂದರೆ ವಾರ್ಡ್ ನಲ್ಲಿರುವ ಮಹಿಳಾ ಮತದಾರರಿಂದ ಮಾತ್ರ ವೋಟರ್ ಐಡಿಗಳನ್ನು ಸಂಗ್ರಹಿಸಲಾಗಿದೆ. ಪುರುಷರಲ್ಲಿ ಗುರುತು ಪತ್ರದ ಸಂಖ್ಯೆ ಮಾತ್ರ ಪಡೆದುಕೊಂಡಿದ್ದಾರೆ. ಇಲ್ಲಿನ ಬಹುತೇಕ ನಿವಾಸಿಗಳು ತಮ್ಮ ಮೂಲ ಗುರುತು ಪತ್ರವನ್ನು ನೀಡಿ ಎರಡು ದಿನಗಳ ನಂತರ ಅವರಿಗೆ ಹಿಂತಿರುಗಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com