
ಬೆಂಗಳೂರು: ಶಾಸಕ ಆನಂದ್ ಸಿಂಗ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪ್ಲಿ ಶಾಸಕ ಗಣೇಶ್ ಮೇಲೆ ಎಫ್ಐಆರ್ ದಾಖಲಾಗಿದ್ದು, ಶೀಘ್ರದಲ್ಲೇ ಅವರನ್ನು ಬಂಧಿಸುತ್ತೇವೆ. ಅಗತ್ಯ ಬಿದ್ದರೆ ಗಣೇಶ್ ಅವರನ್ನು ರೌಡಿ ಶೀಟರ್ ಪಟ್ಟಿಗೆ ಸೇರಿಸುವ ಬಗ್ಗೆಯೂ ಪರಿಶೀಲನೆ ನಡೆಸಲಾಗುವು ಎಂದು ಗೃಹ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣೇಶ್ ಅವರ ಬಂಧನ ವಿಳಂಬವಾಗಿಲ್ಲ. ಅವರನ್ನು ರಕ್ಷಿಸುವ ಯಾವುದೇ ಪ್ರಯತ್ನ ನಡೆದಿಲ್ಲ. ಪೊಲೀಸರು ಅವರ ಕೆಲಸ ಮಾಡುತ್ತಿದ್ದು, ಗಣೇಶ್ ಅವರ ಬಂಧನವಾಗಿಲ್ಲ ಎಂದ ಮಾತ್ರಕ್ಕೆ ಪೊಲೀಸರು ಏನು ಮಾಡುತ್ತಿಲ್ಲ ಎಂದು ಅರ್ಥ ಕಲ್ಪಿಸುವುದು ಸರಿಯಲ್ಲ ಎಂದರು.
ಕಾನೂನಿನಿಗಿಂತ ಯಾರೂ ದೊಡ್ಡವರಲ್ಲ. ಗಣೇಶ್ ಆನಂದ್ ಸಿಂಗ್ ಹಲ್ಲೆ ಪ್ರಕರಣದಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ. ಸರ್ಕಾರ ಹಾಗೂ ಗೃಹ ಇಲಾಖೆ ಸುಮ್ಮನೆ ಕೂರದೇ ಸೂಕ್ತ ಕಾನೂನು ಕ್ರಮ ಜರುಗಿಸಲಿದೆ. ಗೃಹ ಇಲಾಖೆ ಸರ್ಕಾರದ ಒತ್ತಡದಲ್ಲಿ ಕೆಲಸ ಮಾಡುತ್ತಿಲ್ಲ ಎಂದು ತಿಳಿಸಿದರು.
ಗಣೇಶ್ ಅವರನ್ನು ರೆಸಾರ್ಟ್ ನಿಂದ ಹೊರಗೆ ಕಳಿಸಿ ಎಫ್ಐಆರ್ ದಾಖಲು ಮಾಡಲಾಗಿದೆ ಎಂಬ ಆರೋಪಗಳನ್ನು ಅಲ್ಲಗಳೆದ ಎಂ.ಬಿ.ಪಾಟೀಲ್, ಆನಂದ್ ಸಿಂಗ್ ಹಾಗೂ ಗಣೇಶ್ ಇವರಿಬ್ಬರ ಮನಸ್ಥಿತಿ ಸರಿಯಿರಲಿಲ್ಲ. ಆಸ್ಪತ್ರೆಗೆ ಹೋಗಿ ನೋಡಿದ ಮೇಲೆಯೇ ಆನಂದ್ ಸಿಂಗ್ ಮೇಲೆ ಹಲ್ಲೆಯಾಗಿರುವುದು ತಿಳಿಯಿತು. ಶಾಸಕ ಗಣೇಶ್ ಅವರನ್ನ ಶೀಘ್ರದಲ್ಲೇ ಬಂಧಿಸಲಾಗುವುದು. ಅವರ ವಿರುದ್ಧ ರೌಡಿ ಶೀಟರ್ ತೆರೆಯುವ ಬಗ್ಗೆ ಇಲಾಖೆ ಕ್ರಮ ತೆಗೆದುಕೊಳ್ಳಲಿದೆ ಎಂದರು.
ಔರಾದ್ಕರ್ ವರದಿ ಜಾರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಂ.ಬಿ.ಪಾಟೀಲ್, ವರದಿ ಜಾರಿ ಮಾಡಲು ಪ್ರಯತ್ನ ಮಾಡಲಾಗುತ್ತಿದೆ. ಫೆಬ್ರವರಿಯಲ್ಲಿ ಮಂಡನೆಯಾಗಲಿರುವ ಆಯವ್ಯಯದಲ್ಲಿ ಸಾಧ್ಯವಾದಷ್ಟು ವರದಿಯಲ್ಲಿನ ಎಲ್ಲಾ ಅಂಶಗಳನ್ನ ಜಾರಿಮಾಡುವ ಬಗ್ಗೆ ಚಿಂತನೆ ಇದೆ. ಈ ಬಗ್ಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜೊತೆ ಚರ್ಚಿಸಿ ಮುಂದಿನ ಕ್ರಮಕ್ಕೆ ಮುಂದಾಗಲಾಗುವುದು ಎಂದು ಸ್ಷಷ್ಟಪಡಿಸಿದರು.
Advertisement