ಹವಾಲಾ ದಂಧೆಯಲ್ಲಿ ಭಾಗಿಯಾಗಿಲ್ಲ, ಹೆದರಿ ಏಲ್ಲಿಯೂ ಓಡಿ ಹೋಗಲ್ಲ: ಡಿಕೆ ಶಿವಕುಮಾರ್

2019ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ತಮ್ಮ ವಿರುದ್ಧ ಷಡ್ಯಂತ್ರ ರೂಪಿಸಿದ್ದು, ಜಾರಿ ನಿರ್ದೇಶನಾಲಯದಲ್ಲಿ ಪ್ರಕರಣ ದಾಖಲಿಸಲು ಪ್ರಯತ್ನಸುತ್ತಿದೆ ಎಂದು ಜಲ ಸಂಪನ್ಮೂಲ ಸಚಿವ...
ಡಿ. ಕೆ. ಶಿವಕುಮಾರ್
ಡಿ. ಕೆ. ಶಿವಕುಮಾರ್
ಬೆಂಗಳೂರು: 2019ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ತಮ್ಮ ವಿರುದ್ಧ ಷಡ್ಯಂತ್ರ ರೂಪಿಸಿದ್ದು, ಜಾರಿ ನಿರ್ದೇಶನಾಲಯದಲ್ಲಿ ಪ್ರಕರಣ ದಾಖಲಿಸಲು ಪ್ರಯತ್ನಸುತ್ತಿದೆ  ಎಂದು ಜಲ ಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ಜಾರಿ ನಿರ್ದೇಶನಾಲಯದಲ್ಲಿ  ತಮ್ಮ ವಿರುದ್ದದ ಪ್ರಕರಣ  ಕುರಿತು ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಡಿ. ಕೆ. ಶಿವಕುಮಾರ್ , ಆಹಾರದ ಸಮಸ್ಯೆಯಿಂದಾಗಿ  ಆಸ್ಪತ್ರೆಗೆ ದಾಖಲಾಗಿದ್ದೆ. ಏಲ್ಲಿಯೂ ಓಡಿ ಹೋಗಿಲ್ಲ.  ಜಾರಿ ನಿರ್ದೇಶನಾಲಯದಿಂದ ನಾನು ಯಾವುದೇ ನೋಟಿಸ್ ಪಡೆದಿಲ್ಲ. ಕಾನೂನು ಗೌರವಿಸುವ ನಾಗರಿಕನಾಗಿದ್ದು, ಯಾವಾಗಲೂ  ತನಿಖಾ ಸಂಸ್ಥೆಗಳೊಂದಿಗೆ ಸಹಕರಿಸಿದ್ದೇನೆ. ಯಾವುದೇ ರೀತಿಯ ಪರಿಣಾಮಗಳನ್ನು ಎದುರಿಸಲು ತಾನೂ ಸಿದ್ದವಿರುವುದಾಗಿ ಹೇಳಿದರು.

ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ  ರಾಜ್ಯ ಸರ್ಕಾರವನ್ನು ಅಭದ್ರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ.ಕಾಂಗ್ರೆಸ್ ಪಕ್ಷದ ವರ್ಚಸ್ಸು  ಹಾಳು ಮಾಡಲು ಯತ್ನಿಸುತ್ತಿದೆ ಎಂದು ಆರೋಪಿಸಿದ ಡಿ. ಕೆ. ಶಿವಕುಮಾರ್,  ಬಿಜೆಪಿ ಸರ್ಕಾರ ರಚನೆ ಕನಸಿನ ಮಾತು ಎಂದರು.
ನಾನು ಯಾರನ್ನು ಕೊಲೆ ಮಾಡಿಲ್ಲ, ಯಾವುದೇ ಅಪರಾಧ ಮಾಡಿಲ್ಲ,  ಹವಾಲ ದಂಧೆಯಲ್ಲಿ ಭಾಗಿಯಾಗಿಲ್ಲ.  ಇಡಿ ಏಕೆ ಬಂಧಿಸುತ್ತದೆ ಎಂದು ಪ್ರಶ್ನಿಸಿದ ಡಿ. ಕೆ. ಶಿವಕುಮಾರ್, ಪರೋಕ್ಷವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಬಿಜೆಪಿ ಸ್ವಾಯತ್ತ ಸಂಸ್ಥೆಯನ್ನು ಹಾಳು ಮಾಡಲು ಪ್ರಯತ್ನಿಸುತ್ತಿದೆ. ನಾನು ಯಾವುದಕ್ಕೂ ಬಗ್ಗುವುದಿಲ್ಲ, ಎಲ್ಲಿಯೂ ಓಡಿ ಹೋಗುವ ಹೇಡಿಯಲ್ಲ. ಸೂಕ್ತ ಸಮಯದಲ್ಲಿ ದೇಶದ ಜನತೆಗೆ ಎಲ್ಲ ವಿಷಯವನ್ನು ಬಹಿರಂಗಪಡಿಸುವುದಾಗಿ ಹೇಳಿದರು.ದಾಳಿ ಸಂದರ್ಭದಲ್ಲಿ ದೊರೆತ 41 ಲಕ್ಷ ರೂ. ಗೆ ಸೂಕ್ತ ದಾಖಲೆ ನೀಡುವುದಾಗಿ ಹೇಳಿದರು.

ಬಿಜೆಪಿ ಸರ್ಕಾರ ರಚನೆಗೆ ಅಡ್ಡಿಯಾಗಿರುವುದರಿಂದ  ಇಡಿ ಬಳಸಿಕೊಳ್ಳುವ ಮೂಲಕ ಬಿಜೆಪಿ ತಮ್ಮನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಆರೋಪಿಸಿದ ಡಿ.ಕೆ. ಶಿವಕುಮಾರ್, ಆಪರೇಷನ್ ಕಮಲದ ಬಗ್ಗೆ ಎಲ್ಲವೂ ಗೊತ್ತಿದೆ. ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಎಷ್ಟು ಹಣ ಕೊಟ್ಟಿದೆ ಎಂಬುದು ಗೊತ್ತಿದೆ. ಆಫರ್ ಪಡೆದ ಶಾಸಕರೇ ಎಲ್ಲವನ್ನೂ ಬಹಿರಂಗಪಡಿಸಲಿದ್ದಾರೆ. ಸೂಕ್ತ ಸಂದರ್ಭದಲ್ಲಿ ಆಪರೇಷನ್ ಕಮಲದ ಇಂಚಿಂಚು ಮಾಹಿತಿಯನ್ನು ಬಯಲಿಗೆಳೆಯುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಇದಕ್ಕೂ ಮುನ್ನ ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಸಂದೀಪ್ ಪಾತ್ರ,  ಹವಾಲಾ ದಂಧೆ, ಭ್ರಷ್ಟಾಚಾರ ಕಾಂಗ್ರೆಸ್ ಪಕ್ಷದ ಪ್ರಮುಖ ಆಧಾರವಾಗಿದ್ದು, ಡಿ. ಕೆ. ಶಿವಕುಮಾರ್ ಎಷ್ಟು ಹಣವನ್ನು ಎಐಸಿಸಿಗೆ ಪಾವತಿಸಿದ್ದಾರೆ ಎಂಬ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಹೇಳಿದ್ದಾರೆ. ನೋಟು ಅಮಾನ್ಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಏಕೆ ಕಣ್ಣೀರು ಹಾಕುತಿತ್ತು ಎಂದು ಟೀಕಿಸಿದ್ದರು.
2017 ಆಗಸ್ಟ್  ತಿಂಗಳಲ್ಲಿ ಡಿ. ಕೆ. ಶಿವಕುಮಾರ್ ಹಾಗೂ ಅವರ ಆಪ್ತರ ಮನೆ  ದಾಳಿ ಹಾಗೂಹಣ ವರ್ಗಾವಣೆ ಪ್ರಕರಣದಲ್ಲಿ  ಡಿ. ಕೆ. ಶಿವಕುಮಾರ್ ಹಾಗೂ ಆವರ ಆಪ್ತ ಹಾಗೂ ಇಬ್ಬರು ಸರ್ಕಾರಿ ನೌಕರರ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com