'ಆಪರೇಷನ್ ಕಮಲ ಥಂಡಾ': ಶಾಸಕರ ಅಭಿಪ್ರಾಯದ ಬಳಿಕ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ತೀರ್ಮಾನ!

ಸಚಿವ ಸಂಪುಟ ವಿಸ್ತರಣೆ ಮಾಡಬೇಕೆ ಅಥವಾ ಪುನಾರಚನೆ ಮಾಡಬೇಕೆ ಎಂಬುದನ್ನು ಶಾಸಕರ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲು ಮೈತ್ರಿ ನಾಯಕರು ನಿರ್ಧರಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಮಾಡಬೇಕೆ ಅಥವಾ ಪುನಾರಚನೆ ಮಾಡಬೇಕೆ ಎಂಬುದನ್ನು ಶಾಸಕರ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲು ಮೈತ್ರಿ ನಾಯಕರು ನಿರ್ಧರಿಸಿದ್ದಾರೆ. ಅಲ್ಲದೆ ಅಸಮಾಧಾನಗೊಂಡವರಿಗೆ ಮಾತ್ರ ಸಚಿವ ಸ್ಥಾನ ನೀಡಬೇಕೆ ಅಥವಾ ಸಂಪುಟ ವಿಸ್ತರಣೆ ಮಾಡಬೇಕೆ ಎಂಬ ಗೊಂದಲಕ್ಕೆ ಉತ್ತರ ಕಂಡುಕೊಳ್ಳಲಿದ್ದಾರೆ.
ನಗರದ ಕುಮಾರಕೃಪ ಅತಿಥಿಗೃಹದಲ್ಲಿ ನಡೆದ ಮೈತ್ರಿ ನಾಯಕರ ಸಭೆಯಲ್ಲಿ ಸಂಪುಟ ವಿಸ್ತರಣೆ, ಆಪರೇಷನ್ ಕಮಲ, ಲೋಕಸಭಾ ಚುನಾವಣಾ ಫಲಿತಾಂಶದ ಬಗ್ಗೆ ವಿಶ್ಲೇಷಣೆ ನಡೆಸಿದರು. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಉಸ್ತುವಾರಿ ಕೆ ಸಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಡಿ.ಕೆ.ಶಿವಕುಮಾರ್ ಸಭೆಯಲ್ಲಿ ಭಾಗವಹಿಸಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಶಾಸಕಾಂಗ ಪಕ್ಷದ ಸಭೆಯಲ್ಲಿ ಇಂದಿನ ನಿರ್ಣಯಗಳ ಬಗ್ಗೆ ಚರ್ಚೆಸುತ್ತೇವೆ, ಆದರೆ ಇಂದಿನ ಸಭೆಯ ವಿವರ ನೀಡಲು ಸಾಧ್ಯವಿಲ್ಲ ಎಂದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಮುಂದಿನ ಹೆಜ್ಜೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಶಾಸಕರ ಅಭಿಪ್ರಾಯವನ್ನು ಪಡೆದು ನಂತರ ಚರ್ಚಿಸಿ ತೀರ್ಮಾನಿಸುತ್ತೇವೆ.ಜನರಿಗೆ ನಮ್ಮ ಅಭಿವೃದ್ಧಿ ಕಾರ್ಯಗಳು ತಲುಪಬೇಕು. ಯಾರೂ ಅತೃಪ್ತರೂ ಇಲ್ಲ ಸಂತೃಪ್ತರೂ ಇಲ್ಲ. ಯಾರೊಬ್ಬರು ಮಂತ್ರಿ ಆಗಬೇಕು ಅಧಿಕಾರ ಸಿಗಬೇಕು ಎನ್ನುವ ಒಂದೇ ಕಾರಣಕ್ಕಾಗಿ ಜನ ನಮ್ಮನ್ನು ಆಯ್ಕೆ ಮಾಡಿಲ್ಲ. ಮೈತ್ರಿ ಸರ್ಕಾರ ಪತನದ ಬಗ್ಗೆ ಊಹಾಪೋಹಗಳು ಎಲ್ಲೆಡೆ ಹರಿದಾಡುತ್ತಿದೆ. ಸರ್ಕಾರ ಸ್ಥಿರವಾಗಿದ್ದು ಮೈತ್ರಿ ಪಕ್ಷಗಳ ನಾಯಕರಲ್ಲಿ ಯಾವುದೇ ಅನುಮಾನವಿಲ್ಲ ಎಂದರು. 
ರಾಜ್ಯದ ಮೈತ್ರಿ ಸರ್ಕಾರದ ಬಗ್ಗೆ ಜನರಿಗೆ ಒಳ್ಳೆಯ ಅಭಿಪ್ರಾಯ ಮೂಡಬೇಕು. ಸಂಪುಟ ವಿಸ್ತರಣೆ ಬಗ್ಗೆ ಏನನ್ನೂ ಹೇಳುವುದಿಲ್ಲ, ಯಾವ ರೀತಿ ಮಾಡಬೇಕು, ಹೇಗೆ ಮಾಡಬೇಕು ಎಂಬುದನ್ನು ಮುಂದೆ ನಿರ್ಧರಿಸುತ್ತೇವೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿ, ನಾಳೆ ದಿಲ್ಲಿಗೆ ತೆರಳುತ್ತಿದ್ದೇನೆ. ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ. ಪಕ್ಷದ ರಾಷ್ಟ್ರಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದು ಬೇಡ ಎಂದು ಮನವೊಲಿಸುತ್ತೇನೆ. ನಾಳೆ ಪ್ರಧಾನಿ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳುತ್ತೇನೆ ಎಂದರು ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com