ಏನು ಘನಂದಾರಿ ಕೆಲಸ ಮಾಡಿದ್ದಾರೆಂದು ಅವರ ದೂರವಾಣಿ ಕದ್ದಾಲಿಸಬೇಕು: ಕುಮಾರಸ್ವಾಮಿ

ಏನು ಘನಂದಾರಿ ಕೆಲಸ ಮಾಡಿದ್ದಾರೆ ಎಂದು ತಾವು ಅನರ್ಹ ಶಾಸಕರ ದೂರವಾಣಿ ಕದ್ದಾಲಿಕೆ ಮಾಡಬೇಕು? ಸರ್ಕಾರ ಯಾವುದೇ ಸಂಸ್ಥೆಯಿಂದ ತನಿಖೆ ನಡೆಸಿದರೂ ಸರಿ ನಾನೇನು ಹೆದರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬಿಜೆಪಿ ಸರ್ಕಾರಕ್ಕೆ ಪ್ರತಿ ಸವಾಲು ಹಾಕಿದ್ದಾರೆ.
ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ

ಚಿಕ್ಕಮಗಳೂರು: ಏನು ಘನಂದಾರಿ ಕೆಲಸ ಮಾಡಿದ್ದಾರೆ ಎಂದು ತಾವು ಅನರ್ಹ ಶಾಸಕರ ದೂರವಾಣಿ ಕದ್ದಾಲಿಕೆ ಮಾಡಬೇಕು? ಸರ್ಕಾರ ಯಾವುದೇ ಸಂಸ್ಥೆಯಿಂದ ತನಿಖೆ ನಡೆಸಿದರೂ ಸರಿ ನಾನೇನು ಹೆದರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬಿಜೆಪಿ ಸರ್ಕಾರಕ್ಕೆ ಪ್ರತಿ ಸವಾಲು ಹಾಕಿದ್ದಾರೆ.

ಕೊಪ್ಪಳದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಪರಿಶುದ್ಧರಾಗಿರುವ ಕಾರಣದಿಂದಾಗಿಯೇ ಧೈರ್ಯದಿಂದ ಇದ್ದೇನೆ. ಇಲ್ಲದಿದ್ದರೆ ಹದರಿಕೊಂಡು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ತಮ್ಮನ್ನು ಉಳಿಸಿ ಎಂದು ಕೇಳಿಕೊಳ್ಳಬೇಕಿತ್ತೇ?. ಅಂತಹ ಪರಿಸ್ಥಿತಿ ಎದುರಾದರೆ ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆಯೇ ಹೊರತು ಗೌರವ, ಸ್ವಾಭಿಮಾನ ಕಳೆದುಕೊಂಡು ಬದುಕುವುದಿಲ್ಲ ಎಂದು ಭಾವಾವೇಷದಿಂದ ಮಾಜಿ ಸಿಎಂ ಹೇಳಿದ್ದಾರೆ.

ಯಡಿಯೂರಪ್ಪ ಅವರ ರೀತಿಯಲ್ಲಿ ತಾವು ಯಾವುದೇ ಸಂವಿಧಾನಾನಿಕ ಸಂಸ್ಥೆಗಳನ್ನು ಖರೀದಿಸಿಲ್ಲ. ಜನರ ಕಷ್ಟದ ಬಗ್ಗೆ ಗಮನ ಕೊಟ್ಟಿದ್ದೇನೆ. ಅಧಿಕಾರ ದುರುಪಯೋಗ ಮಾಡಿಕೊಂಡು ತಮ್ಮನ್ನು ರಕ್ಷಣೆ ಮಾಡಿಕೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ದೂರವಾಣಿ ಕದ್ದಾಲಿಕೆಯಲ್ಲಿ ತಮ್ಮ ಹೆಸರಿದೆಯಾ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಎಚ್ ವಿಶ್ವನಾಥ್ ಮನುಷ್ಯನೇ ಅಲ್ಲ ಎಂದು ಏಕವಚನದಲ್ಲಿ ಟೀಕಿಸಿದರು. ಅವರಿಗೆ ಅಷ್ಟು ವಯಸ್ಸಾಗಿದ್ದರೂ ಸ್ವಲ್ಪವೂ ಗಾಂಭೀರ್ಯ ಇಲ್ಲ. ಅನರ್ಹ ಶಾಸಕರೆಲ್ಲಾ ಸೇರಿ ಏನು ಘನಂದಾರಿ ಕೆಲಸ ಮಾಡಿದ್ದಾರೆ ಎಂದು ಅವರ ದೂರವಾಣಿ ಕದ್ದಾಲಿಕೆ ಮಾಡಬೇಕು. ನಿಮ್ಮ ವಯಸ್ಸು, ಹಿರಿತನಕ್ಕೆ ತಕ್ಕಂತೆ ಮಾತಾನಾಡಿ ಗೌರವಯುತವಾಗಿ ನಡೆದುಕೊಳ್ಳಿ, ನಿಮ್ಮಿಂದ ತಾವು ಏನನ್ನೂ ಕಲಿಯಬೇಕಿಲ್ಲ ಎಂದು ಎಚ್ ವಿಶ್ವನಾಥ್ ಅವರನ್ನು ತೀವ್ರ ತರಾಟೆ ತೆಗೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com