ವರ್ಚಸ್ಸು ಕಾಪಾಡಿಕೊಳ್ಳಲು 'ಹೊಸ ಜಿಲ್ಲೆ' ಪ್ರಸ್ತಾಪ ಮುಂದಿಟ್ಟಿದ್ದಾರಾ ವಿಶ್ವನಾಥ್?
ಮೈಸೂರು: ಉಪ ಚುನಾವಣೆ ಹತ್ತಿರ ಬರುತ್ತಿರುವಾಗಲೇ ರಾಜ್ಯ ರಾಜಕೀಯದಲ್ಲಿ ಹೊಸ ಬೆಳವಣಿಗೆಗಳು ಕಂಡುಬರತೊಡಗಿವೆ. ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಹುಣಸೂರು ಕ್ಷೇತ್ರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಉತ್ಸುಕರಾಗಿರುವ ಮಧ್ಯೆಯೇ, ಜೆಡಿಎಸ್ ಮಾಜಿ ಅಧ್ಯಕ್ಷ, ಅನರ್ಹ ಶಾಸಕ ವಿಶ್ವನಾಥ್ ಅವರು ತಮ್ಮ ವರ್ಚಸ್ಸು ಕಾಪಾಡಿಕೊಳ್ಳಲು ಹೊಸ ವಾದ ಹಾಗೂ ವಿವಾದಕ್ಕೆ ದಾರಿ ಮಾಡಿಕೊಟ್ಟಿದ್ದಾರೆ.
ಮತದಾರರ ಮನ ಗೆಲ್ಲಲು ಅನರ್ಹ ಶಾಸಕ ವಿಶ್ವನಾಥ್ ಅವರು, ಕೃಷ್ಣರಾಜ ಸಾಗರ, ಸಾಲಿಗ್ರಾಮ, ಪಿರಿಯಾ ಪಟ್ಟಣ ಮತ್ತು ಹೆಚ್.ಡಿ.ಕೋಟೆ ಸೇರಿಸಿಕೊಂಡು ಹುಣಸೂರನ್ನು ಪ್ರತ್ಯೇಕ ಜಿಲ್ಲೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಮೂಲಕ ವಿಶ್ವನಾಥ್ ಅವರು ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿಗಳಿಗೂ ಕಠಿಣ ಪರಿಸ್ಥಿತಿಯನ್ನು ಸೃಷ್ಟಿಸಿದ್ದಾರೆ.
ವಿಶ್ವನಾಥ್ ಅವರು ಹುಣಸೂರನ್ನು ಪ್ರತ್ಯೇಕ ಜಿಲ್ಲೆಯಾಗಿಸುವಂತೆ ಆಗ್ರಹಿಸಿದ್ದು, ಒಂದು ವೇಳೆ ಪ್ರತಿಸ್ಪರ್ಧಿಗಳು ಇದನ್ನು ವಿರೋಧಿಸಿದ್ದೇ ಆದರೆ, ಜನರ ಕೋಪವನ್ನು ಎದುರಿಸುವ ಪರಿಸ್ಥಿತಿ ಎದುರಾಗಲಿದೆ.
ವಿಶ್ವನಾಥ್ ಅವರ ಈ ಆಗ್ರಹಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತೀವ್ರವಾಗಿ ವಿರೋಧಿಸಿದ್ದಾರೆ. ಈ ರೀತಿಯ ಆಗ್ರಹಗಳು ರಾಜಕೀಯ ಪ್ರೇರಿತವಾದದ್ದು ಎಂದು ಹೇಳಿದ್ದಾರೆ.
ತಮ್ಮ ಆಗ್ರಹ ಕುರಿತಂತೆ ಸ್ಪಷ್ಟನೆ ಪಡಿಸಿರುವ ವಿಶ್ವನಾಥ್ ಅವರು, ಹುಣಸೂರು ತಾಲೂಕನ್ನು ಕೇಂದ್ರವಾಗಿರಿಸಿಕೊಂಡು ಕೆ.ಆರ್.ನಗರ, ಪಿರಿಯಾಪಟ್ಠಣ, ಹೆಚ್.ಡಿ.ಕೋಟೆ ಮತ್ತು ಸರಗೂರು ತಾಲೂಕನ್ನು ಒಳಗೊಂಡ ಡಿ.ದೇವರಾಜ ಅರಸು ಜಿಲ್ಲೆಯ ಪ್ರಸ್ತಾಪ ನಿನ್ನೆ ಮೊನ್ನೆಯದಲ್ಲ ಅಥವಾ ಚುನಾವಣೆ ಗಿಮಿಕ್ ಕೂಡ ಅಲ್ಲ. ಕಳೆದೊಂದು ವರ್ಷದಿಂದ ಈ ಬೇಡಿಕೆ ಇಡುತ್ತಿದ್ದೇನೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮುಂದೆ ಈ ಪ್ರಸ್ತಾಪವನ್ನು ಮುಂದಿಡಲಾಗಿದ್ದು, ಜನರೊಂದಿಗೆ ಚರ್ಚಿಸುವುದಾಗಿ ಅವರು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ವಿಷಯ ಪ್ರಸ್ತಾಪವಾದಾಗ ಪರ-ವಿರೋಧ ಚರ್ಚೆಗಳು ಸಹಜ. ಅದರಂತೆ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಮಹೇಶ್ ಆಕ್ಷೇಪಿಸಿದ್ದಾರೆ. ಸಿದ್ದರಾಮಯ್ಯ ಡಿಸಿಎಂ ಆಗಿದ್ದಾಗ ಚಾಮರಾಜನಗರ ಜಿಲ್ಲೆಯಾಯಿತು. ಧಾರವಾಡ-ಗದಗ-ಹಾವೇರಿ ಜಿಲ್ಲೆಯಾಯಿತು. ಆಗ ಆಗಿದ್ದು ಈಗ ಯಾಕಾಗಬಾರದು. ಸಾರಾ ಮಹೇಶ್ ಕೆ.ಆರ್.ನಗರ ತಾಲೂಕನ್ನೇ ಒಡೆದು ಸಾಲಿಗ್ರಾಮ ಮಾಡಲಿಲ್ಲವೇ ಎಂದು ಪ್ರಶ್ನಿಸಿದರು.
ವಿಶ್ವನಾಥ್ ಅವರ ಈ ಹೇಳಿಕೆಗೆ ಸಾ ರಾ ಮಹೇಶ್ ಅವರು ತೀವ್ರವಾಗಿ ಕಿಡಿಕಾರಿದ್ದು, ವಿಶಅವನಾಥ್ ಅವರು ಹುಣಸೂರು ಜಿಲ್ಲೆಯ ಸಚಿವರಾಗುವ ಕನಸು ಕಾಣುತ್ತಿದ್ದಾರೆ. ಇದನ್ನು ನಾವು ವಿರೋಧಿಸುತ್ತೇವೆಂದಿದ್ದಾರೆ.

