ಮೈತ್ರಿಗೆ ಮುಖಭಂಗ: ಆತ್ಮಾವಲೋಕನಕ್ಕಾಗಿ ನಾಳೆ ಸಚಿವ ಸಂಪುಟ, ಶಾಸಕರ ಸಭೆ ಕರೆದ ಸಿಎಂ

ಲೋಕಸಭಾ ಚುನಾವಣೆ ಫಲಿತಾಂಶದಿಂದ ಕಂಗೆಟ್ಟಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮೈತ್ರಿ ಕೂಟದ ಅಭ್ಯರ್ಥಿಗಳ ಸೋಲಿನ ಕುರಿತು....
ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ
ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶದಿಂದ ಕಂಗೆಟ್ಟಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮೈತ್ರಿ ಕೂಟದ ಅಭ್ಯರ್ಥಿಗಳ ಸೋಲಿನ ಕುರಿತು ಆತ್ಮಾವಲೋಕನ  ನಡೆಸಲು ಸಚಿವ ಸಂಪುಟ ಸಭೆ ಕರೆದಿದ್ದಾರೆ. 
ಶುಕ್ರವಾರ ಬೆಳಿಗ್ಗೆ 12.30 ಕ್ಕೆ ವಿಧಾನಸೌಧದಲ್ಲಿ ಅನೌಪಚಾರಿಕವಾಗಿ ಸಂಪುಟದ ಸದಸ್ಯರೊಂದಿಗೆ ಕುಮಾರಸ್ವಾಮಿ ಚರ್ಚೆ ನಡೆಸಲಿದ್ದಾರೆ.
ಚುನಾವಣಾ ಫಲಿತಾಂಶ ಮೈತ್ರಿ ಪಕ್ಷಗಳ ಮೇಲೆ ಪರಿಣಾಮ ಬೀರಿರುವುದರಿಂದ ಸಭೆ ಅನೌಪಚಾರಿಕವಾದರೂ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಸಭೆಯಲ್ಲಿ ಪ್ರಮುಖವಾಗಿ ಮಂಡ್ಯ, ತುಮಕೂರು ಹಾಗೂ ಮೈಸೂರು ಲೋಕಸಭಾ ಕ್ಷೇತ್ರಗಳು , ಹಳೆ ಮೈಸೂರು ಭಾಗದ ಹಲವು ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆಯಿತ್ತು. ಆದರೆ ಮೈತ್ರಿ ಕೂಟಕ್ಕೆ ಬಿಜೆಪಿ ಎದುರು ಭಾರಿ ಮುಖಭಂಗವಾಗಿದೆ.  ಸಭೆಯಲ್ಲಿ ಸೋಲಿನ ಹೊಣೆಯನ್ನು ಯಾರು ಹೊರಬೇಕು. ಹಾಗೂ ಸೋಲಿಗೆ ನಿಜವಾದ ಕಾರಣಗಳೇನು? ಎಂಬುದರ ಪಟ್ಟಿಯನ್ನು ಹಿಡಿದುಕೊಂಡು ಉಭಯ ಪಕ್ಷಗಳ ಸಚಿವರು ನಾಯಕರು ನಾಳಿನ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಿದ್ದಾರೆ. 
ಚುನಾವಣೆ ಉಸ್ತುವಾರಿ ಸಚಿವರು ಸೇರಿದಂತೆ ಸಂಪುಟದ ಸಚಿವರ ಜೊತೆ ಕುಮಾರಸ್ವಾಮಿ ಗಂಭೀರ ಸಮಾಲೋಚನೆ  ನಡೆಸಲಿದ್ದಾರೆ. ಸಭೆಯಲ್ಲಿ ಮೈತ್ರಿಯನ್ನು ಮುಂದುವರೆಸಬೇಕೋ ಅಥವಾ ಬೇಡವೋ ಎಂಬುದರ ಕುರಿತು ಸಹ ಚರ್ಚೆ ನಡೆಯಲಿದ್ದು, ಅನೌಪಚಾರಿಕ ಸಚಿವ ಸಂಪುಟ ಸಭೆ ಎರಡೂ ಪಕ್ಷಗಳ ಸಚಿವರ ಆರೋಪ ಪ್ರತ್ಯಾರೋಪ, ಜಟಾಪಟಿಗೆ ಕಾರಣವಾಗಬಹುದು ಎನ್ನಲಾಗುತ್ತಿದೆ. ಸೋಲಿನ ಹೊಣೆಯನ್ನು ಕಾಂಗ್ರೆಸ್‌ ನಾಯಕರು ಹೊರಬೇಕೋ ಅಥವಾ ಜೆಡಿಎಸ್‌ ನಾಯಕರು ಹೊರಬೇಕೋ ಎನ್ನುವುದು ನಾಳೆ ತೀರ್ಮಾನವಾಗಲಿದೆ.
ಇನ್ನು ಸಚಿವ ಸಂಪುಟ ಸಭೆ ಮುಗಿದ ಬಳಿಕ ಜೆ.ಪಿ.ಭವನದಲ್ಲಿ ಜೆಡಿಎಸ್‌ ಶಾಸಕಾಂಗ ಸಭೆ ನಡೆಯಲಿದೆ. ಸಚಿವ ಸಂಪುಟ ಸಭೆಯಲ್ಲಿ ನಡೆದ ಚರ್ಚೆಯ ಆಧಾರದ ಮೇಲೆ ಶಾಸಕಾಂಗ ಸಭೆಯಲ್ಲಿ ಕುಮಾರಸ್ವಾಮಿ ಪಕ್ಷದ ಶಾಸಕರು ಹಾಗೂ ಸಚಿವರ ಜೊತೆ ಮತ್ತೊಮ್ಮೆ ಸಮಾಲೋಚನೆ ನಡೆಸಲಿದ್ದಾರೆ. ಬಳಿಕ  ಸೋಲು ಗೆಲುವಿನ ಲೆಕ್ಕಾಚಾರದ ಮೇಲೆ ಜೆಡಿಎಸ್‌ನ ಮುಂದಿನ ನಡೆ ತೀರ್ಮಾನವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com