ಆಡಳಿತಾರೂಢ ಬಿಜೆಪಿ ಸರ್ಕಾರದ ವಿಶ್ವಾಸ ಹೆಚ್ಚಿಸಿದ ಉಪಚುನಾವಣಾ ಸಮರ

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಭವಿಷ್ಯವನ್ನು ನಿರ್ಧರಿಸಬಲ್ಲ ಶಕ್ತಿ ಹೊಂದಿರುವ ರಾಜ್ಯದ 15 ವಿಧಾನಸಬಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದು ಬಿಜೆಪಿಯ ಗೆಲ್ಲುವ ವಿಶ್ವಾಸವನ್ನು ಹೆಚ್ಚಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು:  ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಭವಿಷ್ಯವನ್ನು ನಿರ್ಧರಿಸಬಲ್ಲ ಶಕ್ತಿ ಹೊಂದಿರುವ ರಾಜ್ಯದ 15 ವಿಧಾನಸಬಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದು ಬಿಜೆಪಿಯ ಗೆಲ್ಲುವ ವಿಶ್ವಾಸವನ್ನು ಹೆಚ್ಚಿಸಿದೆ. 

ಜನರು ಸಿಎಂ ಯಡಿಯೂರಪ್ಪ ನೇತೃತ್ವದ ಸ್ಥಿರ ಸರ್ಕಾರಕ್ಕೆ ಮತ ಹಾಕಿದ್ದಾರೆ. 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ. 15 ಕ್ಷೇತ್ರಗಳಲ್ಲೂ ಗೆದ್ದರೂ ನಮಗೆ ಆಶ್ಚರ್ಯವೇನಿಲ್ಲ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಎಂಎಲ್'ಸಿ ರವಿ ಕುಮಾರ್ ಹೇಳಿದ್ದಾರೆ. 

ಇದೇ ವೇಳೆ ಚುನಾವಣೋತ್ತರ ಸಮೀಕ್ಷೆಗೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲಾ ಕ್ಷೇತ್ರಗಳಲ್ಲೂ ಅನರ್ಹಶಾಸಕರು ಹಾಗೂ ಬೆಂಬಲಿಗರು ಒಗ್ಗೂಡಿ ಕೆಲಸ ಮಾಡಿದ್ದಾರೆ. ಪ್ರಚಾರದ ಮಧ್ಯಂತರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮತ್ತೆ ಮೈತ್ರಿ ಮಾಡಿಕೊಳ್ಳುವುದಾಗಿ ತಿಳಿಸಿತ್ತು. ಹೀಗಾಗಿ ಕೆಲ ಕ್ಷೇತ್ರಗಳಲ್ಲಿ ಗೆಲ್ಲುವ ಅವಕಾಶವನ್ನು ಅವರೇ ಕಳೆದುಕೊಂಡಿದ್ದಾರೆಂದು ತಿಳಿಸಿದ್ದಾರೆ. 

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಯಡಿಯೂರಪ್ಪ ನೇತೃತ್ವದ ಸ್ಥಿರ ಸರ್ಕಾರಕ್ಕೆ ಜನರು ಮತ ನೀಡಿದ್ದಾರೆಂದಿದ್ದಾರೆ 

ಚುನಾವಣೋತ್ತರ ಸಮೀಕ್ಷೆ ಬಿಜೆಪಿ ಪರವಾಗಿರುವ ಹಿನ್ನೆಲೆಯಲ್ಲಿ ವರದಿಯನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ತಿರಸ್ಕರಿಸಿದೆ. ಚುನಾವಣೋತ್ತರ ಸಮೀಕ್ಷೆಗಳು ತಪ್ಪಾಗಲಿವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು 10 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಅವರು ಹೇಳಿದ್ದಾರೆ. 

ಬಿಜೆಪಿ ವಕ್ತಾರ ರಮೇಶ್ ಬಾಬು ಮಾತನಾಡಿ, ಮೂರು ಕ್ಷೇತ್ರಗಳಲ್ಲಿ ಪಕ್ಷ ಮತ್ತೆ ಗೆಲುವು ಸಾಧಿಸಲಿದೆ. ಚುನಾವಣೋತ್ತರ ಸಮೀಕ್ಷೆ ಮೇಲೆ ನಮಗೆ ನಂಬಿಕೆಯಿಲ್ಲ. ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿಯೂ ಇದೇ ರೀತಿ ಫಲಿತಾಂಶಗಳು ಹೊರಬಂದಿದ್ದವು. ಆದರೆ, ಎಲ್ಲವೂ ಸುಳ್ಳಾಗಿತ್ತು. ಇದಾದ ಬಳಿಕ ಚುನಾವಣೋತ್ತರ ಸಮೀಕ್ಷೆ ಮೇಲೆಯೇ ನಮಗೆ ನಂಬಿಕೆಯಿಲ್ಲದಂತಾಗಿದೆ. ಒಂದು ವೇಳೆ ಬಿಜೆಪಿ ಅಷ್ಟೂ ಕ್ಷೇತ್ರಗಳಲ್ಲಿ ಗೆದ್ದರೂ, ಸ್ಥಿರ ಸರ್ಕಾರ ನೀಡಲು ಸಾಧ್ಯವಿಲ್ಲ. ಆಂತರಿಕ ಸಮಸ್ಯೆಗಳಿಂದ ಬಿಜೆಪಿ ನೆಲಕ್ಕುರುಳಲಿದೆ. ಬಿಜೆಪಿಯಲ್ಲಿರುವ ಸಾಕಷ್ಟು ಹಿರಿಯ ನಾಯಕರು ಪ್ರಸ್ತುತ ಪಕ್ಷದಲ್ಲಾಗುತ್ತಿರುವ ಬೆಳವಣಿಗೆಗಳಿಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆಂದು ಹೇಳಿದ್ದಾರೆ. 

ಜೆಡಿಎಸ್ ಎಂಎಸ್'ಸಿ ಶರವಣ ಮಾತನಾಡಿ, ಕೇವಲ ಮೂರು ಕ್ಷೇತ್ರಗಳಷ್ಟೇ ಅಲ್ಲ, ರಾಜ್ಯದ ಮತ್ತೆರಡು ಕ್ಷೇತ್ರಗಳಲ್ಲೂ ಜೆಡಿಎಸ್ ಗೆಲುವು ಸಾಧಿಸಲಿದೆ. ಮತದಾರರ ನಾಡಿಮಿಡಿತ ನನಗೆ ತಿಳಿದಿದೆ. ಅನರ್ಹ ಶಾಸಕರ ಮೇಲೆ ಜನರು ಆಕ್ರೋಶಗೊಂಡಿದ್ದಾರೆಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com