ಸಿಎಂ ಯಡಿಯೂರಪ್ಪಗೆ ಪತ್ರ ಬರೆದ ದೇವೇಗೌಡ, ನಿಮ್ಮ ಜೊತೆ ನಾವಿದ್ದೇವೆ ಎಂದ ಮಾಜಿ ಪ್ರಧಾನಿ

ನೊಂದ ಸಂತ್ರಸ್ತರ ಕಣ್ಣೀರು ಒರೆಸಿ, ಸಾಂತ್ವನ ಹೇಳುವಲ್ಲಿ ಹಾಗೂ ಸಂತ್ರಸ್ತರ ಬದುಕನ್ನು ಪುನಃ ರೂಪಿಸಲು ತಮ್ಮ ಹಾಗೂ ಜೆಡಿಎಸ್ ಪಕ್ಷದ ಪೂರ್ಣ ಸಹಕಾರ ಮತ್ತು ಬೆಂಬಲವಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಯೋಜನೆಗಳನ್ನು ಕೈಗೊಳ್ಳಬೇಕು...
ದೇವೇಗೌಡ
ದೇವೇಗೌಡ

ಬೆಂಗಳೂರು: ನೊಂದ ಸಂತ್ರಸ್ತರ ಕಣ್ಣೀರು ಒರೆಸಿ, ಸಾಂತ್ವನ ಹೇಳುವಲ್ಲಿ ಹಾಗೂ ಸಂತ್ರಸ್ತರ ಬದುಕನ್ನು ಪುನಃ ರೂಪಿಸಲು ತಮ್ಮ ಹಾಗೂ ಜೆಡಿಎಸ್ ಪಕ್ಷದ ಪೂರ್ಣ ಸಹಕಾರ ಮತ್ತು ಬೆಂಬಲವಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಯೋಜನೆಗಳನ್ನು ಕೈಗೊಳ್ಳಬೇಕು ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
  
ಏಕಾಂಗಿಯಾಗಿ ಯಡಿಯೂರಪ್ಪ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ಕೊಡುತ್ತಿದ್ದು, ಅಧಿಕಾರಿಗಳು ಅವರಿಗೆ ಸಹಕರಿಸುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಲಾಗಿದೆ. ಬೃಹತ್ ಪ್ರಮಾಣದ ಪರಿಹಾರ ಕಾರ್ಯಗಳನ್ನು ರಾಜ್ಯ ಸರ್ಕಾರ ಒಂದೇ ನಿಭಾಯಿಸುವುದು ಕಷ್ಟಸಾಧ್ಯ. ಹೀಗಾಗಿ ತಾವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ರಾಜ್ಯದಲ್ಲಿರುವ ತಲೆದೋರಿರುವ ನೆರೆಹಾವಳಿಯನ್ನು ‘ರಾಷ್ಟ್ರೀಯ ವಿಪತ್ತು’’ ಎಂದು ಘೋಷಿಸಿ, ತುರ್ತು ಪರಿಹಾರ ಕಾರ್ಯಗಳಿಗೆ ಕನಿಷ್ಠ 5 ಸಾವಿರ ಕೋಟಿ ರೂ.ಗಳನ್ನು ತುರ್ತಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸಿರುವುದಾಗಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
  
ನೊಂದ ಸಂತ್ರಸ್ತರನ್ನು ಸಕಾಲದಲ್ಲಿ ಕಾಪಾಡಿ, ಪರಿಹಾರ ನೀಡುವುದು ಸರ್ಕಾರದ ಮೊದಲ ಮತ್ತು ಆದ್ಯ ಕರ್ತವ್ಯ. ಅಘಾದ ಪ್ರಮಾಣದಲ್ಲಾಗಿರುವ ದುರಂತವನ್ನು ನಿಭಾಯಿಸುವಲ್ಲಿ ಕೆಲವೊಮ್ಮೆ ಲೋಪದೋಷಗಳು ಹಾಗೂ ನ್ಯೂನತೆಗಳು ಕಂಡುಬರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ರಾಜಕಾರಣ ಬೆರೆಸದೆ ಸಂತ್ರಸ್ತರ ನೆರವಿಗೆ ಧಾವಿಸಬೇಕು. ಈ ಹಿನ್ನೆಲೆಯ್ಲಲಿ ರಾಜ್ಯ ಮತ್ತು ಜಿಲ್ಲಾಡಳಿತವನ್ನು ಚುರುಕುಗೊಳಿಸಿ, ನುರಿತ, ಅನುಭವಿ ಹಾಗೂ ಕ್ರಿಯಾಶೀಲ ಅಧಿಕಾರಿಗಳನ್ನು ಭಾದಿತ ಜಿಲ್ಲೆಗಳ ರಕ್ಷಣಾ ಮತ್ತು ಪರಿಹಾರ ಕಾರ್ಯಕ್ರಮಗಳಲ್ಲಿ ನಿಯೋಜಿಸಬೇಕು ಎಂದು ದೇವೇಗೌಡ ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com