ಅಂತಿಮ ಅಸ್ತ್ರ ಕಾಮರಾಜ ಸೂತ್ರ ಮೇ ನಲ್ಲೇ ಸಿದ್ಧವಾಗಿತ್ತು! ಏನಿದು ಕಾಮರಾಜ ಸೂತ್ರ?: ಇಲ್ಲಿದೆ ಮಾಹಿತಿ

ರಾಜಕಾರಣದಲ್ಲಿ 6 ದಶಕಗಳಿಗೂ ಹೆಚ್ಚುಕಾಲ ಅನುಭವ ವಿರುವ ಹಿರಿಯ ರಾಜಕಾರಣಿ ಹೆಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಿದ್ಧಪಡಿಸಿದ್ದ ಕಾಮರಾಜ ಸೂತ್ರ ಇದೀಗ ಕೈಕೊಡುವ
ಅಂತಿಮ ಅಸ್ತ್ರ  ಕಾಮರಾಜ ಸೂತ್ರ ಮೇ ನಲ್ಲೇ ಸಿದ್ಧವಾಗಿತ್ತು
ಅಂತಿಮ ಅಸ್ತ್ರ ಕಾಮರಾಜ ಸೂತ್ರ ಮೇ ನಲ್ಲೇ ಸಿದ್ಧವಾಗಿತ್ತು
ಬೆಂಗಳೂರು: ರಾಜಕಾರಣದಲ್ಲಿ 6 ದಶಕಗಳಿಗೂ ಹೆಚ್ಚುಕಾಲ ಅನುಭವ ವಿರುವ ಹಿರಿಯ ರಾಜಕಾರಣಿ ಹೆಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಿದ್ಧಪಡಿಸಿದ್ದ ಕಾಮರಾಜ ಸೂತ್ರ ಇದೀಗ ಕೈಕೊಡುವ ಸಾಧ್ಯತೆಗಳು ದಟ್ಟವಾಗಿವೆ. 
ಮೈತ್ರಿ ಸರ್ಕಾರದ ರಕ್ಷಣೆಗಾಗಿ ತಮಿಳುನಾಡು ಮಾದರಿಯ ಕಾಮರಾಜ ಸೂತ್ರ ಬಳಸಲು ಕಳೆದ ಮೇ ನಲ್ಲಿಯೇ ಈ ಇಬ್ಬರು ನಾಯಕರು ತಂತ್ರಗಾರಿಕೆ ರೂಪಿಸಿದ್ದರು. 
ರಾಜ್ಯ ರಾಜಕಾರಣ ಅಷ್ಟೇ ಅಲ್ಲದೇ ರಾಷ್ಟ್ರ ರಾಜಕಾರಣದಲ್ಲಿ ಪಳಗಿರುವ ದೇವೇಗೌಡರು, ಮೈತ್ರಿ ಸರ್ಕಾರವನ್ನು ಸುಗಮವಾಗಿ ನಡೆಸಲು ಹಾಗೂ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆಯಾದ ಸಂದರ್ಭದಲ್ಲಿ ಯಾವ ಸೂತ್ರ ಅನುಸರಿಸಬೇಕು ಎಂಬುದನ್ನು ಮೊದಲೇ ನಿರ್ಧರಿಸಿಕೊಂಡಿದ್ದರು. ಅದೇ ಕಾಮರಾಜ ಸೂತ್ರದಂತೆ ಕಾಂಗ್ರೆಸ್;ನ 21 ಸಚಿವರ ಜೊತೆಗೆ ಜೆಡಿಎಸ್ ನ ಎಲ್ಲಾ ಸಚಿವರು ಮಂತ್ರಿ ಮಂಡಲಕ್ಕೆ ರಾಜೀನಾಮೆ ನೀಡಿದ್ದಾರೆ. ಬಂಡಾಯ ಎದ್ದಿರುವವರಿಗೆ ಸಚಿವ ಸ್ಥಾನ ನೀಡಿ ಒಲಿಸಿಕೊಳ್ಳುವುದು ಜೆಡಿಎಸ್ ನ ತಂತ್ರವಾಗಿತ್ತು. ಇದಕ್ಕೆ ಕಾಂಗ್ರೆಸ್ ಸಹ ಬೆಂಬಲ ಸೂಚಿಸಿ,  ತಮ್ಮ ಸಚಿವರಿಂದ ರಾಜೀನಾಮೆ ಕೊಡಿಸಿದೆ.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಆದಷ್ಟು ಬೇಗ ಸಂಪುಟ ಪುನಾರಚನೆ ಮಾಡುವುದಾಗಿ  ಸ್ಪಷ್ಟಪಡಿಸಿದ್ದಾರೆ. ಆದರೆ ಪಕ್ಷೇತರ ಶಾಸಕರು ಸಹ ರಾಜೀನಾಮೆ ನೀಡಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದ ಬೆಳವಣಿಗೆ ಸ್ವತಃ ಕುಮಾರಸ್ವಾಮಿ ಅವರಿಗೆ ಆಘಾತ ಮೂಡಿಸಿದೆ. ಹೀಗಾಗಿ ಕಾಮರಾಜ ಸೂತ್ರ ಇದೀಗ ಸರ್ಕಾರ ಉಳಿಸಿಕೊಳ್ಳಲು ಸಾಧ್ಯವಾಗದ ಅಸ್ತ್ರವಾಗಿದೆ. ರಾಜಕೀಯ ಬೆಳವಣಿಗೆಗಳು ಕೈ ಮೀರಿ ನಡೆಯುತ್ತಿರುವುದರಿಂದ ಕಾಮರಾಜ ಸೂತ್ರದಂತೆ ಎಲ್ಲಾ ಸಚಿವರಿಂದ ಪಡೆದಿರುವ ರಾಜೀನಾಮೆ ನಿರರ್ಥಕವಾಗುವ ಸಂಭವವಿದೆ. 
ಇಂತಹ ಕಾಮರಾಜ ಸೂತ್ರ  ಎರಡು ತಿಂಗಳ ಹಿಂದೆಯೇ ಸಿದ್ಧವಾಗಿತ್ತು. 
ಮೊದಲ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಚಿವ ಸ್ಥಾನ ವಂಚಿತ ಕಾಂಗ್ರೆಸ್ ನ ಎಂ.ಬಿ.ಪಾಟೀಲ್, ರಾಮಲಿಂಗಾರೆಡ್ಡಿ, ಹೆಚ್.ಕೆ.ಪಾಟೀಲ್  ಮತ್ತಿತ್ತರರು  ಅಸಮಾಧಾನದ ಅಲೆ ಸೃಷ್ಟಿಸಿದ್ದರು. ಆಗ ಕೆಲವರಿಗೆ ಪಕ್ಷದಲ್ಲಿ ಜವಾಬ್ದಾರಿ ನೀಡಿ, ಇನ್ನು ಕೆಲವರಿಗೆ ಸಚಿವ ಸ್ಥಾನ ಕಲ್ಪಿಸಿ ತೃಪ್ತಿ ಪಡಿಸುವ ಪ್ರಯತ್ನ ನಡೆದಿತ್ತು.  ಎರಡನೇ ಬಾರಿ ವಿಸ್ತರಣೆಯ ಸಂದರ್ಭದಲ್ಲಿಯೂ ಇಂತಹದ್ದೇ ಪರಿಸ್ಥಿತಿ  ಎದುರಾಗಿತ್ತು.
ಕಳೆದ ಮೇ ತಿಂಗಳಿನಲ್ಲಿ ಮತ್ತೊಮ್ಮೆ ಸಚಿವ ಸಂಪುಟ ಪುನಾರಚನೆ ಅಥವಾ ಸಂಪುಟ ವಿಸ್ತರಣೆ ಮಾಡಬೇಕೋ ಎಂಬ ಜಿಜ್ಞಾಸೆಯೂ ಕುಮಾರಸ್ವಾಮಿ ಸರ್ಕಾರಕ್ಕೆ ಎದುರಾಗಿತ್ತು. ಇಂತಹ ಸಂದರ್ಭದಲ್ಲಿ ಮೇ 28 ರಂದು ನಡೆದ ಸಭೆಯೊಂದರಲ್ಲಿ ದೇವೇಗೌಡರು ಕಾಮರಾಜ ಸೂತ್ರದ ಬಗ್ಗೆ ಚರ್ಚಿಸಿದ್ದರು. 
ಪಕ್ಷೇತರರನ್ನು  ಉಳಿಸಿಕೊಳ್ಳುವುದಕ್ಕಾಗಿಯೇ  ಸಂಪುಟ ವಿಸ್ತರಣೆ ಮಾಡಿ,  ನಾಗೇಶ್ ಹಾಗೂ ಆರ್.ಶಂಕರ್ ಅವರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳಲಾಗಿತ್ತು.  ಆಗ ಭವಿಷ್ಯದಲ್ಲಿ ತಲೆದೋರಬಹುದಾದ ರಾಜಕೀಯ ಸಂಕಷ್ಟಗಳನ್ನು ಈ ಮೊದಲೇ ಲೆಕ್ಕ ಹಾಕಲಾಗಿತ್ತು. ಮುಂದೆ ರಾಜಕೀಯ ಬದಲಾವಣೆಗಳಾದರೆ ಎಲ್ಲರಿಂದ ರಾಜೀನಾಮೆ ಪಡೆದು ಅತೃಪ್ತರನ್ನು ಶಮನಗೊಳಿಸುವ ಬಗ್ಗೆ ಕಾರ್ಯತಂತ್ರ ಸಿದ್ಧವಾಗಿತ್ತು. 
ಲೋಕಸಭೆ ಚುನಾವಣೆ ಬಳಿಕ ಇದೇ ವಿಚಾರವಾಗಿ ರಾಜ್ಯ ಕಾಂಗ್ರೆಸ್; ಉಸ್ತುವಾರಿ ಕೆ.ಸಿ.ವೇಣುಗೋಪಾಲ್; ಸಚಿವರ ಅಭಿಪ್ರಾಯ ಸಂಗ್ರಹಿಸಿದ್ದರು. ಆದರೆ, ಬಹುತೇಕ  ಸಚಿವರು ರಾಜೀನಾಮೆ ಕೊಡಲು ಸಿದ್ಧರಿರಲಿಲ್ಲ. ಎಲ್ಲ ಶಾಸಕರನ್ನೂ ಮಂತ್ರಿ ಮಾಡಲು  ಆಗುವುದಿಲ್ಲ. ಸಂಪುಟ ಪುನಾರಚಿಸಿದರೂ ಅತೃಪ್ತಿ ನಿಲ್ಲುವುದಿಲ್ಲವೆಂದು ಈ ವೇಳೆ ಹಾಲಿ  ಸಚಿವರು ತಿರುಗಿಬಿದ್ದಿದ್ದರು.  ಕುಮಾರಸ್ವಾಮಿ ಅವರು ಸಹ ಕಾಮರಾಜರು ಅನುಸರಿಸಿದ್ದ ಗ್ರಾಮವಾಸ್ತವ್ಯ ಮಾದರಿಯನ್ನೇ ಅನುಸರಿಸಿದ್ದರು. ದೇವೇಗೌಡರು ಇತ್ತೀಚೆಗೆ ಕಾಮರಾಜರ ಬಗ್ಗೆ ಪ್ರತಿ ಸಭೆ, ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪಿಸುತ್ತಿದ್ದರು. ಜೂನ್ 21 ರಂದು ನಡೆದ ಜೆಡಿಎಸ್ ಸಭೆಯೊಂದರಲ್ಲಿ ಕಾಮರಾಜರಂತೆ ಕುಮಾರಸ್ವಾಮಿ ಸಹ ಗ್ರಾಮವಾಸ್ತವ್ಯಕ್ಕೆ ಮುಂದಾಗಿದ್ದಾರೆ ಎಂದು ಹೊಗಳಿದ್ದರು.
ಏನಿದು ಕಾಮರಾಜ ಸೂತ್ರ:
ದೇಶಕಂಡ ಉತ್ತಮ ರಾಜಕೀಯ ಮುತ್ಸದ್ಧಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ,  ಕುಮಾರಸ್ವಾಮಿ ಕಾಮರಾಜ್ ನಡಾರ್. ಅವರು ಕಷ್ಟಕಾಲದಲ್ಲಿದ್ದ ಕಾಂಗ್ರೆಸ್ ಗೆ ಹಾಕಿಕೊಟ್ಟ ಮಾರ್ಗವೇ ಕಾಮರಾಜಸೂತ್ರ ಮಾರ್ಗ.
1963 ರಲ್ಲಿ ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಉಳಿಸಲು ಸಂಪುಟದ ಎಲ್ಲಾ ಸದಸ್ಯರಿಂದ ರಾಜೀನಾಮೆ ಪಡೆದಿದ್ದರು.ರಾಜೀನಾಮೆ ನೀಡಿದ ಸಚಿವರನ್ನು ಪಕ್ಷ  ಸಂಘಟನೆಗೆ ಬಳಸಿಕೊಳ್ಳಲಾಗಿತ್ತು. ಸಿದ್ದರಾಮಯ್ಯ ಸರ್ಕಾರದಲ್ಲಿಯೂ ಕಾಮರಾಜಸೂತ್ರ  ಚರ್ಚೆಗೆ ಬಂದಿತ್ತು. 2016 ರಲ್ಲಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಕಾಂಗ್ರೆಸ್ ನಲ್ಲಿ ಕಾಮರಾಜ ಸೂತ್ರ ಪದೇಪದೇ ಮುನ್ನಲೆಗೆ ಬಂದಿತ್ತಾದರೂ, ಇದರನ್ವಯ ಸಂಪುಟದ ಎಲ್ಲಾ ಸದಸ್ಯರ ರಾಜೀನಾಮೆ ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಅಷ್ಟೇ ಏಕೆ,  2012ರಲ್ಲಿ ಡಿ.ವಿ ಸದಾನಂದ ಗೌಡ   ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಈಗಿನ ಸರ್ಕಾರದಲ್ಲಿ ಕಾಮರಾಜ ಸೂತ್ರದಂತೆ ರಾಜೀನಾಮೆ ಪಡೆಯಲಾಗಿದೆ. ಆದರೆ ಇದು ಸರ್ಕಾರವನ್ನು ಉಳಿಸಿಕೊಳ್ಳಲು ಸಾಧ್ಯವೇ ಎಂಬುದು ಈಗಿನ ಪ್ರಶ್ನೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com