

ನವದೆಹಲಿ: ಪೂರ್ವ ಉತ್ತರ ಪ್ರದೇಶದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಹೊಸದಾಗಿ ಜವಾಬ್ದಾರಿ ವಹಿಸಿಕೊಂಡಿರುವ ಪ್ರಿಯಾಂಕಾ ಗಾಂಧಿ ಲೋಕಸಭೆ ಚುನಾವಣೆಗೆ ಮುನ್ನ ಕರ್ನಾಟಕದಲ್ಲಿ ಕೂಡ ಪ್ರಚಾರ ನಡೆಸಬಹುದು ಎಂದು ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಹೆಚ್ ಕೆ ಪಾಟೀಲ್ ಹೇಳಿದ್ದಾರೆ.
ಲೋಕಸಭೆ ಚುನಾವಣೆಗೆ ಪ್ರಚಾರ ಕಾರ್ಯ ಸದ್ಯದಲ್ಲಿಯೇ ಆರಂಭವಾಗಲಿದ್ದು ದಿನಾಂಕವನ್ನು ಸದ್ಯದಲ್ಲಿಯೇ ಘೋಷಿಸಲಾಗುವುದು ಎಂದು ಹೇಳಿದರು. ನಮ್ಮ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿಯವರು ರಾಜ್ಯಕ್ಕೆ ಆಗಮಿಸಿ ಪ್ರಚಾರ ಕೈಗೊಳ್ಳುತ್ತಾರೆ. ಪ್ರಿಯಾಂಕಾ ಗಾಂಧಿಯವರನ್ನು ಸಹ ಕರೆಯುತ್ತೇವೆ ಎಂದು ಹೆಚ್ ಕೆ ಪಾಟೀಲ್ ನಿನ್ನೆ ದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಚುನಾವಣೆಗೆ ಮುನ್ನ ಪಕ್ಷದ ಪ್ರಣಾಳಿಕೆಯ ಕೆಲಸ ನಡೆಯುತ್ತಿದ್ದು ಚುನಾವಣಾ ಪ್ರಚಾರಕ್ಕಾಗಿ ಇರುವ ಎಲ್ಲಾ ಸಮಿತಿಗಳು ಸಿದ್ದವಾಗಿವೆ ಎಂದರು.
ಸ್ವಾತಂತ್ರ್ಯಾ ನಂತರದ ರಾಜಕೀಯ ಸ್ಥಿತ್ಯಂತರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೂ, ಗಾಂಧಿ ಮನೆತನಕ್ಕೂ ಕರ್ನಾಟಕ ರಾಜ್ಯಕ್ಕೂ ಬಹಳ ನಂಟಿದೆ.
1999ರಲ್ಲಿ ಪ್ರಿಯಾಂಕಾ ಗಾಂಧಿ ಕರ್ನಾಟಕದ ಬಳ್ಳಾರಿಗೆ ತಮ್ಮ ತಾಯಿ ಸೋನಿಯಾ ಗಾಂಧಿಯವರೊಂದಿಗೆ ಆಗಮಿಸಿ ಪ್ರಚಾರ ನಡೆಸಿದ್ದರು. ಆಗ ಸೋನಿಯಾ ಗಾಂಧಿ ಸುಷ್ಮಾ ಸ್ವರಾಜ್ ವಿರುದ್ಧ ನಿಂತು ಗೆದ್ದಿದ್ದರು.
2015ರಲ್ಲಿ ಬಿಜೆಪಿ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಎಲ್ಲಿ ವಿಫಲವಾಗಿದೆ ಎಂಬುದನ್ನು ರಾಜ್ಯದ ಜನತೆಗೆ ತಿಳಿಸುವುದು ಈ ಚುನಾವಣಾ ಪೂರ್ವ ಪ್ರಚಾರದ ಮುಖ್ಯ ವಿಷಯವಾಗಲಿದೆ ಎಂದು ಹೆಚ್ ಕೆ ಪಾಟೀಲ್ ತಿಳಿಸಿದರು.