ನನ್ನ ಕೈ ಕಟ್ಟಿಹಾಕಲು ಮತ್ತು ಬಾಯಿ ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ: ರಮೇಶ್ ಕುಮಾರ್

ಸ್ಪೀಕರ್ ಆಗಿ ಆಯ್ಕೆ ಮಾಡಿದ ಮಾತ್ರಕ್ಕೆ ನನ್ನ ಕೈ ಕಟ್ಟಿಹಾಕಲು ಮತ್ತು ಬಾಯಿ ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಧಾನಸಭೆ ಸ್ಪೀಕರ್ ಕೆಆರ್ ರಮೇಶ್ ಕುಮಾರ್ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೋಲಾರ: ಸ್ಪೀಕರ್ ಆಗಿ ಆಯ್ಕೆ ಮಾಡಿದ ಮಾತ್ರಕ್ಕೆ ನನ್ನ ಕೈ ಕಟ್ಟಿಹಾಕಲು ಮತ್ತು ಬಾಯಿ ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಧಾನಸಭೆ ಸ್ಪೀಕರ್ ಕೆಆರ್ ರಮೇಶ್ ಕುಮಾರ್ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಇಂದು ತಮ್ಮ ಸ್ವಕ್ಷೇತ್ರ ಕೋಲಾರಕ್ಕೆ ಭೇಟಿ ನೀಡಿದ ರಮೇಶ್ ಕುಮಾರ್ ಅವರು, ನನ್ನನ್ನು ಸ್ಪೀಕರ್ ಮಾಡುವ ಮೂಲಕ ನನ್ನ ಕೈ ಮತ್ತು ಬಾಯಿ ಕಟ್ಟಿಹಾಕಲು ಯಾರಿಂದಲೂ ಸಾಧ್ಯವಿಲ್ಲ. ಹಾಗೇನಾದರೂ ಯಾರಾದರೂ ಆ ರೀತಿಯ ಪ್ರಯತ್ನ ಮಾಡಿದರೆ ಅವರ ಕೈ ಬಾಯಿಯನ್ನು ನಾನೇ ಕಟ್ಟಿ ಹಾಕುತ್ತೇನೆ ಹೇಳಿದ್ದಾರೆ.
'ನನ್ನನ್ನು ಸ್ಪೀಕರ್ ಮಾಡಿ ಅಂತಾ ಯಾರನ್ನೂ ಕೇಳಿರಲಿಲ್ಲ. ನನಗೆ ವರಿಷ್ಠರು ನೀಡಿದ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತೇನೆ. ಸರ್ಕಾರ ಉಳಿಯೋದು ಬಿಡೋದು ಆಯಾ ಪಕ್ಷದವರಿಗೆ ಬಿಟ್ಟಿದ್ದು. ಈಗ ನಾನು ಯಾವ ಪಕ್ಷಕ್ಕೂ ಸೇರಿದವನಲ್ಲ. ಯಾವುದೇ ಪಕ್ಷಕ್ಕೆ ಸೇರದೇ, ಸದನ ನಡೆಸೋದು ನನ್ನ ಜವಾಬ್ದಾರಿಯಾಗಿದೆ. ಬಿಜೆಪಿಯವರು ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆ. ಹೀಗಿರುವಾಗ ಉಪಚುನಾವಣೆ ಆಗಲು ಸಾಧ್ಯವಿಲ್ಲ ಅಂತಾ ರಮೇಶ್​ಕುಮಾರ್ ಭವಿಷ್ಯ ನುಡಿದಿದ್ದಾರೆ.
ಸ್ಪೀಕರ್ ಆದಾಕ್ಷಣ ಕ್ಷೇತ್ರದ ಅಭಿವೃದ್ಧಿ ಕಾರ್ಯ ಕುಂಠಿತವಾಗಲ್ಲ
ಇದೇ ವೇಳೆ ತಮ್ಮನ್ನು ಆರಿಸಿದ ಕ್ಷೇತ್ರದ ಜನರನ್ನೂ ನಾನು ಮರೆಯುವಂತಿಲ್ಲ. ಯಾವುದೇ ಕಾರಣಕ್ಕೂ ನನ್ನ ಕ್ಷೇತ್ರದ ಅಭಿವೃದ್ಧಿ ಕಾರ್ಯ ಕುಂಠಿತವಾಗಬಾರದು. ಅದಕ್ಕೆ ನಾನು ಆಸ್ಪದ ಕೂಡ ನೀಡುವುದಿಲ್ಲ. ಸಚಿವ ಸ್ಥಾನ ಬಿಟ್ಟು ಸ್ಪೀಕರ್ ಆದಾಕ್ಷಣ ಕ್ಷೇತ್ರದ ಅಭಿವೃದ್ದಿ ಕುಂಠಿತ ಆಗುವುದಿಲ್ಲ. ಇನ್ನೂ ಹೆಚ್ಚಿನ ಕೆಲಸ ಮಾಡುತ್ತೇನೆ. ಜೂನ್ 7 ರಂದು ಕೆ‌.ಸಿ.ವ್ಯಾಲಿ ಯೋಜನೆಗೆ ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್ ಚಾಲನೆ ನೀಡುತ್ತಾರೆ. ಈ ಹಿಂದೆ, ಈ ಯೋಜನೆಗೆ ಕುಮಾರಸ್ವಾಮಿ ವಿರೋಧ ಮಾಡಿದ್ದರು. ಆದರೆ, ಈಗ ವಿರೋಧ ಮಾಡಲು ಆಗಲ್ಲ ಎಂದು ರಮೇಶ್ ಕುಮಾರ್ ಮಾರ್ಮಿಕವಾಗಿ ಹೇಳಿದ್ದಾರೆ.
ಇತ್ತೀಚೆಗಷ್ಟೇ ಕಾಂಗ್ರೆಸ್ ಶಾಸಕ ಕೆಆರ್ ರಮೇಶ್ ಕುಮಾರ್ ಅವರನ್ನು ವಿಧಾನಸಭಾ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದ ರಮೇಶ್ ಕುಮಾರ್ ವಿರುದ್ಧ ಬಿಜೆಪಿಯ ಸುರೇಶ್ ಕುಮಾರ್ ಸ್ಪರ್ಧಿಸಿದ್ದರಾದರೂ, ಅಂತಿಮ ಕ್ಷಣದಲ್ಲಿ ಕಣದಿಂದ ಹಿಂದೆ ಸರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com