ಲೋಕಸಭೆ ಚುನಾವಣೆ: ರಾಜ್ಯದಲ್ಲಿ 22 ಸ್ಥಾನ ಗೆಲ್ಲೋವರೆಗೂ ಮನೆಗೆ ಹೋಗುವುದಿಲ್ಲ - ಬಿಎಸ್​ವೈ

ಲೋಕಸಭಾ ಚುನಾವಣೆಯಲ್ಲಿ 22 ಸ್ಥಾನಗಳನ್ನು ಗೆಲ್ಲುವವರೆಗೂ ಮನೆಗೆ ಹೋಗುವುದಿಲ್ಲ. ಚುನಾವಣೆ ಮುಗಿಯೋವರೆಗೂ ಮನೆಯ ಬಗ್ಗೆ ಯೋಚನೆಯೇ...
ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ
ಹಾವೇರಿ: ಲೋಕಸಭಾ ಚುನಾವಣೆಯಲ್ಲಿ 22 ಸ್ಥಾನಗಳನ್ನು ಗೆಲ್ಲುವವರೆಗೂ ಮನೆಗೆ ಹೋಗುವುದಿಲ್ಲ. ಚುನಾವಣೆ ಮುಗಿಯೋವರೆಗೂ ಮನೆಯ ಬಗ್ಗೆ ಯೋಚನೆಯೇ ಮಾಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಅವರು ಸೋಮವಾರ ಸಂಕಲ್ಪ ಮಾಡಿದ್ದಾರೆ.
ಇಂದು ಹಾವೇರಿಯಲ್ಲಿ ಮೋದಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಬಿಎಸ್ ವೈ, ಪ್ರಧಾನಿ ನರೇಂದ್ರ ಮೋದಿಗೆ ಸರಿಸಾಟಿಯಾದ ವ್ಯಕ್ತಿ ದೇಶದಲ್ಲಿ ಮತ್ತೊಬ್ಬರಿಲ್ಲ. ಸೂರ್ಯ-ಚಂದ್ರರು ಇರುವುದು ಎಷ್ಟು ಸತ್ಯವೋ ಮೋದಿ ಮತ್ತೊಮ್ಮೆ ಪ್ರಧಾನಿ ಆಗೋದು ಅಷ್ಟೇ ಸತ್ಯ ಎಂದರು.
ಇದೇ ವೇಳೆ ರಾಜ್ಯ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಯಡಿಯೂರಪ್ಪ, ಹಣ ಬಲ, ತೋಳ್ಬಲ ಹಾಗೂ ಹೆಂಡದ ಬಲದಿಂದ ಅಧಿಕಾರಕ್ಕೆ ಬರುತ್ತೇವೆ ಎಂದು ಕೆಲವರು ಭ್ರಮೆಯಲ್ಲಿದ್ದಾರೆ. ರಾಜ್ಯ ಸರ್ಕಾರ ಜನರ ಪಾಲಿಗೆ ಬದುಕಿದೆಯಾ ಎಂಬ ಸಂಶಯ ಮೂಡತೊಡಗಿದೆ ಎಂದು ಕಿಡಿಕಾರಿದರು.
ಕಳೆದ ಮೂರು ದಿನಗಳಿಂದ ಬಂಡೀಪುರದಲ್ಲಿ ಕಾಡ್ಗಿಚ್ಚು ಸಂಭವಿಸಿ ಅರಣ್ಯವೆಲ್ಲ ನಾಶವಾಗುತ್ತಿದೆ. ಮಾಹಿತಿ ತಿಳಿದ ಕೆಲವೇ ಗಂಟೆಗಳಲ್ಲಿ ಹೆಲಿಕಾಪ್ಟರ್ ಮೂಲಕ ಬೆಂಕಿ ನಂದಿಸಬಹುದಿತ್ತು. ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಈಗ ಹೆಲಿಕಾಪ್ಟರ್ ಮೂಲಕ ಬೆಂಕಿ ನಂದಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಬೆಂಗಳೂರಿನ ಏರ್ ಶೋದಲ್ಲಿ ಬೆಂಕಿ ಬಿದ್ದಾಗಲೂ ಇವರ ಕೈಯಲ್ಲಿ ಬೆಂಕಿ ನಂದಿಸಲು ಆಗಲಿಲ್ಲ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com