

ಶಿಕಾರಿಪುರ: ಶಿವಮೊಗ್ಗ ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಶಿಕಾರಿಪುರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಬಿರುಸಿನ ಮತ ಯಾಚಿಸುತ್ತಿದ್ದಾರೆ.
ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯಿತ ಸಮುದಾಯದ ನಂತರ ಬಂಜಾರ ಸಮುದಾಯ ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ , ಆ ಮತಗಳ ಬೆಂಬಲ ಪಡೆಯಲು ಯತ್ನಿಸುತ್ತಿದ್ದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರುಬ ಸಮುದಾಯಗಳ ಮೇಲೆ ಕಣ್ಣಿಟ್ಟಿದ್ದಾರೆ.
ಮಂಗಳ ಭವನದಲ್ಲಿ ಆಯೋಜಿಸಿದ್ದ ಲಂಬಾಣಿ ಮತ್ತು ಬಂಜಾರ ಸಮುದಾಯದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ, ಮೈತ್ರಿ ಸರ್ಕಾರದಲ್ಲಿ ಬಂಜಾರ ಸಮುದಾಯದ ಯಾವುದೇ ಶಾಸಕರನ್ನು ಸಚಿವರನ್ನಾಗಿ ಮಾಡಿಲ್ಲ ಎಂದು ಆರೋಪಿಸಿದರು.
ಈಡಿಗ, ಒಕ್ಕಲಿಗ, ಮತ್ತು ಮುಸ್ಲಿಂ ಮತಗಳ ನೆರವಿನಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರೂ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಶಾಸಕರು ಶೋಷಣೆ ಅನುಭವಿಸುತ್ತಿದ್ದಾರೆ. ಆದರೆ , ಬಿಜೆಪಿ ಹಾಗೇ ಇಲ್ಲ, ಎಲ್ಲರನ್ನೂ ಸಮಾನವಾಗಿ ಕಾಣಲಾಗುತ್ತದೆ ಎಂದು ಬಿಜೆಪಿ ಹಿರಿಯ ನಾಯಕ ಕೆ. ಎಸ್. ಈಶ್ವರಪ್ಪ ಹೇಳಿದರು.
ಈ ಮಧ್ಯೆ ಕನಕ ಪೀಠ ಸ್ಥಾಪನೆ ವಿಚಾರದಲ್ಲಿ ಆಸಕ್ತಿ ತೋರದ ಈಶ್ವರಪ್ಪ ವಿರುದ್ಧ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ - ಜೆಡಿಎಸ್ ನಾಯಕರ ತಂಡ ವಾಗ್ದಾಳಿ ನಡೆಸಿತು. ಈ ಸಂಬಂಧ ನಡೆದ ಸಭೆಯಲ್ಲಿ ಈಶ್ವರಪ್ಪ ಒಂದು ಬಾರಿಯೂ ಪಾಲ್ಗೊಂಡಿಲ್ಲ. ಹಿಂದುಳಿದ ವರ್ಗದವರ ಅಭಿವೃದ್ದಿಗಾಗಿ ಯಡಿಯೂರಪ್ಪ ಏನೂ ಮಾಡಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದರು.