ಕೇಂದ್ರದಲ್ಲಿ ವೀರಶೈವ ಲಿಂಗಾಯತರಿಗೆ ಸಚಿವ ಸ್ಥಾನ ನೀಡಲು ಶಾಮನೂರು ಶಿವಶಂಕರಪ್ಪ ಆಗ್ರಹ

ಕೇಂದ್ರ ಸಚಿವ ಸಂಪುಟದಲ್ಲಿ ವೀರಶೈವ ಸಮುದಾಯದವರಿಗೆ ಸಚಿವ ಸ್ಥಾನ ನೀಡದೇ ಇರುವುದಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಮನೂರು ಶಿವಶಂಕರಪ್ಪ
ಶಾಮನೂರು ಶಿವಶಂಕರಪ್ಪ

ಬೆಂಗಳೂರು: ಕೇಂದ್ರ ಸಚಿವ ಸಂಪುಟದಲ್ಲಿ ವೀರಶೈವ ಸಮುದಾಯದವರಿಗೆ ಸಚಿವ ಸ್ಥಾನ ನೀಡದೇ ಇರುವುದಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಖಿಲ ಭಾರತ ವೀರಶೈವ ಮಹಾಸಭಾ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತರಿಗೆ ಕೇಂದ್ರ ಸರ್ಕಾರ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಿಲ್ಲ. ವೀರಶೈವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಅನ್ಯಾಯ ಮಾಡಲಾಗಿದೆ. ಸಚಿವ ಸಂಪುಟ ಭರ್ತಿಗೆ ಇನ್ನೂ 28 ಸ್ಥಾನಗಳು ಬಾಕಿ ಉಳಿದಿವೆ. ಉಳಿದ ಸ್ಥಾನಗಳನ್ನು ತುಂಬುವ ಸಂದರ್ಭದಲ್ಲಿಯಾದರೂ ಲಿಂಗಾಯತರಿಗೆ  ಕನಿಷ್ಟ ಎರಡರಿಂದ ಮೂರು ಸಂಪುಟ ದರ್ಜೆ ಸಚಿವ ಸ್ಥಾನ ನೀಡಿ ಎಂದು ಅವರು ಆಗ್ರಹಿಸಿದರು.

ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾದ 25 ಸಂಸದರಲ್ಲಿ 9 ಸಂಸದರು ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಗೆಲುವು ಸಾಧಿಸಿದ 25 ಕ್ಷೇತ್ರಗಳಲ್ಲಿ ಲಿಂಗಾಯತ ಸಮುದಾಯದವರು ನಿರ್ಣಾಯಕರಾಗಿದ್ದಾರೆ. ಬಿಜೆಪಿ ಸರ್ಕಾರ ರಚನೆಗೆ ದೊಡ್ಡ ಪ್ರಮಾಣದಲ್ಲಿ ಲಿಂಗಾಯತರು ಬೆಂಬಲಿಸಿದ್ದರೂ ಸಹ ಒಬ್ಬರಿಗೆ ಮಾತ್ರ ರಾಜ್ಯ ಸಚಿವ ಸ್ಥಾನ ಕೊಟ್ಟಿದ್ದು ಅದು ಸಹ ಸಹಾಯಕ ಸಚಿವರ ಖಾತೆ. ಈ ಇಲಾಖೆ ಸಚಿವರಿಗೂ ಒಂದೂ ಕಡತವೂ ಬರುವುದಿಲ್ಲ. ಇದು ಕೇವಲ ಕಾರು,ಆಪ್ತ ಸಹಾಯಕ, ಮೊಬೈ‍ಲ್ ಬಳಕೆಗೆ ಮಾತ್ರ ಸೀಮಿತ ಎಂದು ಅವರು ವ್ಯಂಗ್ಯವಾಡಿದರು.

ಬಿಜೆಪಿ ವರಿಷ್ಠರು ಮಾಡಿರುವ ತಪ್ಪನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಮರ್ಥಿಸಿಕೊಳ್ಳಬೇಕು. ವೀರಶೈವ ಲಿಂಗಾಯತ ಸಮುದಾಯಕ್ಕೆ ಎರಡು ಅಥವಾ ಮೂರು ಜವಾಬ್ದಾರಿಯುತ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಅಥವಾ ಸ್ವತಂತ್ರ ಖಾತೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷದಿಂದ ವೀರಶೈವ ಲಿಂಗಾಯತರಿಗೆ ನಿರಂತರ ಅನ್ಯಾಯ ಮಾಡಲಾಗಿದೆ. ಹೀಗಾಗಿ ಅಖಿಲ ಭಾರತ ವೀರಶೈವ ಮಹಾಸಭಾ ಮೂಲಕ ವೀರಶೈವ ಲಿಂಗಾಯತ ಸಮುದಾಯಕ್ಕೆ ಹೆಚ್ಚಿನ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರದ ಪ್ರಮುಖರಿಗೆ ಮಹಾಸಭಾದ ಸಂದೇಶ ರವಾಸುತ್ತಿದ್ದೇವೆ. ಇದಕ್ಕೂ ಸ್ಪಂದಿಸದಿದ್ದಲ್ಲಿ ಲಿಂಗಾಯತ ಸಂಸದರೊಂದಿಗೆ ಚರ್ಚಿಸಿ ಪಕ್ಷದ ವರಿಷ್ಠರಿಗೆ ಸಂದೇಶ ನೀಡುವ ಕೆಲಸ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಕುರಿತು ಪ್ರತಿಕ್ರಿಯಿಸಿದ ಶಾಮನೂರು ಶಿವಶಂಕರಪ್ಪ, ಮೈತ್ರಿ ಸರ್ಕಾರ ಪೂರ್ಣಾವಧಿ ಉಳಿಯುವುದು ಕಷ್ಟ ಸಾಧ್ಯವಾಗಿದ್ದು, ಇನ್ನೊಂದು ವರ್ಷ ಇದು ಮುಂದುವರೆಯಬಹುದಷ್ಟೇ.ಪಕ್ಷದ ವೇದಿಕೆಯಲ್ಲಿ ಈ ಬಗ್ಗೆ ಸಮಗ್ರವಾಗಿ ಚರ್ಚಿಸಲಾಗಿದೆ. ಹಿರಿಯ ನಾಯಕರು ಪಕ್ಷದ ವರಿಷ್ಠರ ನಡೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದನ್ನೆಲ್ಲಾ ಇಲ್ಲಿ ಚರ್ಚಿಸಲಾಗುವುದಿಲ್ಲ ಎಂದು ಪ್ರಶ‍್ನೆಯೊಂದಕ್ಕೆ ಅವರು ಉತ್ತರಿಸಿದರು.

ಮೈತ್ರಿ ಸರ್ಕಾರವನ್ನು ಮುಂದುವರೆಸಲು ವಿಶೇಷವಾಗಿ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ವರಿಷ್ಠರು ತೀರ್ಮಾನಿಸಿದ್ದರೆ,ಕೆಲವರು ಮೈತ್ರಿ ಮುಂದುವರೆಯುವಿಕೆಗೆ ವಿರೋಧ ತೋರಿದ್ದಾರೆ. ಸಭೆಯಲ್ಲಿ ಹಲವಾರು ಹಿರಿಯ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಶಾಮನೂರು ಶಿವಶಂಕರಪ್ಪ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com