ಶಾಸಕರ ಕುದುರೆ ವ್ಯಾಪಾರದಲ್ಲಿ ತೊಡಗಿದ್ದ ಬಿಜೆಪಿ ನಾಯಕರ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ?: ಮೋದಿಗೆ ರಮೇಶ್ ಕುಮಾರ್ ಪ್ರಶ್ನೆ

ಹೌದು ನಾನು ಕಳ್ಳನೇ, ಅವರ ಹೇಳಿಕೆಗಳಿಗೆ, ಆರೋಪಗಳ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ನಾನು ತಪ್ಪು ಮಾಡಿದ್ದರೆ ಜೈಲಿಗೆ ಹೋಗಲು ನಾನು ಸಿದ್ಧನಿದ್ದೇನೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್
ರಮೇಶ್ ಕುಮಾರ್  ಸುದ್ದಿಗೋಷ್ಠಿ
ರಮೇಶ್ ಕುಮಾರ್ ಸುದ್ದಿಗೋಷ್ಠಿ
Updated on

ಬೆಂಗಳೂರು: ಹೌದು ನಾನು ಕಳ್ಳನೇ, ಅವರ ಹೇಳಿಕೆಗಳಿಗೆ, ಆರೋಪಗಳ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ನಾನು ತಪ್ಪು ಮಾಡಿದ್ದರೆ ಜೈಲಿಗೆ ಹೋಗಲು ನಾನು ಸಿದ್ಧನಿದ್ದೇನೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಹಾಗೂ ಅನರ್ಹ ಶಾಸಕರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
  
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜ್ವಲಂತ ಸಮಸ್ಯೆಗಳು ಸಾಕಷ್ಟಿವೆ, ನಾನು ಎಷ್ಟು ದಿನ ಬದುಕಿರುತ್ತೇನೋ ತಮಗೆ ಗೊತ್ತಿಲ್ಲ, ಇರುವಷ್ಟು ದಿನ ಜನರ ಪರವಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
  
ಮುನಿಯಪ್ಪಗೆ ನಿಮ್ಮ ಮೇಲೆ ಪ್ರೀತಿ ಜಾಸ್ತಿಯಾಗಿರಬೇಕು ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಹೌದಾ, ನೀವೂ ಪ್ರೀತಿ ಮಾಡಿ ಎಂದು ಹೇಳಿ ರಮೇಶ್​ ಕುಮಾರ್​ ನಕ್ಕರು.
  
ಅನರ್ಹ ಶಾಸಕರ ವಿಚಾರವಾಗಿ ಸುದ್ದಿಗಾರರ ಪ್ರಶ್ನಗೆ ಉತ್ತರಿಸಿದ ಅವರು, ಸುಪ್ರಿಂ ಕೋರ್ಟ್ ನಲ್ಲಿ ಅನರ್ಹ ಶಾಸಕರ ವಿಚಾರಣೆ ಇದೆ.ಹೀಗಾಗಿ ಆ ಬಗ್ಗೆ ಒಂದಕ್ಷರನೂ ಮಾತಾಡಲ್ಲ ಎಂದು ರಮೇಶ್ ಕುಮಾರ್ ಹೇಳಿದರು.
  
ಗಾಂಧಿಭವನದಲ್ಲಿ ನಡೆದ ‘ದಿ ಲಾಸ್ಟ್ ಐಕಾನ್ ಆಫ್ ಐಡಿಯಾಲಾಜಿಕಲ್ ಪಾಲಿಟಿಕ್ಸ್’ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಪರ್ಯಾಯವನ್ನ ಕೊಡಲು ಜನ ತಯಾರಿದ್ದಾರೆ. ಆದರೆ ಯೋಗ್ಯತೆಯಿಂದ ನಡೆದುಕೊಳ್ಳುವುದಕ್ಕೆ ನಾವು ತಯಾರಿಲ್ಲ. ಪ್ರತೀ ಭಾರಿಯೂ ಜನರಿಗೆ ನಾವು ದ್ರೋಹ ಮಾಡುತ್ತಲೇ ಬಂದಿದ್ದೇವೆ. ಇಂದಿರಾಗಾಂಧಿಯವರದ್ದು ತಪ್ಪು, ಅವರು ಅವರ ಕುಟುಂಬದವರನ್ನು ಅಧಿಕಾರಕ್ಕೆ  ತಂದರು ಎಂದು ಹೇಳುತ್ತೇವೆ.‌ ಮತ್ತೆ ನಾವೆಲ್ಲಾ ಯಾರು ಎಂದು ಪ್ರಶ್ನಿಸಿದ ಅವರು, ನಾವು ಅವರೇ ಎನ್ನುವ ಮೂಲಕ ಎಲ್ಲಾ ಪಕ್ಷಗಳಲ್ಲಿಯೂ ಕುಟುಂಬ ರಾಜಕಾರಣ ಮುಂದುವರೆಸಿದ್ದೇವೆ. ಆದರೆ ಗಾಂಧಿ ಕುಟುಂಬವನ್ನು ಮಾತ್ರ ಟಾರ್ಗೆಟ್ ಮಾಡುತ್ತಿದ್ದೇವೆ ಎಂದು ಟೀಕಿಸಿದರು.
  
ಯಾವ ರಾಜಕೀಯ ಪಕ್ಷದಲ್ಲೂ ಆತಂರಿಕ ಪ್ರಜಾಪ್ರಭುತ್ವ ಇಲ್ಲ. ಎಲ್ಲಾ ಪಕ್ಷಗಳ ಕುರಿತೂ ನಾನು ಮಾತನಾಡ್ತಿದ್ದೇನೆ. ನನ್ನ ಪಕ್ಷವೂ ಸೇರಿದಂತೆ  ಹೀಗಿರುವಾಗ ಹೊರಗಿನ ಪ್ರಜಾಪ್ರಭುತ್ವ ಹೇಗೆ ಸ್ವಚ್ಚವಾಗಿರುತ್ತದೆ. ಜನರಿಗೆ ಯಾವುದು ಸಂಬಂಧ ಇಲ್ಲವೋ ಅದು ಪ್ರಾಮುಖ್ಯತೆ ಪಡೆಯುತ್ತಾ ಬಂದಿದೆ. ಮಾಧ್ಯಮಗಳು ಕಳ್ಳರನ್ನು ಹೀರೋ ಮಾಡುತ್ತಾರೆ, ಹೀರೋಗಳನ್ನು ಕಳ್ಳರನ್ನಾಗಿ ಮೆರೆಸುತ್ತಲೆ ಬಂದಿದೆ. ನನ್ನ ಬಗ್ಗೆ ತಪ್ಪಾಗಿ ಬರೆದರೂ ಚಿಂತೆಯಿಲ್ಲ ಬರೆದುಕೊಳ್ಳಲಿ. ಮಾರನೆ ದಿನ ಮಕ್ಕಳೀಗಾಗಿ ಆ ಪೇಪರ್ ಬಳಕೆ ಮಾಡುತ್ತೇವೆ ಎನ್ನುವ ಮೂಲಕ ಒರೆಸಿ ಬಿಸಾಡುತ್ತೇವೆ ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದರು.

ಇದೇ ವೇಳೆ, ಕಾಂಗ್ರೆಸ್ ನಲ್ಲಿ ಮಾತ್ರ ಕಳ್ಳರಿದ್ದಾರಾ? ಬಿಜೆಪಿಯಲ್ಲಿ ಯಾರೂ ಕಳ್ಳರೇ ಇಲ್ಲವೆ. ಶಾಸಕರ ಕುದುರೆ ವ್ಯಾಪಾರದಲ್ಲಿ ತೊಡಗಿದ್ದ ಬಿಜೆಪಿ ನಾಯಕರ ವಿರುದ್ಧ ಮೋದಿ ಸರ್ಕಾರ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ? ಎಂದು ಮಾಜಿ ಸ್ಪೀಕರ್ ಪ್ರಶ್ನಿಸಿದರು.
  
ರಾಜ್ಯದ ಬಜೆಟ್ ೩ ಲಕ್ಷ ಕೋಟಿ. ಆದರೆ ೧೫ ಲಕ್ಷ ಕೋಟಿ ಹಣವನ್ನು ವ್ಯಾಪಾರಿ-ಉದ್ಯಮಿಗಳು ಬ್ಯಾಂಕ್ ನಿಂದ ತೆಗೆದುಕೊಂಡು ದೇಶವನ್ನು ಬಿಟ್ಟು ಓಡಿ ಹೋಗುತ್ತಿದ್ದಾರೆ ಅವರ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ. ಯಾವುದೇ ದುರುದ್ದೇಶ ತಮಗೆ ಇಲ್ಲ. ದೇಶ ಜಾತ್ಯತೀಯವಾಗಿ  ಇರಬೇಕು. ಗಲ್ಲು ಅಥವಾ  ಜೈಲಿಗೆ ಹೋಗಲು ನಾನು ಸಿದ್ದನಿದ್ದೇನೆ. ಬಿಜೆಪಿ ಅಧಿಕಾರಕ್ಕೆ ಬಂದಿರುವುದು ನಮ್ಮದೇ ತಪ್ಪಿನಿಂದ. ಬಿಜೆಪಿ ಅಧಿಕಾರಕ್ಕೆ ಬರಲು ಜನ ಕಾರಣಾನಾ..? ನಾವು ಕಾರಣವಾ..? ಇದನ್ನ ನಾವು ಅರಿತುಕೊಳ್ಳಬೇಕಿದೆ ಎಂದು ಮಾರ್ಮಿಕವಾಗಿ ಹೇಳಿದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಅಧಿಕಾರ ಇಲ್ಲದಿದ್ದಾಗಲೂ ಎಲ್ಲರೂ ನೆನಪಿಡುವ ವ್ಯಕ್ತಿ ಚಂದ್ರಶೇಖರ್. ರಾಜಕೀಯವೆಂದರೆ  ಆಡಳಿತ ಪಕ್ಷ ವಿರೋಧ ಪಕ್ಷದ ಮಧ್ಯೆ ಇರೋದಲ್ಲ ಜನರ ಜೊತೆ ಬೆಸೆದುಕೊಂಡು ಹೋಗಬೇಕು. ಮತ ಹಾಕಿದವರು ಎಂಥವರಿಗೆ ಮತ ಹಾಕುತ್ತೇವೆ ಎನ್ನುವುದು ಮುಖ್ಯ‌ವಾಗುತ್ತದೆ. ನಮ್ಮ ನೀತಿಯನ್ನು ಮೀರಿ ಸೋಲನ್ನ ಕಂಡಿದ್ದೇವೆ. ನಾವು ಉತ್ತಮ ನಾಯಕನನ್ನು ಉಳಿಸಿಕೊಳ್ಳುವಲ್ಲಿ ಸೋತಿದ್ದೇವೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com