ಕುಮಾರಸ್ವಾಮಿ, ದೇವೇಗೌಡ ನಡುವೆ ಹೊಂದಾಣಿಕೆಯಿಲ್ಲ,: ಯಡಿಯೂರಪ್ಪ

ಮೈತ್ರಿ ಪಕ್ಷಗಳಲ್ಲಿ ಅಷ್ಟೇ ಅಲ್ಲ. ಕುಮಾರಸ್ವಾಮಿ, ದೇವೇಗೌಡರ ನಡುವೆಯೂ ಹೊಂದಾಣಿಕೆಯೂ ಇಲ್ಲ. ಮಗ ಗ್ರಾಮ ವಾಸ್ತವ್ಯ ಮಾಡಲು ಮುಂದಾದರೆ, ಅಪ್ಪ ಮಧ್ಯಂತರ ಚುನಾವಣೆಗೆ ಸಿದ್ಧರಾಗುತ್ತಿದ್ದಾರೆ ಎಂದು ಬಿಜೆಪಿ
ಕುಮಾರಸ್ವಾಮಿ, ದೇವೇಗೌಡ ನಡುವೆ ಹೊಂದಾಣಿಕೆಯಿಲ್ಲ,: ಯಡಿಯೂರಪ್ಪ
ಕುಮಾರಸ್ವಾಮಿ, ದೇವೇಗೌಡ ನಡುವೆ ಹೊಂದಾಣಿಕೆಯಿಲ್ಲ,: ಯಡಿಯೂರಪ್ಪ
ಬೆಂಗಳೂರು: ಮೈತ್ರಿ ಪಕ್ಷಗಳಲ್ಲಿ ಅಷ್ಟೇ ಅಲ್ಲ. ಕುಮಾರಸ್ವಾಮಿ, ದೇವೇಗೌಡರ ನಡುವೆಯೂ ಹೊಂದಾಣಿಕೆಯೂ ಇಲ್ಲ. ಮಗ ಗ್ರಾಮ ವಾಸ್ತವ್ಯ ಮಾಡಲು ಮುಂದಾದರೆ, ಅಪ್ಪ ಮಧ್ಯಂತರ ಚುನಾವಣೆಗೆ ಸಿದ್ಧರಾಗುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟೀಕೆ ಮಾಡಿದ್ದಾರೆ.
ನಗರದ ಜಗನ್ನಾಥ ಭವನದಲ್ಲಿ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಮಧ್ಯಂತರ ಚುನಾವಣೆಗೆ ಅವಕಾಶ ಕೊಡುವುದಿಲ್ಲ. ಬಿಜೆಪಿ ಪಕ್ಷದಲ್ಲಿ 105 ಶಾಸಕರ ಜೊತೆ ಜೆಡಿಎಸ್, ಕಾಂಗ್ರೆಸ್‍ ಪಕ್ಷದಲ್ಲಿರುವ ಅತೃಪ್ತ ಶಾಸಕರು ಇದ್ದಾರೆ. ಯೋಗ್ಯತೆ ಇಲ್ಲದ ಮೇಲೆ ಸರ್ಕಾರವನ್ನು ವಿಸರ್ಜಿಸಿ. ನಾವು ಸರ್ಕಾರ ರಚನೆ ಮಾಡುತ್ತೇವೆ ಎಂದರು.
ನಾನು ಬಿಜೆಪಿ ಅಧ್ಯಕ್ಷನಾಗಿ ಸ್ಪಷ್ಟವಾಗಿ ಹೇಳಿದ್ದೇನೆ. ಮಧ್ಯಂತರ ಚುನಾವಣೆಗೆ ಅವಕಾಶ ಕೊಡುವುದಿಲ್ಲ. ನಾವು 105 ಶಾಸಕರು ಮತ್ತು ಅತೃಪ್ತ ಶಾಸಕರು ಇದ್ದಾರೆ. ನಿಮ್ಮ ಕೈಯಲ್ಲಿ ಆಗದೇ ಇದ್ದರೆ ರಾಜೀನಾಮೆ ಕೊಟ್ಟು ಹೋಗಿ ನಾವು ಸರ್ಕಾರ ರಚನೆ ಮಾಡುತ್ತೇವೆ ಎಂದು. ನನ್ನ ಪ್ರಕಾರ ಈ ಸರ್ಕಾರ ಇನ್ನು ಹೆಚ್ವು ದಿನ ಉಳಿಯಲ್ಲ ಎಂದು ಯಡಿಯೂರಪ್ಪ ಭವಿಷ್ಯ ನುಡಿದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಒಂದಂಕಿಗೆ ತರುತ್ತೇವೆ ಎಂದವರೇ ಈಗ ಒಂದೊಂದು ಸ್ಥಾನ ಪಡೆದಿದ್ದಾರೆ. ಚುನಾವಣೆಯಲ್ಲಿ 43 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಪಡೆದಿದ್ದು, ಕುಮಾರಸ್ವಾಮಿ ಅವರಿಗೆ ಮಾನಮಾರ್ಯದೆ ಇದ್ದಿದ್ದರೆ ಚುನಾವಣೆ ಸೋಲಿನ ಬಳಿಕ ಸರ್ಕಾರವನ್ನು ವಿಸರ್ಜಿಸಿ ಮನೆಗೆ ಹೋಗಬೇಕಿತ್ತು. ಸರ್ಕಾರ ನಡೆಸಲು ಯೋಗ್ಯತೆ ಇಲ್ಲದ ಮೇಲೆ ರಾಜೀನಾಮೆ ಕೊಡಬೇಕು. ಕಾಂಗ್ರೆಸ್ ಜೆಡಿಎಸ್ ಪಕ್ಷದಲ್ಲಿ 20 ಅತೃಪ್ತರು ಇದಾರೆ. ಮೈತ್ರಿ ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಎಂದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಒಂದು ವರ್ಷದ ಸಾಧನೆ ಪುಸ್ತಕದಲ್ಲಿ ಹೇಳಿಕೊಳ್ಳುವಂತಹದ್ದೇನೂ ಇಲ್ಲ. ಜನತಾದರ್ಶನ ಮಾಡಿ ಇಲ್ಲಸಲ್ಲದ ಸುಳ್ಳು ಭರವಸೆ ನೀಡಿ ಜನರನ್ನು ಮರಳು ಮಾಡುವ ಪ್ರಯತ್ನ ಮಾಡಿದ್ದಾರೆ‌. ಮಳೆಯ ಕುಂಟುನೆಪ ಹೇಳಿ ಗ್ರಾಮವಾಸ್ತವ್ಯ ರದ್ದು ಮಾಡಿ ಹೈದ್ರಾಬಾದ್ ನಿಂದ ವಾಪಸ್ ಬಂದಿದ್ದಾರೆ‌.ಒಂದು ದಿನದ ಇವರ ಗ್ರಾಮವಾಸ್ತವ್ಯದ ನಾಟಕವನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ ಎಂದು ಯಡಿಯೂರಪ್ಪ ಟೀಕಿಸಿದರು.
20-20 ಸರ್ಕಾರದ ಕುಮಾರಸ್ವಾಮಿ ಗ್ರಾಮವಾಸ್ತವ್ಯದಲ್ಲಿ ಜನರಿಗೆ ನೀಡಿದ ಭರವಸೆಗಳು ಏನಾದವು? ಅವರು ಗ್ರಾಮವಾಸ್ತವ್ಯ ಮಾಡಿದ್ದ ಗ್ರಾಮಗಳಲ್ಲಿ ಆಗಿರುವ ಪ್ರಗತಿ ಏನು ಎಂಬುದನ್ನು ರಾಜ್ಯದ ಜನರಿಗೆ ತಿಳಿಸಲು ಪಕ್ಷದ ವತಿಯಿಂದ ಪುಸ್ತಕವೊಂದನ್ನು ಹೊರತರುತ್ತಿದ್ದು, ಜೂನ್ 24 ರಂದು ಪುಸ್ತಕ ಬಿಡುಗಡೆಗೊಳಿಸುತ್ತಿರುವುದಾಗಿ ಯಡಿಯೂರಪ್ಪ ಹೇಳಿದರು. 
ಜನರಿಂದ ತಿರಸ್ಕೃತರಾಗಿರುವ ಕುಮಾರಸ್ವಾಮಿ ಅಪ್ಪನ ಮಾತು ಕೇಳಿಕೊಂಡು ಗ್ರಾಮವಾಸ್ತವ್ಯ ಮಾಡುವ ದೊಂಬರಾಟ ಆಡುತ್ತಿದ್ದಾರೆ. ಈ ರಾಜ್ಯದ ಮುಖ್ಯಮಂತ್ರಿ ಬರ ಪರಿಸ್ಥಿಯ ಬಗ್ಗೆ ಗಮನ ಹರಿಸಬೇಕು.ಅದು ಬಿಟ್ಟು ರಾಜಕೀಯ ದೊಂಬರಾಟ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಬರ ಪರಿಸ್ಥಿತಿ ಸಂದರ್ಭದಲ್ಲಿ ಬಿಜೆಪಿ ರಾಜ್ಯದ ಜನ, ರೈತರ ಪರವಾಗಿ ನಿಲ್ಲುವ ಕೆಲಸ ಮಾಡುತ್ತಿದೆ. ಆಡಳಿತ ಪಕ್ಷದ ಮೇಲೆ ಅವಲಂಬಿತರಾಗದೇ ಜವಾಬ್ದಾರಿ ಅರಿತು ಪಕ್ಷದ ಶಾಸಕರು ತಮ್ಮತಮ್ಮ ಕ್ಷೇತ್ರಗಳಲ್ಲಿ ಸ್ವಂತ ಖರ್ಚಿನಲ್ಲಿ ಟ್ಯಾಂಕರ್ ಗಳ ಮೂಲಕ ಕ್ಷೇತ್ರದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು. ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಬೇಕು.ಬರ ಪರಿಹಾರ ಕಾಮಗಾರಿಗಳ ಬಗ್ಗೆ ವಾರಕ್ಕೆ ಒಂದು ಬಾರಿ ಪಕ್ಷದ ಕಚೇರಿಗೆ ವರದಿ ಕಳುಹಿಸಿಕೊಡಬೇಕು ಎಂದು ಯಡಿಯೂರಪ್ಪ ಬಿಜೆಪಿ ಶಾಸಕರಿಗೆ ಸೂಚಿಸಿದರು. 
ರಾಜ್ಯದಲ್ಲಿ ಒಂದು ವರ್ಷದಿಂದ ಹಗಲು ದರೋಡೆ ನಡೆಯುತ್ತಿದೆ. ಕಾಮಗಾರಿ ನಡೆಸದೇ ಲೋಕೋಪಯೋಗಿ ಇಲಾಖೆಯಲ್ಲಿ ಬಿಲ್ ಪಾವತಿಸಲಾಗಿದೆ. ಈಗಲೂ ಒಂದು ಸಮೀಕ್ಷೆ ನಡೆದರೆ ರಾಜ್ಯದ ಶೇ.90 ರಷ್ಟು ಜನರು ಮೈತ್ರಿ ಸರ್ಕಾರ ತೊಲಗಲಿ ಎನ್ನುವುದು ತಿಳಿಯುತ್ತದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಇನ್ನು ಹೆಚ್ಚು ದಿನ ಉಳಿಯುವುದಿಲ್ಲ. ರಾಜ್ಯ ರಾಜಕಾರಣದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ಕಾದು ನೋಡೋಣ ಎಂದು ಯಡಿಯೂರಪ್ಪ ಭವಿಷ್ಯ ನುಡಿದರು.
ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಮುನ್ನಡೆ ನೀಡಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಸದಸ್ಯತ್ವ ಅಭಿಯಾನ ಮಾಡುವ ವಿಶೇಷ ಗಮನ ನೀಡಬೇಕು ಎಂದು ಈ ಸಂದರ್ಭದಲ್ಲಿ ಜಿಲ್ಲಾ ಪದಾಧಿಕಾರಿಗಳಿಗೆ ಯಡಿಯೂರಪ್ಪ ಸೂಚನೆ ನೀಡಿದರು. 
ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಉದ್ಘಾಟನೆ ನೆರವೇರಿಸಿದ ಬಳಿಕ ಮಾತನಾಡಿದ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್, ಸರ್ಕಾರ ಲಾಟರಿ ಹಗರಣದಲ್ಲಿ ಸಿಲುಕಿದ್ದ ಪೊಲೀಸ್ ಅಧಿಕಾರಿಗೆ ಮುಂಬಡ್ತಿ ಕೊಟ್ಟು ಬೆಂಗಳೂರು ಪೊಲೀಸ್ ಆಯುಕ್ತರನ್ನಾಗಿಸಿದೆ. ಮೇಲ್ಮನೆ ಸದಸ್ಯ ಗೋವಿಂದರಾಜು ಡೈರಿ ವಿಚಾರ ಇನ್ನೂ ಇತ್ಯರ್ಥಗೊಂಡಿಲ್ಲ. ಸರ್ಕಾರದ ಇಂತಹ ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ ಹೋರಾಟ ಮಾಡುವುದೇ ಬಿಜೆಪಿಯ ಅಜೆಂಡಾ ಎಂದರು. 
ಲೋಕಸಭಾ ಚುನಾವಣೆಗೆ ಬಿಜೆಪಿಗೆ ಬಹುಮತ ನೀಡುವ ಮೂಲಕ ಜನರು ಕರ್ನಾಟಕ, ಕೇಂದ್ರದಲ್ಲಿ ಮಹಾಘಟ್ ಬಂಧನ್ ಬೇಡ ಎಂಬ ಸಂದೇಶ ಸಾರಿದ್ದಾರೆ. ಈಗ ಇಡೀ ಭಾರತದ ಭವಿಷ್ಯವನ್ನು ನಿರ್ಧರಿಸುವ ಜವಾಬ್ದಾರಿ ಬಿಜೆಪಿಯ ಕೈಯಲ್ಲಿದೆ. ದಕ್ಷಿಣ ಭಾರತವೂ ಈಗ ಬಿಜೆಪಿಯ ನಿಗಾದಲ್ಲಿದೆ. ಕರ್ನಾಟಕದಲ್ಲಿ ಅಪೂರ್ಣವಾಗಿರುವ ಕೆಲಸ ಪೂರ್ಣಗೊಳಿಸಬೇಕಾಗಿದೆ. ಕರ್ನಾಟಕದಲ್ಲಿ ಜನರಿಂದ ತಿರಸ್ಕೃತವಾಗಿರುವ ಮೈತ್ರಿ ಸರ್ಕಾರವನ್ನು ಕಿತ್ತೊಗೆಯುವುದು ನಮ್ಮ ಪ್ರಮುಖ ಗುರಿ. ಎಷ್ಟು ಬೇಗ ಈ ಮೈತ್ರಿ ಸರ್ಕಾರವನ್ನು ಕಿತ್ತೊಗೆಯುತ್ತೇವೋ ಅಷ್ಟು ಈ ರಾಜ್ಯದ ಭವಿಷ್ಯ ಸುರಕ್ಷಿತವಾಗಿರುತ್ತದೆ.ಅದಕ್ಕೆ ಮಧ್ಯಂತರ ಚುನಾವಣೆಯ ಹೆಸರು ಹೇಳಿ ಹೆದರಿಸುವ ಪ್ರಯತ್ನ ನಡೆದಿದೆ.ಮಧ್ಯಂತರ ಚುನಾವಣೆಗೆ ಹೋಗಲು ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಗೆ ಯಾವ ಅಧಿಕಾರವೂ ಇಲ್ಲ. ಬಿಜೆಪಿ ಅದಕ್ಕೆ ಅವಕಾಶ ಕೊಡುವುದಿಲ್ಲ. ಕರ್ನಾಟಕದ ಜನತೆ ಮಧ್ಯಂತರ ಚುನಾವಣೆಯನ್ನು ಒಪ್ಪುವುದಿಲ್ಲ ಎಂದರು. 
ಕಳೆದಬಾರಿ ಮಿಸ್ ಕಾಲ್ ಮೂಲಕ ಸದಸ್ವತ್ವ ಅಭಿಯಾನ ಆರಂಭಿಸಿದ್ದ ಬಿಜೆಪಿ ಪಕ್ಷ, ಈ ಬಾರಿ ಬೂತ್ ಮಟ್ಟದ ಕಾರ್ಯಕರ್ತರು ಮತ್ತು ವಿಸ್ತಾರಕರ ಮೂಲಕ ಮತದಾರರ ಪಟ್ಟಿ ಆಧರಿಸಿ ಸದಸ್ಯತ್ವ ನೋಂದಣಿ ಮಾಡಿಕೊಳ್ಳಲು ಉದ್ದೇಶಿಸಿದೆ. ಆಗಸ್ಟ್ 11ರವರಗೆ ಸದಸ್ಯತ್ವ ಅಭಿಯಾನ ನಡೆಯಲಿದ್ದು, 50 ಲಕ್ಷ ಸದಸ್ಯರ ನೋಂದಣಿ ಗುರಿ ಹೊಂದಲಾಗಿದೆ.
ಈ ಸಂದರ್ಭದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ, ಮೇಲ್ಮನೆ ಸದಸ್ಯ ರವಿಕುಮಾರ್,ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್ ಹಿರೇಮಣಿ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com