ಅನರ್ಹರ ಪರ ಚುನಾವಣಾ ಆಯೋಗದ ಪರ ವಕೀಲರ ವಾದ: ಕೇಂದ್ರ ಸರ್ಕಾರದಿಂದ ಆಯೋಗದ ದುರ್ಬಳಕೆ: ಉಗ್ರಪ್ಪ

ಸುಪ್ರೀಂಕೋರ್ಟ್ ಅನರ್ಹ ಶಾಸಕರ ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಯಾವುದೇ ನೋಟಿಸ್ ಕೊಡದೇ ಇದ್ದರೂ ವಕೀಲ ರಾಕೇಶ್ ದ್ವಿವೇದಿ ಚುನಾವಣಾ ಆಯೋಗದ ಪರ ಅಭಿಪ್ರಾಯ...
ವಿಎಸ್ ಉಗ್ರಪ್ಪ
ವಿಎಸ್ ಉಗ್ರಪ್ಪ

ಬೆಂಗಳೂರು: ಸುಪ್ರೀಂಕೋರ್ಟ್ ಅನರ್ಹ ಶಾಸಕರ ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಯಾವುದೇ ನೋಟಿಸ್ ಕೊಡದೇ ಇದ್ದರೂ ವಕೀಲ ರಾಕೇಶ್ ದ್ವಿವೇದಿ ಚುನಾವಣಾ ಆಯೋಗದ ಪರ ಅಭಿಪ್ರಾಯ ಮಂಡಿಸಿರುವುದನ್ನು ನೋಡಿದರೆ ಕೇಂದ್ರ ಸರ್ಕಾರ ಅನರ್ಹ ಶಾಸಕರ ಪರ ನಿಂತಿರುವುದು ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್ ವಕ್ತಾರ ವಿ.ಎಸ್.ಉಗ್ರಪ್ಪ ಆರೋಪ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನರ್ಹರ  ಪ್ರಕರಣದಲ್ಲಿ ಚುನಾವಣಾ ಆಯೋಗವನ್ನು ಕಕ್ಷಿದಾರರನ್ನಾಗಿ ಮಾಡಿಯೇ ಇಲ್ಲ. ಸುಪ್ರೀಂ ಕೋರ್ಟ್ ಕೂಡ ಆಯೋಗಕ್ಕೆ ಯಾವುದೇ ನೋಟಿಸ್ ನೀಡಿಲ್ಲ. ಹೀಗಿದ್ದಾಗ್ಯೂ ಆಯೋಗ ಸ್ವಯಂ ಪ್ರೇರಿತವಾಗಿ ವಾದ ಮಾಡಿರುವುದು ನೋಡಿದರೆ ಇದರಲ್ಲಿ ಕೇಂದ್ರ ಬಿಜೆಪಿ ನಾಯಕರ ಕೈವಾಡವಿದೆ. ಬಿಜೆಪಿ ನಾಯಕರು ಚುನಾವಣಾ ಆಯೋಗವನ್ನೂ ತಮ್ಮ ರಾಜಕೀಯ ದುರುದ್ದೇಶಕ್ಕೆ ಬಳಸಿಕೊಳ್ಳುತ್ತಿರುವುದು ಸ್ಪಷ್ಟವಾಗುತ್ತಿದೆ ಎಂದರು.

ಆಯೋಗ ಉಪ ಚುನಾವಣೆ ಘೋಷಣೆ ಮಾಡುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅನರ್ಹರ ಜೊತೆ ರಹಸ್ಯ ಸಭೆ ನಡೆಸಿ, ನವದೆಹಲಿಗೆ ಹೋಗಿದ್ದಾರೆ. ಅವರು ಅನರ್ಹರ ಬೆಂಬಲಕ್ಕೆ ನಿಲ್ಲುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಮೇಲೆ ಒತ್ತಡ ಹೇರಿರುವ ಸಾಧ್ಯತೆ ಇದೆ. ಅಮಿತ್ ಶಾ ಒತ್ತಡದ ಹಿನ್ನೆಲೆಯಲ್ಲಿ ಆಯೋಗದ ಪರ ವಕೀಲರು ಸುಪ್ರೀಂ ಕೋರ್ಟ್ ನಲ್ಲಿ ವಾದ ಮಾಡಿದ್ದಾರೆ ಎಂದು ವಿವರಿಸಿದರು.

ರಾಜ್ಯದ ಚುನಾವಣಾಧಿಕಾರಿಗಳು ಅನರ್ಹ ಶಾಸಕರು ಚುನಾವಣೆ ಸ್ಪರ್ಧೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಕೇಂದ್ರ ಚುನಾವಣಾ ಆಯೋಗದ ಪರ ವಕೀಲರಾದ ರಾಕೇಶ್ ದ್ವಿವೇದಿ ಸೆ. 12 ರಂದು ಅನರ್ಹರ ಪ್ರಕರಣ ತುರ್ತು ವಿಚಾರಣೆ ಕೈಗೆತ್ತಿಕೊಳ್ಳುವಂತೆ ವಾದ ಮಾಡಿದ್ದರು. ಇದನ್ನು ನೋಡಿದರೆ ಕೇಂದ್ರ ಸರ್ಕಾರದ ಹಿತಾಸಕ್ತಿ ಕೆಲಸ ಮಾಡಿದಂತಿದೆ ಎಂದರು.

ಹಾಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಸುಪ್ರೀಂ ಕೋರ್ಟ್ ಯಾವುದೇ ನೋಟಿಸ್ ನೀಡಿಲ್ಲ. ಆದರೂ ಸ್ಪೀಕರ್ ಪರ ಇಬ್ಬರು ಅಧಿಕಾರಿಗಳು ದೆಹಲಿಗೆ ಹೋಗಿದ್ದಾರೆ. ಸ್ಪೀಕರ್ ಅಧಿಕಾರ ದುರ್ಬಳಕೆ ಮಾಡಿಕೊಂಡು ಪಕ್ಷದ ಪರ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಆಯೋಗಕ್ಕೆ ನೋಟಿಸ್ ನೀಡದೇ ಇದ್ದರೂ ವಾದ ಮಾಡಿರುವುದನ್ನು ಪರಿಗಣಿಸಿದರೆ ಆಯೋಗ ಕೇಂದ್ರ ಸರ್ಕಾರದ ಭಾಗವಾಗಿ ಕೆಲಸ ಮಾಡಿದಂತೆ ಕಾಣುತ್ತಿದೆ.  ಚುನಾವಣಾ ಆಯೋಗವೂ ಬಿಜೆಪಿಯ ಘಟಕದಂತೆ  ಕೆಲಸ ಮಾಡುತ್ತಿದೆ. ಚುನಾವಣಾ ಆಯೋಗದ ವಕೀಲರ ದುರ್ವರ್ತನೆಯ ಬಗ್ಗೆ ಸುಪ್ರೀಂ ಕೋರ್ಟ್ ಗಮನಿಸಿಯೇ ತೀರ್ಪು ನೀಡುತ್ತದೆ ಎನ್ನುವ ವಿಶ್ವಾಸ ಇದೆ ಎಂದು ಉಗ್ರಪ್ಪ ಹೇಳಿದರು.

ಕೇವಿಯೆಟ್ ನಮ್ಮ ವಾದ ಆಲಿಸದೇ ಯಾವುದೇ ತೀರ್ಪು ನೀಡದಂತೆ ಪಕ್ಷದ ವತಿಯಿಂದ ಅರ್ಜಿ ಹಾಕಲಾಗಿದೆ. ಪಕ್ಷದ ಪರ ವಕೀಲ ಕಪಿಲ್ ಸಿಬಲ್ ಈಗಾಗಲೆ ಚುನಾವಣಾ ಆಯೋಗದ ನಡೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಯೋಗದ ಈ ನಡೆ ನೋಡಿದರೆ ಚುನಾವಣೆಗಳು ಹೆಸರಿಗೆ ಮಾತ್ರ ನಡೆಯುತ್ತಿವೆ ಎಂದೆನಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com