ಅತಿವೃಷ್ಠಿ ಪರಿಹಾರ ವಿತರಣೆಯಲ್ಲಿ ಅತೀವ ನಿರ್ಲಕ್ಷ್ಯ: ಅಧಿಕಾರಿಗಳ ವಿರುದ್ಧ ಸಿಎಂ ಯಡಿಯೂರಪ್ಪ ಗರಂ

ಬರ ಪರಿಹಾರ ಕಾಮಗಾರಿಯಲ್ಲಿ ಅತೀವ ನಿರ್ಲಕ್ಷ್ಯ ತೋರಿರುವ ಅಧಿಕಾರಿಗಳ ಮೇಲೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಗದಾ ಪ್ರಹಾರ ಮಾಡಿದ್ದಾರೆ.
ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ

ಬೆಂಗಳೂರು: ಬರ ಪರಿಹಾರ ಕಾಮಗಾರಿಯಲ್ಲಿ ಅತೀವ ನಿರ್ಲಕ್ಷ್ಯ ತೋರಿರುವ ಅಧಿಕಾರಿಗಳ ಮೇಲೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಗದಾ ಪ್ರಹಾರ ಮಾಡಿದ್ದಾರೆ.
 
ರಾಜ್ಯದಲ್ಲಿ ಗಂಭೀರ ಸಮಸ್ಯೆಗಳಿದ್ದರೂ ಸಹ ಪ್ರತಿ ತಿಂಗಳು ಕಾರ್ಯದರ್ಶಿ ಮಟ್ಟದ ಅಧಿಕಾರಿಗಳ ಸಭೆ ಕರೆಯುತ್ತಿಲ್ಲ. ನಿಯಮಿತವಾಗಿ ಪ್ರಗತಿ ಪರಿಶೀಲನೆ ಆಗುತ್ತಿಲ್ಲ. ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಸರಾಗವಾಗಿ  ನಡೆಯುತ್ತಿಲ್ಲ. ಇಂತಹ ಗಂಭೀರ ಲೋಪ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. 

ವಿಧಾನಸೌಧದಲ್ಲಿ ನಡೆದ ಪ್ರಧಾನ ಕಾರ್ಯದರ್ಶಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಕಾರ್ಯದರ್ಶಿಗಳ ಸಭೆಯಲ್ಲಿ ಯಡಿಯೂರಪ್ಪ ತಮ್ಮ ಅಸಮಾಧಾನ ಹೊರಹಾಕಿದರು. ನಮ್ಮ ಸರ್ಕಾರ ರಚನೆಯಾದ ನಂತರ ಚುನಾವಣೆ ಮತ್ತಿತರ ಕಾರಣಗಳಿಗೆ ಸರ್ಕಾರದ ಸ್ಥಿರತೆ ಬಗ್ಗೆ ನಿಮಗೆಲ್ಲರಿಗೂ ಅನುಮಾನವಿತ್ತು. ಈಗ ಅದೆಲ್ಲ ಬಗೆಹರಿದಿದೆ. ಇನ್ನು ಮುಂದೆ ಉತ್ತಮವಾಗಿ ಕಾರ್ಯನಿರ್ವಹಿಸಿ. ಜನರ ಸಂಕಷ್ಟಕ್ಕೆ ಸ್ಪಂದಿಸಿ ಎಂದು ಸೂಚಿಸಿದ್ದಾರೆ. 

ತಾಲೂಕು ಮಟ್ಟದಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಆರೋಪವಿದ್ದು, ಮೊದಲು ಆಡಳಿತದಲ್ಲಿ ಬಿಗಿ ತರಬೇಕಾಗಿದೆ. ಅತಿವೃಷ್ಟಿ, ಪ್ರವಾಹ ಸಂದರ್ಭದಲ್ಲಿ ಅಧಿಕಾರಿಗಳು ಕೈಗೊಂಡ ಕಾರ್ಯ ಶ್ಲಾಘನೀಯ. ಅತಿವೃಷ್ಟಿ ಪರಿಹಾರ ಕಾಮಗಾರಿಗಳಿಗಾಗಿ ಹೆಚ್ಚಿನ ಅನುದಾನ ಬೇಕಾಗಿದ್ದು, ಹಣ ಒದಗಿಸಲು ಸರ್ಕಾರ ಸಿದ್ಧವಾಗಿದೆ. ನಿಗದಿಯಂತೆ ಕಾರ್ಯದರ್ಶಿಗಳು ಇಲಾಖಾವಾರು ಸಭೆ ನಡೆಸಬೇಕು. ಅಧಿಕಾರಿಗಳು ಹಣಕಾಸಿನ ಖರ್ಚು, ವೆಚ್ಚಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಆದರೆ ಭೌತಿಕವಾಗಿ ಆಗಿರುವ ಅಭಿವೃದ್ಧಿ ಬಗ್ಗೆ ವಿವರ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪರಿಹಾರ ವಿತರಣೆಗಾಗಿ ಸಾಕಷ್ಟು ಪ್ರಮಾಣದಲ್ಲಿ ಆರ್ಥಿಕ ಸಂಪನ್ಮೂಲ ಒದಗಿಸಿದ್ದರೂ ಸಹ ಸಹ ಬೆಳೆ ಪರಿಹಾರ ಸರಿಯಾಗಿ ವಿತರಣೆಯಾಗಿಲ್ಲ. ಮಾಧ್ಯಮಗಳಲ್ಲಿ ಈ ಬಗ್ಗೆ ವ್ಯಾಪಕ ಟೀಕೆಗಳು ಬರುತ್ತಿವೆ. ಹಾಗಾಗಿ ವಾಸ್ತವಿಕ ಪರಿಸ್ಥಿತಿ ಏನು ಎಂಬುದನ್ನು ತಿಳಿದುಕೊಂಡು ಎಲ್ಲಿ ಕೊರತೆ ಇದೆಯೋ ಅಲ್ಲಿ ಸರಿಪಡಿಸಬೇಕು. ಸರ್ಕಾರಿ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು ಎಂದು ಕರೆ ನೀಡಿದರು.

ಮುಖ್ಯ ಕಾರ್ಯದರ್ಶಿಗಳು ತಿಂಗಳಿಗೊಮ್ಮೆ ಜಿಲ್ಲಾ ಪ್ರವಾಸ ಮಾಡಬೇಕು ಎಂದು ಈ ಮೊದಲೇ ಸೂಚನೆ‌ ನೀಡಿದ್ದೇನೆ. ಜೊತೆಗೆ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಹದಿನೈದು ದಿನಗಳಿಗೆ ಒಮ್ಮೆಯಾದರೂ ಜಿಲ್ಲೆಗಳಿಗೆ ಭೇಟಿ ಕೊಟ್ಟು, ಪ್ರಗತಿ ಪರಿಶೀಲನೆ ಮಾಡಬೇಕು. ಇವೆಲ್ಲವೂ ಇನ್ನು ಮುಂದೆ ಸರಿಯಾಗಿ ನಡೆಯಬೇಕು. ಜತೆಗೆ ಅಧಿಕಾರಿಗಳು ಜಿಲ್ಲೆಯ ಕುಂದು ಕೊರತೆಗಳ ಬಗ್ಗೆ ವರದಿ ನೀಡುವುದು ಕಡ್ಡಾಯ ಎಂದು ಯಡಿಯೂರಪ್ಪ ಹೇಳಿದರು. 
ಸಭೆಯಲ್ಲಿ ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಸಭೆ ಜರುಗಿತು. 

ಉಪಮುಖ್ಯಮಂತ್ರಿಗಳಾದ  ಡಾ:ಸಿ.ಎನ್.ಅಶ್ವಥನಾರಾಣ್, ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ , ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಕಂದಾಯ ಸಚಿವ ಆರ್.ಅಶೋಕ್, ವಸತಿ ಸಚಿವ ವಿ.ಸೋಮಣ್ಣ,  ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ, ಕೌಶಲ್ಯಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಹೆಚ್.ನಾಗೇಶ್, ಪಶುಸಂಗೋಪನಾ ಇಲಾಖೆ ಸಚಿವ  ಪ್ರಭು ಚೌಹಾಣ್,   ಮುಖ್ಯ ಕಾರ್ಯದರ್ಶಿ ಟಿ. ಎಂ.ವಿಜಯಭಾಸ್ಕರ್, ಮುಖ್ಯಮಂತ್ರಿಗಳ ಸಲಹೆಗಾರ ಎಂ.ಲಕ್ಷ್ಮಿ ನಾರಾಯಣ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com