ಜಿಂದಾಲ್ ಕಂಪೆನಿಗೆ ಹೊಸ ಭೂಮಿ ನೀಡಿಲ್ಲ- ಕೃಷ್ಣ ಬೈರೇಗೌಡ

ಜಿಂದಾಲ್ ಕಂಪೆನಿಗೆ ಸರ್ಕಾರ ಹೊಸದಾಗಿ ಭೂಮಿಯನ್ನು ಮಾರಾಟ ಮಾಡಿಲ್ಲ. 2006 ರಲ್ಲಿಯೇ ಗುತ್ತಿಗೆ ಕರಾರು ಹಾಗೂ ಶುದ್ಧ ಕ್ರಯಕ್ಕೆ ಭೂಮಿಯನ್ನು ನೀಡಲಾಗಿತ್ತು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟನೆ ನೀಡಿದ್ದಾರೆ.
ಕೃಷ್ಣ ಬೈರೇಗೌಡ
ಕೃಷ್ಣ ಬೈರೇಗೌಡ
ಬೆಂಗಳೂರು: ಜಿಂದಾಲ್ ಕಂಪೆನಿಗೆ ಸರ್ಕಾರ ಹೊಸದಾಗಿ ಭೂಮಿಯನ್ನು ಮಾರಾಟ ಮಾಡಿಲ್ಲ. 2006 ರಲ್ಲಿಯೇ ಗುತ್ತಿಗೆ ಕರಾರು ಹಾಗೂ ಶುದ್ಧ ಕ್ರಯಕ್ಕೆ ಭೂಮಿಯನ್ನು ನೀಡಲಾಗಿತ್ತು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟನೆ ನೀಡಿದ್ದಾರೆ.
ಕಳೆದ ಸಚಿವ ಸಂಪುಟದಲ್ಲಿ ರಾಜ್ಯ ಸರ್ಕಾರ 3,666 ಎಕರೆ ಭೂಮಿಯನ್ನು ಜಿಂದಾಲ್ ಕಂಪೆನಿಗೆ ಮಾರಾಟ ಮಾಡಲು ಸಂಪುಟ ಒಪ್ಪಿಗೆ ನೀಡಿತ್ತು. ಸಂಪುಟದ ಈ ನಿರ್ಣಯಕ್ಕೆ ಕಾಂಗ್ರೆಸ್ ಹಿರಿಯ ಮುಖಂಡ ಹೆಚ್.ಕೆ.ಪಾಟೀಲ್ ಒಂದೆಡೆ ವಿರೋಧ ವ್ಯಕ್ತಪಡಿಸಿದ್ದರೆ, ಮತ್ತೊಂದೆ ಬಿಜೆಪಿ ಇದರ ವಿರುದ್ಧ ಹೋರಾಟ ಮಾಡಲು ಮುಂದಾಗಿದೆ.
ಜಿಂದಾಲ್‍ಗೆ ಭೂಮಿ ಮಾರಾಟ ವಿಚಾರಕ್ಕೆ ಸರ್ಕಾರದ ನಿರ್ಣಯಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆ ಗುರುವಾರ ನಡೆದ ಸಂಪುಟ ಸಭೆಯಲ್ಲಿ ನಿರ್ಣಯವನ್ನು ಹಿಂಪಡೆಯುವ ಬಗ್ಗೆ ಅನೌಪಚಾರಿಕವಾಗಿ ಚರ್ಚೆ ನಡೆದಿದೆ ಎನ್ನಲಾಗಿದೆಯಾದರೂ ಇದನ್ನು ಸಚಿವ ಕೃಷ್ಣಬೈರೇಗೌಡ ತಳ್ಳಿಹಾಕಿದ್ದಾರೆ.
ಜಿಂದಾಲ್‍ ಕಂಪೆನಿಗೆ ಭೂಮಿಯನ್ನು ಮಾರಾಟ ಮಾಡಲಾಗಿದೆಯೇ ಹೊರತು ಭೂಮಿಯಲ್ಲಿ ಗಣಿಗಾರಿಕೆ ನಡೆಸಲು ಒಪ್ಪಿಗೆ ಕೊಟ್ಟಿಲ್ಲ. ಭೂಮಿ ಮಾತ್ರ ಕಂಪೆನಿಗೆ ಸೇರಿದ್ದು, ಒಂದುವೇಳೆ ಆ ಭೂಮಿಯಲ್ಲಿ ಖನಿಜ ಸಂಪತ್ತು ಗಳಿದ್ದರೆ ಅದು ಸಾರ್ವಜನಿಕ ಸರ್ಕಾರದ ಸಂಪತ್ತಾಗಿರುತ್ತದೆ. ಫ್ಯಾಕ್ಟರಿ ಭೂಮಿಯಲ್ಲಿ ಗಣಿಗಾರಿಕೆ ನಡೆಸುವ ಪ್ರಶ‍್ನೆಯೇ ಉದ್ಭವಿಸುವುದಿಲ್ಲ. ಕಾರ್ಖಾನೆ ಇರುವ ಜಾಗವನ್ನು ಶುದ್ಧಕ್ರಯಕ್ಕೆ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಈ ಬಾರಿ ಸಚಿವ ಸಂಪುಟ ಸಭೆಯಲ್ಲಿ ಭೂಮಿ ಮಾರಾಟ ಹಿಂಪಡೆಯುವ ಬಗ್ಗೆ ಚರ್ಚೆ ನಡೆದಿಲ್ಲ. ಆದರೆ ಸರೋಜಿನಿ ಮಹಿಷಿ ವರದಿ ಅನ್ವಯ ಕನ್ನಡಿಗರಿಗೆ ಉದ್ಯೋಗ ನೀಡುವ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com