ಆಪರೇಷನ್ ಕಮಲ ಭೀತಿ; ಜೆಡಿಎಸ್ ಶಾಸಕರ ಜೊತೆ ಮಧ್ಯರಾತ್ರಿ ಸಿಎಂ 'ರಹಸ್ಯ ಸಭೆ'

ಆಪರೇಷನ್ ಕಮಲ ಭೀತಿಯಿಂದ ಕಾಂಗ್ರೆಸ್ ಶಾಸಕರನ್ನು ಈಗಲ್ಟನ್ ರೆಸಾರ್ಟ್ ನಲ್ಲಿ ಕೂರಿಸಲಾಗಿದ್ದರೆ...
ಸಿಎಂ ಹೆಚ್ ಡಿ ಕುಮಾರಸ್ವಾಮಿ
ಸಿಎಂ ಹೆಚ್ ಡಿ ಕುಮಾರಸ್ವಾಮಿ

ಮೈಸೂರು: ಆಪರೇಷನ್ ಕಮಲ ಭೀತಿಯಿಂದ ಕಾಂಗ್ರೆಸ್ ಶಾಸಕರನ್ನು ಈಗಲ್ಟನ್ ರೆಸಾರ್ಟ್ ನಲ್ಲಿ ಕೂರಿಸಲಾಗಿದ್ದರೆ, ಇತ್ತ ಜೆಡಿಎಸ್ ನ ಸಚಿವರು ಮತ್ತು ಶಾಸಕರನ್ನು ಸೇರಿಸಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮೈಸೂರು ಹೊರವಲಯದ ರೆಸಾರ್ಟ್ ಗೆ ಕರೆಸಿಕೊಂಡು ಕಳೆದ ಶನಿವಾರ ಮಧ್ಯರಾತ್ರಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯ ರಾಜಕೀಯ ಬಿಕ್ಕಟ್ಟಿನಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಶಾಸಕರನ್ನು ಸೆಳೆದುಕೊಳ್ಳುತ್ತಿರುವುದರ ಪೈಪೋಟಿ ಮಧ್ಯೆ ಜೆಡಿಎಸ್ ನಲ್ಲಿ ಕೂಡ ಆಪರೇಶನ್ ಕಮಲದ ಭೀತಿ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಜೆಡಿಎಸ್ ನಲ್ಲಿ ಕೂಡ ಸಚಿವ ಸ್ಥಾನ ಸಿಗದೆ ಅತೃಪ್ತ ಶಾಸಕರಿದ್ದು ಅವರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ, ಸ್ವಲ್ಪ ಸಮಯ ತಾಳ್ಮೆಯಿಂದ ಕಾಯಿರಿ ಎಲ್ಲವೂ ಸರಿಹೋಗುತ್ತದೆ, ಎಲ್ಲರಿಗೂ ಪಕ್ಷದಲ್ಲಿ ಸ್ಥಾನಮಾನ ಮತ್ತು ಅವಕಾಶ ನೀಡುವುದಾಗಿ ಮನವೊಲಿಸಲು ಪ್ರಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಶನಿವಾರ ರಾತ್ರಿ ಸಿಎಂ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರ್ ಅಭಿನಯದ ಸೀತಾರಾಮ ಕಲ್ಯಾಣ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಟಾರ್ಚ್ ಲೈಟ್ ಪೆರೇಡ್ ಮೈದಾನದಲ್ಲಿ ಏರ್ಪಡಿಸಲಾಗಿತ್ತು. ಅದು ಮುಗಿದ ನಂತರ ಕುಮಾರಸ್ವಾಮಿ ಮತ್ತು ಕೆಲ ಸಚಿವರು ಮೈಸೂರು-ಬನ್ನೂರು ರಸ್ತೆಯಲ್ಲಿರುವ ಜಲಮಹಲ್ ರೆಸಾರ್ಟ್ ಗೆ ಹೋಗಿದ್ದರು.

 ಸಿಎಂ ಜೊತೆಗೆ ಜೆಡಿಎಸ್ ರಾಜ್ಯಾಧ್ಯಕ್ಷ  ಎ.ಎಚ್ ವಿಶ್ವನಾಥ್, ಜಿಲ್ಲಾ ಉಸ್ತುವಾರಿ ಸಚಿವ ಜಿ ಟಿ ದೇವೇಗೌಡ, ಪ್ರವಾಸೋದ್ಯಮ ಇಲಾಖೆ ಸಚಿವ ಸಾ ರಾ ಮಹೇಶ್, ಸಣ್ಣ ನೀರಾವರಿ ಸಚಿವ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ ಎಸ್ ಪುಟ್ಟರಾಜು, ಸಹಕಾರ ಸಚಿವ ಬಂಡೆಪ್ಪ ಕಾಶಂಪುರ, ಟಿ ನರಸೀಪುರ ಶಾಸಕ ಸಿ ಎಸ್ ಅಶ್ವಿನ್ ಕುಮಾರ್, ವಿಧಾನಪರಿಷತ್ ಸದಸ್ಯ ಕೆ ಟಿ ಶ್ರೀಕಂಠೇ ಗೌಡ ಮತ್ತು ಮರಿತಿಬ್ಬೇ ಗೌಡ ತೆರಳಿದ್ದರು.

ರೆಸಾರ್ಟ್ ನಲ್ಲಿ ನಡೆದ ರಹಸ್ಯ ಸಭೆಯಲ್ಲಿ 37 ಶಾಸಕರು ಕೂಡ ಭಾಗಿಯಾಗಿದ್ದು ಸುಮಾರು 25 ಕೊಠಡಿಗಳನ್ನು ಕಾಯ್ದಿರಿಸಲಾಗಿತ್ತು. ಶಾಸಕರ ಬೇಡಿಕೆಗಳನ್ನು ಪರಿಗಣಿಸಿ ಸೂಕ್ತ ಸಮಯದಲ್ಲಿ ಸ್ಥಾನಮಾನ ನೀಡುವುದಾಗಿ ಮುಖ್ಯಮಂತ್ರಿಗಳು ಶಾಸಕರಿಗೆ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com