ಕಲಬುರಗಿ ಜಿಲ್ಲೆಯ 28 ಪ್ರಮುಖ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿ ಒಪ್ಪಿಗೆ: ಪ್ರಿಯಾಂಕ್‌ ಖರ್ಗೆ

ಜಿಲ್ಲೆಯ 28 ಪ್ರಮುಖ ಬೇಡಿಕೆಗಳ ಪಟ್ಟಿಯನ್ನು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಸಲ್ಲಿಸಿದ್ದು, ಎಲ್ಲಾ ಬೇಡಿಕೆ ಈಡೇರಿಸುವುದಾಗಿ ಅವರು ಭರವಸೆ ...
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ
ಕಲಬುರಗಿ: ಜಿಲ್ಲೆಯ 28 ಪ್ರಮುಖ ಬೇಡಿಕೆಗಳ ಪಟ್ಟಿಯನ್ನು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಸಲ್ಲಿಸಿದ್ದು, ಎಲ್ಲಾ ಬೇಡಿಕೆ ಈಡೇರಿಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಹೇರೂರು (ಬಿ) ಗ್ರಾಮದಲ್ಲಿ ನಡೆಯಬೇಕಿದ್ದ ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯ ಮಳೆಯಿಂದ ಮೂಂದೂಡಿದ್ದು ಅನಾನುಕೂಲವಾಗಿರುವುದಕ್ಕೆ ಸಾರ್ವಜನಿಕರ ಕ್ಷಮೆಯಾಚಿಸುತ್ತೇನೆ, ಮುಂದಿನ ಗ್ರಾಮವಾಸ್ತವ್ಯ ಎಲ್ಲಿ ಎನ್ನುವುದರ ಕುರಿತು ಜುಲೈ ತಿಂಗಳ ಮೊದಲ ವಾರದಲ್ಲಿ ನಿರ್ಧರಿಸಲಾಗುವುದು ಎಂದು ತಿಳಿಸಿದರು. ನಗರದ ಐವಾನ್ ಇ ಶಾಹಿ ಅತಿಥಿ ಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. 
ಗ್ರಾಮ ವಾಸ್ತವ್ಯದಲ್ಲಿ ಸಲ್ಲಿಸಬೇಕಾಗಿದ್ದ ಜಿಲ್ಲೆಯ 28 ಪ್ರಮುಖ ಬೇಡಿಕೆಗಳನ್ನು ಸರಕಾರದ ‌ಮುಂದಿಡಲಾಗಿತ್ತು. ಇಂದು ನಡೆಯಬೇಕಾಗಿದ್ದ ಮುಖ್ಯಮಂತ್ರಿ ಅವರ ಜನತಾ ದರ್ಶನ ಹಾಗೂ ಗ್ರಾಮ ವಾಸ್ತವ್ಯದಲ್ಲಿ ಬಹುತೇಕ ಬೇಡಿಕೆಗಳು ಈಡೇರಿಸುವ ನಿರೀಕ್ಷೆ ಮಾಡಲಾಗಿತ್ತು. ಅದರೆ, ಭಾರೀ ಮಳೆ ಬಿದ್ದ ಪರಿಣಾಮ ಹೇರೂರು (ಬಿ) ಗ್ರಾಮದಲ್ಲಿ ನಡೆಯಬೇಕಿದ್ದ ಗ್ರಾಮವಾಸ್ತವ್ಯ ಮುಂದೂಡಿದೆ. ಆದರೂ ಮಳೆ ಬಂದಿರುವುದು ಹರ್ಷ ತರುವ ವಿಚಾರವಾಗಿದ್ದು, ರೈತರು ಮುಂಗಾರು ಸಾಲಿನ ಕೃಷಿ‌ಚಟುವಟಿಕೆಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ಅವರು ಹೇಳಿದರು.
ಸಮಾಜಕಲ್ಯಾಣ ಇಲಾಖೆಯ ವತಿಯಿಂದ ಹೇರೂರು (ಬಿ) ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಈಗಾಗಲೇ ರೂ 1.50 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.
ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಮಾಡಬೇಕಾಗಿರುವ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಸಿಎಂ ಮಾಡಬೇಕಾಗಿದೆ, ಇದು ಆಡಳಿದ ವೈಫಲ್ಯವಲ್ಲವೇ? ಎನ್ನುವ ಪ್ರಶ್ನೆ ಉತ್ತರಿಸಿದ ಸಚಿವರು, ಕೆಲವೊಂದು ಸಂದರ್ಭಗಳಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು, ಜೊತೆಗೆ ಸಮಗ್ರ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರ ಹಾಗೂ ಬೆಂಬಲವೂ ಬೇಕು ಎಂದು ಹೇಳಿದರು.
ಮೈತ್ರಿ‌ ಸರಕಾರದಲ್ಲಿ ಒಮ್ಮತವಿಲ್ಲ, ಅದು ನಿನ್ನೆ ನಡೆದ ಚಂಡ್ರಕಿ ಗ್ರಾಮದಲ್ಲಿ ಕುಮಾರಸ್ವಾಮಿ ನಡೆಸಿದ ಸಭೆಯಲ್ಲಿ ಕಂಡುಬಂದಿತು‌ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶಿಷ್ಟಾಚಾರ ಪ್ರಕಾರ ನಡೆಸಬೇಕಿದ್ದ ಸಭೆಯಲ್ಲಿ ಶಾಸಕರ ಪುತ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಇಚ್ಛಿಸುವುದಿಲ್ಲ ಎಂದರು.
371 (ಜೆ) ಅನುಷ್ಠಾನ ಸಮಿತಿ‌ ಉಪಸಮಿತಿ ಅಧ್ಯಕ್ಷನಾಗಿ ನಾನು ಜಿಲ್ಲೆಯಲ್ಲಿ ಈಗಾಗಲೇ ಖಾಲಿ ಇರುವ ಪ್ರಮುಖ 70 ಕ್ಕೂ ಅಧಿಕ ಹುದ್ದೆಗಳನ್ನು ಕೂಡಲೇ ತುಂಬಬೇಕು, ಜೊತೆಗೆ ಹೈಕ ಭಾಗಕ್ಕೆ ವರ್ಗಾವಣೆಯಾದ ಅಧಿಕಾರಿಗಳು ಕಡ್ಡಾಯವಾಗಿ ಇಂತಿಷ್ಟು ವರ್ಷ ಕಾಲ ಕಾರ್ಯನಿರ್ವಹಿಸುವ ಕಾನೂನು ಜಾರಿಗೆ ತರುವಂತೆ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದೇನೆ ಎಂದರು.
ಯಾವುದೇ ಕಾರಣಕ್ಕೂ 371 (ಜೆ) ಅಡಿಯಲ್ಲಿ ಒದಗಿಸಲಾಗಿರುವ ಸೌಲಭ್ಯದ ದುರುಪಯೋಗವಾಗಲು ಬಿಡುವುದಿಲ್ಲ, ಕೆಲ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು. ಗೋಷ್ಠಿಯ ಮಧ್ಯೆ ಬಂದ ಮುಖ್ಯಮಂತ್ರಿ ಅವರ ಕರೆಗೆ ಉತ್ತರಿಸಿದ ಸಚಿವರು, ಹೇರೂರು (ಬಿ) ಗ್ರಾಮ ಸೇರಿದಂತೆ ಜಿಲ್ಲೆಯ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು ಎಂದು ತಿಳಿಸಿದರು.
ಕಳೆದ ನಾಲ್ಕು ವರ್ಷಗಳಲ್ಲಿ ಸಮಾಜಕಲ್ಯಾಣ ಇಲಾಖೆಯಲ್ಲಿ ನಿಗದಿಪಡಿಸಿದ ಅನುದಾನದಲ್ಲಿ ಶೇ.‌90 ಅನುದಾನ ಬಳಕೆಯಾಗಿದೆ. ಸಿಎಂ ಅವರ ಗ್ರಾಮವಾಸ್ತವ್ಯ ಮಾಡಬೇಕಿದ್ದ ಹೇರೂರು (ಬಿ) ಗ್ರಾಮದ ಅಭಿವೃದ್ಧಿಗಾಗಿ ಇಲಾಖೆಯ ವತಿಯಿಂದ ಈಗಾಗಲೇ ರೂ 1.50 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಮಹಾರಾಷ್ಟ್ರದಿಂದ ನೀರು ಬಿಡುವ ಒಪ್ಪಂದವಾಗಿದ್ದರೂ ಅಲ್ಲಿನ ಸರಕಾರ‌ ನೀರು ಬಿಡಲು ನಕಾರ ತೋರಿಸಿದ್ದು, ಈಗಾಗಲೇ ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ ಅವರು ಪತ್ರ ಬರೆದಿದ್ದು ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಶಾಸಕರಾದ ಎಂ.ವೈ. ಪಾಟೀಲ್, ಅಜಯಸಿಂಗ್, ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಸೇರಿದಂತೆ ಮತ್ತಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com