ಇನ್ನೆಷ್ಟು ದಿನ ಈ ಪ್ರಹಸನ? ಸಿಎಂಗೆ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಇಲ್ಲ: ಬಿಎಸ್ ವೈ

ರಾಜ್ಯ ಸರ್ಕಾರಕ್ಕೆ ಬಹುಮತ ಇಲ್ಲದಿರುವುದರಿಂದ ಅಧಿಕಾರದಲ್ಲಿ ಮುಂದುವರಿಯಲು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರಿಗೆ...
ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ
ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಬಹುಮತ ಇಲ್ಲದಿರುವುದರಿಂದ ಅಧಿಕಾರದಲ್ಲಿ ಮುಂದುವರಿಯಲು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ನೀಡಿರುವ ಶಾಸಕರು ಸದನಕ್ಕೆ ಹಾಜರಾಗಬಹುದು ಅಥವಾ ಹಾಜರಾಗದೇ ಇರಬಹುದು. ಆದರೆ ಅವರ ಮೇಲೆ ಯಾವುದೇ ಒತ್ತಡ ಹೇರುವಂತಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಸ್ಪೀಕರ್ ಮಾತಿಗೆ ಗೌರವಕೊಟ್ಟು ನಾವು ಸೋಮವಾರದವರೆಗೆ ಕಾಯುತ್ತೇವೆ. ಸೋಮವಾರ ಎಲ್ಲವೂ ನಿರ್ಧಾರವಾಗ ಬೇಕು ಎಂದರು.
ಶ್ರೀಮಂತ ಪಾಟೀಲ್ ಅವರನ್ನು ಅಪಹರಿಸಲಾಗಿದೆ ಎಂದು ಕಾಂಗ್ರೆಸ್ ಶಾಸಕರು ಆರೋಪಿಸಿದ್ದರು. ಆದರೆ ಪಾಟೀಲ್ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸರ್ಕಾರ ರಾಜ್ಯಪಾಲರ ನಿರ್ದೇಶನಕ್ಕೂ ಗೌರವ ಕೊಟ್ಟಿಲ್ಲ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ಅದನ್ನು ಕೂಡ ಸಮರ್ಥವಾಗಿ ನಿಭಾಯಿಸಿಲ್ಲ ಎಂದು ಟೀಕಿಸಿದರು.
ರಾಜ್ಯ ಸರ್ಕಾರಕ್ಕೆ ಬಹುಮತವಿಲ್ಲ. ಮುಖ್ಯಮಂತ್ರಿಗೆ ನೈತಿಕತೆ ಇದ್ದರೆ ತಕ್ಷಣ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕಿತ್ತು. ಬಹುಮತ ಸಾಬೀತುಪಡಿಸುವಂತೆ ನಾವು ಸೋಮವಾರ ಕೂಡ ಒತ್ತಾಯಿಸುತ್ತೇವೆ ಎಂದರು.
ಕೋಲಾರ ಶಾಸಕ ಶ್ರೀನಿವಾಸ ಗೌಡ ಅವರು ದುರುದ್ದೇಶದಿಂದ ಬಿಜೆಪಿ ನಾಯಕರು 5 ಕೋಟಿ ರೂಪಾಯಿ ನೀಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಈ ಆರೋಪ ಶುದ್ಧ ಸುಳ್ಳು. ಅವರು ಅಷ್ಟೊಂದು ಹಣವನ್ನು ಸ್ವೀಕರಿಸಿದ್ದು, ಇಟ್ಟುಕೊಂಡಿದ್ದು ತಪ್ಪು. ಈ ಹಿನ್ನೆಲೆಯಲ್ಲಿ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡನೆಗೆ ಅವಕಾಶ ಕೇಳಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.
ಎಚ್‌.ವಿಶ್ವನಾಥ್ ಅವರ ವಿರುದ್ಧ ಸಚಿವ ಸಾ ರಾ ಮಹೇಶ್ ಕೋಟ್ಯಂತರ ರೂಪಾಯಿ ಹಣಕಾಸಿನ ವ್ಯವಹಾರದ ಆರೋಪ ಮಾಡಿದ್ದಾರೆ. ಇದು ಕೂಡ ಸುಳ್ಳು. ಸಮ್ಮಿಶ್ರ ಸರ್ಕಾರ ರಾಜಕೀಯ ಡೊಂಬರಾಟ ಮಾಡುತ್ತಿದೆ. ಇನ್ನೆಷ್ಟು ದಿನ ಈ ಪ್ರಹಸನ ನಡೆಯತ್ತದೆ ಎಂದು ಪ್ರಶ್ನಿಸಿದ ಅವರು, ಸೋಮವಾರ ಎಲ್ಲವೂ ಅಂತ್ಯವಾಗಲಿದೆ. ಅಂದು ವಿಶ್ವಾಸಮತ ಯಾಚನೆಯ ನಿರ್ಣಯವನ್ನು ಮತಕ್ಕೆ ಹಾಕುವುದಾಗಿ ಸ್ಪೀಕರ್ ಭರವಸೆ ನೀಡಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com