ಮೈ ಮೇಲೆ ಮರಳು ಹಾಕಿಕೊಂಡು ಸಿಎಂ ಆರಾಮವಾಗಿದ್ದಾರೆ, ನಾವ್ಯಾಕೆ ಟೆನ್ಷನ್ ಕೊಡೋಣ: ಎಸ್ ಟಿ ಸೋಮೇಶೇಖರ್ ಟಾಂಗ್

ಒತ್ತಡ, ಹಿಟ್ ಅಂಡ್ ರನ್ ಪ್ರಕರಣ ಇಲ್ಲವೇ ಇಲ್ಲ. ನಾವು ಯಾರಿಗೂ ಬ್ಲಾಕ್ ಮೇಲ್ ಮಾಡುತ್ತಿಲ್ಲ. ಮುಖ್ಯಮಂತ್ರಿಗಳು ಆರಾಮಾಗಿ ವಿಶ್ರಾಂತಿ ಪಡೆಯುತ್ತಿದ್ದಾರೆ....
ಎಸ್ ಟಿ ಸೋಮಶೇಖರ್
ಎಸ್ ಟಿ ಸೋಮಶೇಖರ್
ಬೆಂಗಳೂರು: ಒತ್ತಡ, ಹಿಟ್ ಅಂಡ್ ರನ್ ಪ್ರಕರಣ ಇಲ್ಲವೇ ಇಲ್ಲ. ನಾವು ಯಾರಿಗೂ ಬ್ಲಾಕ್ ಮೇಲ್ ಮಾಡುತ್ತಿಲ್ಲ. ಮುಖ್ಯಮಂತ್ರಿಗಳು ಆರಾಮಾಗಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಸಮುದ್ರದಲ್ಲಿ ಈಜಾಡಿಕೊಂಡು, ಮೈ ಮೇಲೆ ಮರಳು ಹಾಕಿಕೊಂಡು ಸಂತಸವಾಗಿ ಇರುವವರಿಗೆ ನಾವ್ಯಾಕೆ ಟೆನ್ಷನ್ ಕೊಡೋಣ ಎಂದು ಬಿಡಿಎ ಅಧ್ಯಕ್ಷ ಹಾಗೂ ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಬೆಂಗಳೂರಿನಲ್ಲಿ ಸಮಾನ ಮನಸ್ಕ ಶಾಸಕರ ಸಭೆ ಕರೆದಿದ್ದೇವು. ಅದರಲ್ಲೂ ವಿಶೇಷವಾಗಿ ನಿಗಮ ಮಂಡಳಿ ,ಅಧ್ಯಕ್ಷರ ಸಭೆ ಕರೆಯಲಾಗಿತ್ತು. ಮೂರು ನಾಲ್ಕು ದಿನಗಳ ಹಿಂದಷ್ಟೆ ಚರ್ಚೆ ಮಾಡಿ ಸಭೆ ಸಮಯ ನಿಗದಿ ಮಾಡಲಾಗಿತ್ತು. ಆದರೆ ಉಪ ಚುನಾವಣೆ ನಾಮಪತ್ರ ಸಲ್ಲಿಕೆ ಹಿನ್ನಲೆಯಲ್ಲಿ ನಾಳಿನ ಸಭೆಯನ್ನು ಮುಂದೂಡಿದ್ದೇವೆ. ಸಭೆಯನ್ನು ಸರ್ಕಾರ, ಅಥವಾ ಪಕ್ಷದ ವಿರುದ್ಧವಾಗೇನು ನಾವು ಕರೆದಿಲ್ಲ ಎಂದು ಸ್ಪಷ್ಟಪಡಿಸಿದರು.
ನಿಗಮ ಮಂಡಳಿಗಳಲ್ಲಿ ಒಂದಷ್ಟು ಸಮಸ್ಯೆಗಳಿವೆ ಅವುಗಳನ್ನು ಚರ್ಚಿಸಿ ಸರ್ಕಾರದ ಮುಂದಿಟ್ಟು ಬಗೆಹರಿಸಲು ತೀರ್ಮಾನಿಸಿದ್ದೇವೆ. ಹಲವಾರು ಬೋರ್ಡ್ ಗಳಲ್ಲಿ ಹಣಕಾಸಿನ ಹಾಗೂ ಆಡಳಿತಾತ್ಮಕ ಸಮಸ್ಯೆಗಳಿವೆ ಅದನ್ನು ಚರ್ಚಿಸಲು ಸಭೆಯನ್ನು ಕರೆದಿದ್ದೇವೆ. ಅಷ್ಟಕ್ಕೂ ಸಭೆ ನಡೆಸುವ ಮಾಹಿತಿಯನ್ನು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೂ ತಿಳಿಸಿದ್ದೇವೆ ಎಂದು ಅವರು ಹೇಳಿದರು. 
ಅಷ್ಟಕ್ಕೂ ನಾಳಿನ ಸಭೆಯನ್ನು ನಿಲ್ಲಿಸುವಂತೆ ಯಾರೂ ತಮಗೆ ಒತ್ತಡ ಹಾಕಿಲ್ಲ. ನಾವುಗಳ್ಯಾರೂ  ಅಸಮಾಧಾನಿತ ಶಾಸಕರಲ್ಲ. ಸಾರ್ವಜನಿಕ ಜೀವನದಲ್ಲಿ ಕೆಲಸವನ್ನೂ ಮಾಡಬೇಕಲ್ಲ ಎಂದು ಸಭೆ ಕರೆದ ಉದ್ದೇಶವನ್ನು ಎಸ್.ಟಿ.ಸೋಮಶೇಖರ್ ವಿವರಿಸಿದರು.
ಬಿಡಿಎ ಅಧ್ಯಕ್ಷನಾಗಿ ನಾನಿಲ್ಲಿ ಇದ್ದೇನೆ. ಒಬ್ಬ ಉಪ ಕಾರ್ಯದರ್ಶಿ 35  ನಿವೇಶನಗಳನ್ನು ಅಕ್ರಮವಾಗಿ ನೀಡುತ್ತಾರೆ. ತಾವು ಅಧ್ಯಕ್ಷರಾಗಿದ್ದರೂ ಕ್ರಮ ಕೈಗೊಳ್ಳಲಿಕ್ಕೆ ಅವಕಾಶವಿಲ್ಲ ಎಂದು ಬಿಡಿಎನಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ತಮ್ಮ ಬೇಸರ ಹೊರಹಾಕಿದರು.
ಶಾಸಕರ ಸಭೆ ಕರೆದಿರುವ ವಿಚಾರವನ್ನು ಕೆಪಿಸಿಸಿ ಕಾರ್ಯದರ್ಶಿ ಅವರಿಗೆ ಮಾಹಿತಿ ನೀಡಿದ್ದೇವೆ. ಸಭೆ ಕರೆದಿರುವುದನ್ನು ಬ್ಲಾಕ್ ಮೇಲ್ ಎಂದು ಹೇಳಿದರೆ ಹೇಗೆ ಎಂದು ಸುದ್ದಿಗಾರರನ್ನು ಪ್ರಶ್ನಿಸಿದರು.
ಎಸ್.ಟಿ.ಸೋಮಶೇಖರ್ ಶಾಸಕರಿಗೆ ಬರೆದಿರುವ ಪತ್ರಕ್ಕೆ ಪ್ರತಿಯಾಗಿ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ವಿರೋಧ ವ್ಯಕ್ತಪಡಿಸಿ ಪತ್ರ ಬರೆದಿದ್ದು ನಿಜ ಎಂದು ತಿಳಿಸಿದ ಸೋಮಶೇಖರ್, ರಘು ಆಚಾರ್ ದೂರವಾಣಿ ಕರೆ ಮಾಡಿ ಪ್ರಚಾರಕ್ಕಾಗಿ ತಕರಾರು ಎತ್ತಿದ್ದಾನೆ. ಆದರೆ ಇದರಲ್ಲಿ ಪ್ರಚಾರ ವಿಚಾರ ಏನಿಲ್ಲ. ಆತನಿಗಿಂತ ಹೆಚ್ಚು ವರ್ಷ ಪಕ್ಷದಲ್ಲಿದ್ದು ಸಂಘಟನೆಯಲ್ಲಿ ತೊಡಗಿದ್ದೇನೆ. ಕಾರ್ಯಕರ್ತನಾಗಿ ತಳಮಟ್ಟದಿಂದ ಈ ಸ್ಥಾನಕ್ಕೆ ಏರಿದ್ದೇನೆ. ಕಾಂಗ್ರೆಸ್ ಅಧ್ಯಕ್ಷರ ಬಳಿ, ಶಾಸಕಾಂಗ ನಾಯಕರ ಬಳಿಕ ಏನು ಮಾತನಾಡಬೇಕು ಎಂಬುದು ತಮಗೆ ತಿಳಿದಿದೆ ಎಂದು ರಘು ಆಚಾರ್ ಪತ್ರಕ್ಕೆ ಶಾಸಕ ಎಸ್.ಟಿ.ಸೋಮಶೇಖರ್ ತಿರುಗೇಟು ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com