ತೀವ್ರಗೊಂಡ ರಾಜಕೀಯ ಬಿಕ್ಕಟ್ಟು: ಇಂದು ಸಂಜೆ ಸಿಎಂ ಬೆಂಗಳೂರಿಗೆ, ಮುಖ್ಯಮಂತ್ರಿಯತ್ತ ಎಲ್ಲರ ಚಿತ್ತ

ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರದ 13 ಮಂದಿ ಶಾಸಕರು ತಮ್ಮ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ರಾಜಕೀಯ ಬಿಕ್ಕಟ್ಟು ...
ಸಿಎಂ ಹೆಚ್ ಡಿ ಕುಮಾರಸ್ವಾಮಿ
ಸಿಎಂ ಹೆಚ್ ಡಿ ಕುಮಾರಸ್ವಾಮಿ
ಬೆಂಗಳೂರು: ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರದ 13 ಮಂದಿ ಶಾಸಕರು ತಮ್ಮ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿದೆ. ಇದೀಗ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರತ್ತ ರಾಜ್ಯ ರಾಜಕಾರಣದ ಚಿತ್ತ ನೆಟ್ಟಿದೆ.
ಕುಮಾರಸ್ವಾಮಿ ಇಂದು ಸಂಜೆ ಅಮೆರಿಕ ಪ್ರವಾಸದಿಂದ ವಾಪಸ್ ಆಗುತ್ತಿದ್ದಂತೆ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಅಲ್ಲಿ ಮುಂದಿನ ರಾಜಕೀಯ ಕಾರ್ಯಾಚರಣೆಯ ಸ್ವರೂಪ ಸಿದ್ಧವಾಗಲಿದೆ.
ಮೈತ್ರಿ ಸರ್ಕಾರದ ತಿರುಗಿಬಿದ್ದು ರಾಜೀನಾಮೆ ನೀಡಿರುವ ಶಾಸಕರನ್ನು ಮನವೊಲಿಸುವ, ಇಲ್ಲವೆ ಬಿಜೆಪಿ ಆಪರೇಷನ್ ಕಮಲಕ್ಕೆ ಪ್ರತಿಯಾಗಿ ಆಪರೇಷನ್ ನಡೆಸುವುದು ಸೇರಿದಂತೆ ಹಲವು ಆಯ್ಕೆಗಳನ್ನು ಮುಂದಿಟ್ಟುಕೊಂಡು ಜೆಡಿಎಸ್ ಶಾಸಕಾಂಗ ಸಭೆ ನಡೆಸಲಾಗುತ್ತಿದೆ. ಕಾಂಗ್ರೆಸ್ ನಾಯಕರ ಧೋರಣೆಯಿಂದ ಬೇಸತ್ತು ಮುಖ್ಯಮಂತ್ರಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನುವ ಸುದ್ದಿ ಸಹ ಹರಿದಾಡುತ್ತಿದ್ದು, ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದುಕೊಂಡಿದೆ.
ಮುಖ್ಯಮಂತ್ರಿ ಕುಮಾರ ಸ್ವಾಮಿ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಈಗಾಗಲೇ ಹಲವು ರಾಜಕೀಯ ತಂತ್ರಗಾರಿಕೆಯನ್ನು ರೂಪಿಸಿದ್ದಾರೆ. ರಾಜೀನಾಮೆ ಅಂಗೀಕಾರ ವಿಚಾರವನ್ನು ಮಂಗಳವಾರ ಕೈಗೆತ್ತಿಕೊಳ್ಳುವುದಾಗಿ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಹೇಳಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರಿಗೆ ಸೂಕ್ತ ದಾಳ ಉರುಳಿಸಲು ಇನ್ನೂ 48 ಗಂಟೆಗಳ ಅವಕಾಶವಿದೆ. ಇದೀಗ ಕುಮಾರ ಸ್ವಾಮಿ ನಗರಕ್ಕೆ ಆಗಮಿಸಿದ ಬಳಿಕ ರಾಜಕೀಯ ಚಿತ್ರಣದಲ್ಲಿ ಬದಲಾವಣೆಯಾಗುವ ಸಾಧ್ಯತೆಗಳು ದಟ್ಟವಾಗಿವೆ.
ಮುಖ್ಯಮಂತ್ರಿ ಹುದ್ದೆಗೆ ಕಾಂಗ್ರೆಸ್ ನಿಂದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಸೇರಿದಂತೆ ಹಲವು ಹೆಸರುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದ್ದು, ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಮುಂದುರೆಸುವ, ಎಚ್.ಡಿ. ರೇವಣ್ಣ ಅವರನ್ನು ಉಪಮುಖ್ಯಮಂತ್ರಿ ಮಾಡುವ ಕುರಿತೂ ಊಹಾಪೋಹ ಹರಿದಾಡುತ್ತಿವೆ. ಜತೆಗೆ ಕಾಂಗ್ರೆಸ್ ನಲ್ಲಿ ಮತ್ತೊಂದು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಿ, ರಾಮಲಿಂಗಾ ರೆಡ್ಡಿ ಅವರನ್ನು ಈ ಸ್ಥಾನಕ್ಕೆ ತರುವ ಕುರಿತು ಸಮಾಲೋಚನೆಗಳು ನಡೆಯುತ್ತಿವೆ. ಕಾಂಗ್ರೆಸ್ ಸಹ ಹಲವು ಸೂತ್ರಗಳನ್ನು ಸಿದ್ಧಪಡಿಸುತ್ತಿದ್ದು, ಇದಕ್ಕೆ ಜೆಡಿಎಸ್ ಸಮ್ಮತಿ ಸೂಚಿಸಬೇಕಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರನ್ನು ಸಚಿವ ಡಿ.ಕೆ. ಶಿವಕುಮಾರ್ ಪದ್ಮನಾಭನಗರ ನಿವಾಸದಲ್ಲಿ ಭೇಟಿ ಮಾಡಿ ಮಾಡಿ ಚರ್ಚೆ ನಡೆಸಿದ್ದು, ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ, ಎಚ್.ಡಿ. ರೇವಣ್ಣ, ಡಿ.ಸಿ. ತಮ್ಮಣ್ಣ, ರಾಜ್ಯಸಭೆ ಸದಸ್ಯ ಕುಪೇಂದ್ರರೆಡ್ಡಿ ಉಪಸ್ಥಿತರಿದ್ದರು. ಇದು ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಶಿವಕುಮಾರ್ ಎದುರು ದೇವೇಗೌಡರು, ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ ಎನ್ನಲಾಗಿದೆ. ರಾಜೀನಾಮೆ ನೀಡಿರುವ ಶಾಸಕರು ಯಾರ ಶಿಷ್ಯಂದಿರು. ಯಾರ ಮಾತು ಕೇಳಿ ರಾಜೀನಾಮೆ ನೀಡಿದ್ದಾರೆ ಎನ್ನುವುದು ತಮಗೆ ಗೊತ್ತಿಲ್ಲವೆ?. ಕುಮಾರ ಸ್ವಾಮಿ ಬರಲಿ, ನಂತರ ನಮ್ಮ ಮುಂದಿನ ತೀರ್ಮಾನ ತಿಳಿಸುತ್ತೇವೆ ಎಂದು ಹೇಳಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಅವರು ಸಹ ದೇವೇಗೌಡರೊಂದಿಗೆ ಚರ್ಚೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಜೀನಾಮೆ ಕೊಟ್ಟ ಯಾವುದೇ ಶಾಸಕರನ್ನು ನಾವು ಇನ್ನೂ ಸಂಪರ್ಕ ಮಾಡಿಲ್ಲ. ಸಂಜೆ ಜೆಡಿಎಸ್ ಶಾಸಕಾಂಗ ಸಭೆ ಇದ್ದು, ಸಭೆಯಲ್ಲಿ ಎಲ್ಲಾ ಶಾಸಕರು ಕುಳಿತು ಮುಂದಿನ ನಡೆ ಬಗ್ಗೆ ತೀರ್ಮಾನಿಸುತ್ತೇವೆ ಎಂದರು.
ಪ್ರಜಾಪ್ರಭುತ್ವದಲ್ಲಿ ಸಂಖ್ಯಾಬಲ ಬಹಳ ಮುಖ್ಯ. ಹೀಗಾಗಿ ಸಂಖ್ಯಾಬಲ ಇರುವವರೆಗೆ ಸರ್ಕಾರ ಮುಂದುವರೆಯುತ್ತದೆ. ಸರ್ಕಾರ ಉಳಿಸಿಕೊಳ್ಳಲು ಕೊನೆವರೆಗೆ ಪ್ರಯತ್ನ ಮಾಡುತ್ತೇವೆ. ಮುಂದಿನ ಬೆಳವಣಿಗೆಗಳನ್ನು ಕಾದು ನೋಡಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಶ್ವನಾಥ್ ಅವರು ಸಮನ್ವಯ ಸಮಿತಿ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಎಚ್.ಕೆ. ಕುಮಾರ ಸ್ವಾಮಿ, ಸಮನ್ವಯ ಸಮಿತಿಗೆ ಕಾಂಗ್ರೆಸ್ - ಜೆಡಿಎಸ್ ರಾಜ್ಯಾಧ್ಯಕ್ಷರನ್ನು ಸೇರಿಸಿರಲಿಲ್ಲ. ಅದೆಲ್ಲ ಈಗ ಮುಗಿದ ಅಧ್ಯಾಯ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com