

ಬಾಗಲಕೋಟೆ: 54 ವರ್ಷದೊಳಗಿನವರನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಬೇಕು ಎನ್ನುವ ನಿಯಮವನ್ನು ಶಿರಸಾ ವಹಿಸಿ ಪಾಲಿಸಲು ಬಿಜೆಪಿ ಜಿಲ್ಲಾ ಕೋರ್ ಕಮೀಟಿ ನಿರ್ಧರಿಸಿ, ಅದಾಗಲೇ ಐವರ ಹೆಸರನ್ನು ಪಕ್ಷದ ರಾಜ್ಯ ಕಮೀಟಿಗೆ ಶಿಫಾರಸು ಮಾಡಿದೆ.
ಪಕ್ಷದ ಜಿಲ್ಲಾಧ್ಯಕ್ಷರ ನೇಮಕ ಸೇರಿದಂತೆ ನಾನಾ ವಿಷಯಗಳ ಕುರಿತು ಚರ್ಚಿಸಲು ಬಾಗಲಕೋಟೆ ಜಿಲ್ಲಾ ಬಿಜೆಪಿ ಕೋರ್ ಕಮೀಟಿ ಸಭೆ ಸೇರಿದ್ದ ವೇಳೆ ಎಪ್ಪತ್ತರ ಹರೆಯದ ಮುಖಂಡರೂ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು ಸಭೆಗೆ ಆಗಮಿಸಿದ್ದರು.
ಸಭೆಯಲ್ಲಿ ಜಿಲ್ಲಾಧ್ಯಕ್ಷರ ಆಯ್ಕೆ ಕುರಿತಂತೆ ಚರ್ಚೆ ಆರಂಭಗೊಂಡಾಗ, ಪಕ್ಷದ ರಾಜ್ಯ ಘಟಕವು ಜಿಲ್ಲಾಧ್ಯಕ್ಷರ ನೇಮಕಕ್ಕೆ ಕೆಲ ಷರತ್ತುಗಳನ್ನುವ ವಿಧಿಸಿದೆ. ಆ ಷರತ್ತುಗಳ ಪ್ರಕಾರವೇ ಅಧ್ಯಕ್ಷರ ಆಯ್ಕೆಗೆ ಮುಖಂಡರು ಹೆಸರು ಶಿಫಾರಸ್ಸು ಮಾಡಲಾಗುವುದು ಎಂದು “ಷರತ್ತು”ಗಳನ್ನು ಸಭೆಯ ಮುಂದಿಟ್ಟಾಗ, ಜಿಲ್ಲಾಧ್ಯಕ್ಷ ಸ್ಥಾನ ತಮಗೆ ಸಿಕ್ಕುವುದಿಲ್ಲ ಎಂದು ಅರಿತ ಕೆಲ ಮುಖಂಡರು ನಾನಾ ನೆಪಗಳನ್ನು ಹೇಳಿ ಸಭೆಯಿಂದ ನಿರ್ಗಮಿಸಿದ್ದರು.
ಜಿಲ್ಲಾಧ್ಯಕ್ಷರಾಗಬಯಸುವವರು 54 ವರ್ಷದ ಒಳಗಿನವರಿರಬೇಕು. ಪ್ರಬಲ ಸಮದಾಯಗಳಿಗೆ ಸೇರಿದವರಾಗಿರಬೇಕು. ಸಂಘಟನಾ ಸಾಮರ್ಥ್ಯ ಉಳ್ಳವರಾಗಿರಬೇಕು ಎನ್ನುವುದು ಸೇರಿದಂತೆ ನಾನಾ ನಿಯಮಗಳನ್ನು ಕೇಳಿ ಒಬ್ಬೊಬ್ಬರೆ ಸಭೆಯಿಂದ ಹೊರ ನಡೆದಿದ್ದರು.
54ರೊಳಗಿನವರ ಪಟ್ಟಿಯಲ್ಲಿ ಎಸ್.ಟಿ. ಪಾಟೀಲ, ಮಹಾಂತೇಶ ಕೋಲ್ಕಾರ್, ಮೋಹನ ಜಾಧವ, ಮೇಲ್ಮನೆ ಸದಸ್ಯ ಎಚ್.ಆರ್. ನಿರಾಣಿ ಮತ್ತು ಮಹಾಂತೇಶ ಮಮದಾಪುರ ಇದ್ದಾರೆ. ಈ ಐವರಲ್ಲಿಯೇ ಯಾರನ್ನು ಅಧ್ಯಕ್ಷ ಗಾದಿಗೆ ಕೂಡ್ರಿಸಬೇಕು ಎನ್ನುವ ಕುರಿತು ಜಿಲ್ಲೆಯ ಬಿಜೆಪಿ ಶಾಸಕರಲ್ಲಿ ಒಮ್ಮತವಿಲ್ಲದಾಗಿದೆ.
ಒಬ್ಬೊಬ್ಬ ಶಾಸಕರೂ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಬೆಂಬಲಿಗರ ಹೆಸರನ್ನು ಸೂಚಿಸಿದ್ದಾರೆ. ಹೆಸರು ಸೂಚನೆ ಬಳಿಕ ಬಣ ರಾಜಕಾರಣ ಆರಂಭಗೊಂಡಿದೆ. ಕೆಲ ಶಾಸಕರು ಮಹಾಂತೇಶ ಮಮದಾಪುರ ಹೆಸರನ್ನು ಸೂಚಿಸುತ್ತಿದ್ದರೆ, ಇನ್ನೂ ಕೆಲವರು ಮಹಾಂತೇಶ ಕೋಲ್ಕಾರ್ ಹೆಸರು ಹೇಳುತ್ತಿದ್ದಾರೆ. ಶಾಸಕ ಮುರಗೇಶ ನಿರಾಣಿ ಅವರು ತಮ್ಮ ಬೆಂಬಲಿಗ ಮೋಹನ ಜಾಧವ ಅವರ ಹೆಸರನ್ನು ಸೂಚಿಸಲಿದ್ದಾರೆ ಎನ್ನಲಾಗುತ್ತಿದ್ದರೂ ಈಗಾಗಲೇ ಜಾಧವ ಅವರ ವಿಷಯದಲ್ಲಿ ಒಂದು ಬಾರಿ ಕೈ ಸುಟ್ಟುಕೊಂಡಿದ್ದಾರೆ ಎನ್ನುವುದು ಗಮನಾರ್ಹ.
ಮುಂಬರುವ ದಿನಗಳಲ್ಲಿ ಪಕ್ಷವನ್ನು ಹಿಡಿತದಲ್ಲಿಟ್ಟುಕೊಳ್ಳಲು ತಮ್ಮ ಬೆಂಬಲಿಗರೇ ಜಿಲ್ಲಾಧ್ಯಕ್ಷರಾಗಬೇಕು ಎನ್ನುವ ಇರಾದೆಯನ್ನು ಶಾಸಕರು ಹೊಂದಿದ್ದಾರೆ. ಶಿಫಾರಸುಗೊಂಡಿರುವ ಹೆಸರುಗಳ ಪೈಕಿ ಹೆಚ್ಚು ಜನ ಶಾಸಕರು, ಮಾಜಿ ಶಾಸಕರು ಯಾರ ಪರ ನಿಲ್ಲಲಿದ್ದಾರೋ ಅವರು ಅಧ್ಯಕ್ಷರಾಗಲಿದ್ದಾರೆ. ಇಷ್ಟರಲ್ಲೇ ಬಾಗಲಕೋಟೆ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರ ಹೆಸರನ್ನು ಪಕ್ಷದ ರಾಜ್ಯ ಘಟಕ ಪ್ರಕಟಿಸಲಿದೆ ಎನ್ನುವ ವಿಶ್ವಾಸವನ್ನು ಬಿಜೆಪಿ ಮುಖಂಡರು ವ್ಯಕ್ತಪಡಿಸುತ್ತಿದ್ದಾರೆ.
-ವಿಠ್ಠಲ ಆರ್. ಬಲಕುಂದಿ