ಸರ್ಕಾರ ಸುಭದ್ರವಾಗಿದ್ದು, 5 ವರ್ಷ ಪೂರೈಸುತ್ತದೆ: ಡಾ ಜಿ ಪರಮೇಶ್ವರ್

ಸರ್ಕಾರ ಸುಭದ್ರವಾಗಿದೆ, ಯಾವುದೇ ಸಂತೋಷದ ಸುದ್ದಿಯಿದ್ದರೂ ನಾವು ಜನರ ಜೊತೆ ಹಂಚಿಕೊಳ್ಳುತ್ತೇವೆ...
ಡಾ ಜಿ ಪರಮೇಶ್ವರ್
ಡಾ ಜಿ ಪರಮೇಶ್ವರ್

ತುಮಕೂರು: ಸರ್ಕಾರ ಸುಭದ್ರವಾಗಿದೆ, ಯಾವುದೇ ಸಂತೋಷದ ಸುದ್ದಿಯಿದ್ದರೂ ನಾವು ಜನರ ಜೊತೆ ಹಂಚಿಕೊಳ್ಳುತ್ತೇವೆ. ಸರ್ಕಾರ ಅಸ್ಥಿರ ಮಾಡಿ ಮೈತ್ರಿಕೂಟವನ್ನು ಮುರಿಯಲು ಬಿಜೆಪಿ ಯತ್ನಿಸಿದರೆ ಅದು ಯಶಸ್ವಿಯಾಗುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.

ತುಮಕೂರಿನಲ್ಲಿಂದು ಸಿದ್ದಗಂಗಾ ಮಠದ ಡಾ ಶಿವಕುಮಾರ ಸ್ವಾಮೀಜಿಗಳ ಆರೋಗ್ಯ ವಿಚಾರಿಸಿಕೊಂಡು ಬಂದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು,  ಈ ಮೈತ್ರಿ ಸರ್ಕಾರ ಸುಭದ್ರವಾಗಿದೆ, ಮುಖ್ಯಮಂತ್ರಿಗಳು ಕೂಡ ಸುಭದ್ರವಾಗಿದ್ದಾರೆ. ಸರ್ಕಾರ 5 ವರ್ಷ ಪೂರೈಸಲಿದೆ ಎಂದು ಹೇಳಿದರು.

ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕ ವಿಚಾರದಲ್ಲಿ ಕಾಂಗ್ರೆಸ್ ನ ಮೂಲ ಕಾರ್ಯಕರ್ತರನ್ನು ನಿರ್ಲಕ್ಷಿಸಲಾಗಿದೆ ಎಂಬ ಆರೋಪಗಳ ಕುರಿತು ಕೇಳಿದಾಗ ಪ್ರತಿಕ್ರಿಯಿಸಿದ ಡಾ ಪರಮೇಶ್ವರ್, ಕಾರ್ಯಕರ್ತರಿಗೆ ನಿಗಮ ಮಂಡಳಿಯಲ್ಲಿ ಸ್ಥಾನಮಾನ ನೀಡುವ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ಎರಡೂ ಪಕ್ಷದ ಶಾಸಕರಿಗೆ 30 ನಿಗಮ ಮಂಡಳಿಗಳನ್ನು ಗುರುತಿಸಿ ಅಂದರೆ ಶಾಸಕರಿಗೆ ಇಂತಹ ನಿಗಮ ಮಂಡಳಿಗಳಲ್ಲಿ ಅಧ್ಯಕ್ಷ ಸ್ಥಾನ ನೀಡಬಹುದು ಎಂದು ಅವರ ಅಂತಸ್ತಿಗೆ ತಕ್ಕಂತೆ ಗುರುತಿಸಿದೆವು. ಸಮನ್ವಯ ಸಮಿತಿಯಲ್ಲಿ ನಾನು ಮತ್ತು ಜೆಡಿಎಸ್ ನ ಡ್ಯಾಲಿಶ್ ಆಲಿಯವರು ಕುಳಿತು ಚರ್ಚೆ ಮಾಡಿ 20 ನಿಗಮ ಮಂಡಳಿ ಕಾಂಗ್ರೆಸ್ ಗೆ ಮತ್ತು 10 ನಿಗಮ ಮಂಡಳಿ ಜೆಡಿಎಸ್ ಗೆ ಎಂದು ತೀರ್ಮಾನಿಸಿ ಅವುಗಳಲ್ಲಿ ಯಾವುದು ಕಾಂಗ್ರೆಸ್ ಗೆ ಮತ್ತು ಯಾವುದು ಜೆಡಿಎಸ್ ಗೆ ಎಂದು ತೀರ್ಮಾನ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಅದರ ಪ್ರಕಾರ, ನಮ್ಮ ಪಕ್ಷದಲ್ಲಿ ಸಿದ್ದರಾಮಯ್ಯನವರು, ನಾನು, ದಿನೇಶ್ ಗುಂಡೂರಾವ್ ಮತ್ತು ರಾಜ್ಯ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಅವರು ಕುಳಿತು ಚರ್ಚಿಸಿ ನಮ್ಮ ಭಾಗಕ್ಕೆ ಬಂದಿರುವ 20 ಸ್ಥಾನಗಳನ್ನು ನಮ್ಮ ಶಾಸಕರಿಗೆ ನೀಡಿದ್ದೇವೆ. ತಾಂತ್ರಿಕ ಕಾರಣಗಳಿಂದ ಘೋಷಿಸದಿದ್ದ ಮೂರ್ನಾಲ್ಕು ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಗಳನ್ನು ನಂತರ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಸೇರಿದ 10 ಸ್ಥಾನಗಳನ್ನು ಅವರು ತೀರ್ಮಾನ ಮಾಡಬೇಕು, ಇದರಲ್ಲಿ ಯಾವುದೇ ಗೊಂದಲಗಳಿಲ್ಲ ಎಂದರು.

ಲೋಕಸಭೆ ಚುನಾವಣೆಯನ್ನು ನಾವು ಮತ್ತು ಜೆಡಿಎಸ್ ನವರು ಒಟ್ಟಿಗೆ ಎದುರಿಸಲಿದ್ದೇವೆ. ಆದರೆ ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧಿಸುತ್ತಾರೆ ಎನ್ನುವುದನ್ನು ಇನ್ನೂ ತೀರ್ಮಾನ ಮಾಡಿಲ್ಲ.

ಅನಾರೋಗ್ಯದಿಂದಿರುವ ಸಿದ್ದಗಂಗಾ ಶಿವಕುಮಾರ ಶ್ರೀಗಳನ್ನು ಭೇಟಿ ಮಾಡಿದ ಅವರು,  ಶ್ರೀಗಳ ಆರೋಗ್ಯ ಸ್ಥಿರವಾಗಿದ್ದು, ಆತಂಕಪಡಬೇಕಿಲ್ಲ. ಸೋಂಕು ತಗಲುವ ಹಿನ್ನಲೆಯಲ್ಲಿ ಯಾರನ್ನೂ ಭೇಟಿ ಮಾಡಲು ಬಿಡುತ್ತಿಲ್ಲ. ಭಕ್ತಾದಿಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.

ಶ್ರೀಗಳನ್ನು ಆಸ್ಪತ್ರೆಯಿಂದ ಮಠಕ್ಕೆ ಶಿಫ್ಟ್ ಮಾಡಿದಾಗ ಇದ್ದಾಗಿನ ಆರೋಗ್ಯ ಪರಿಸ್ಥಿತಿಯೇ ಈಗಲೂ ಇದೆ. ಕೃತಕ ಉಸಿರಾಟದ ವ್ಯವಸ್ಥೆಯೂ ಮಾಡಲಾಗಿದೆ. ನಿನ್ನೆ ರಾತ್ರಿ ಕಣ್ಣು ಬಿಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ನಾವೆಲ್ಲರೂ ಶ್ರೀಗಳ ಆರೋಗ್ಯ ಸುಧಾರಣೆಗೆ ಭಗವಂತನಲ್ಲಿ ಪ್ರಾರ್ಥನೆ ಮಾಡುವ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com