ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಮ ಮಂದಿರ ನಿರ್ಮಾಣ ಮಾಡುವ ಬಗ್ಗೆ ಚಿಂತೆ ಇಲ್ಲ. ಆದರೆ ಮುಸ್ಲಿಮರ ಹೆಂಡತಿಯರ ಬಗ್ಗೆ ಚಿಂತೆ ಎಂದು ಕಾಂಗ್ರೆಸ್ ನಾಯಕ ಸಿಎಂ ಇಬ್ರಾಹಿಂ ಅವರು ಶುಕ್ರವಾರ ಲೇವಡಿ ಮಾಡಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ರಾಹಿಂ, ತನ್ನ ಸ್ವಂತ ಪತ್ನಿ ಬಗ್ಗೆಯೇ ಕಾಳಜಿ ವಹಿಸದ ಮೋದಿ, ನಮ್ಮ (ಮುಸ್ಲಿಮರ) ಪತ್ನಿ ಬಗ್ಗೆ ಅಪಾರ ಕಾಳಜಿ ವಹಿಸುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ಮೋದಿ ಅವರು ತ್ರಿವಳಿ ತಲಾಖ್ ಬಗ್ಗೆ ತಲೆ ಕೆಡಿಸಿಕೊಂಡಿರುವಷ್ಟು ರಾಮ ಮಂದಿರದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಅವರು ತನ್ನ ಪತ್ನಿಗಿಂತ ಮುಸ್ಲಿಮರ ಪತ್ನಿ ಬಗ್ಗೆಯೇ ಜಾಸ್ತಿ ಕಾಳಜಿ ಮಾಡುತ್ತಿದ್ದಾರೆ ಎಂದು ಇಬ್ರಾಹಿಂ ಕುಟುಕಿದ್ದಾರೆ.
ನಾವು ಯಾವತ್ತು ರಾಮ ಮಂದಿರಕ್ಕೆ ವಿರೋಧ ವ್ಯಕ್ತಪಡಿಸಿದವರಲ್ಲ. ಆದರೆ, ವಿವಾದ ಬಗೆಹರಿಸಲು ಬಿಜೆಪಿಯವರಿಗೆ ಇಚ್ಛಾಶಕ್ತಿ ಇಲ್ಲ ಎಂದು ಆರೋಪಿಸಿದರು.
ಈ ಹಿಂದೆ ಹುಬ್ಬಳ್ಳಿಯ ಈದ್ಗಾ ಮೈದಾನ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿಯವರು ಕೆಲ ವರ್ಷ ಚುನಾವಣೆ ಎದುರಿಸಿದರು. ಇವರೆಲ್ಲ ಸೋಕಾಲ್ಡ್ ರಾಷ್ಟ್ರಭಕ್ತರು ಎಂದು ವಾಗ್ದಾಳಿ ನಡೆಸಿದರು.