15 ಕ್ಷೇತ್ರಗಳ ಉ.ಚುನಾವಣೆಗೆ ಸಜ್ಜಾಗಿರುವ ಪಕ್ಷಗಳು: ರಾಜಕೀಯ ನಾಯಕರಿಂದ ಬಿರುಸಿನ ಪ್ರಚಾರ 

ಡಿಸೆಂಬರ್ 5ರಂದು ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಗೆ ರಾಜಕೀಯ ಪಕ್ಷಗಳು ಸಜ್ಜಾಗಿದ್ದು ಬಿರುಸಿನ ಪ್ರಚಾರ ಕಾರ್ಯದಲ್ಲಿ ನಿರತವಾಗಿವೆ. 
ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಪರವಾಗಿ ಪ್ರಚಾರ ಮಾಡಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ
ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಪರವಾಗಿ ಪ್ರಚಾರ ಮಾಡಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಡಿಸೆಂಬರ್ 5ರಂದು ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಗೆ ರಾಜಕೀಯ ಪಕ್ಷಗಳು ಸಜ್ಜಾಗಿದ್ದು ಬಿರುಸಿನ ಪ್ರಚಾರ ಕಾರ್ಯದಲ್ಲಿ ನಿರತವಾಗಿವೆ. ಬಂಡಾಯ ಶಾಸಕರಲ್ಲಿ ಬಿಜೆಪಿಯಿಂದ ಎಲ್ಲರಿಗೂ ಟಿಕೆಟ್ ಸಿಗುವುದು ಸಂಶಯವಾಗಿದ್ದು ಈ ಸಮಯದಲ್ಲಿ ಪಕ್ಷದೊಳಗಿನವರನ್ನು ಸಮಾಧಾನಪಡಿಸುವ ಕೆಲಸ ಕೂಡ ಬಿಜೆಪಿ ನಾಯಕರಿಗಿದೆ. 


ನಿನ್ನೆ ಹಲವು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಹಿರಿಯ ನಾಯಕರು ಅವರ ಜೊತೆ ಪ್ರಚಾರದಲ್ಲಿ ತೊಡಗಿದ್ದಾರೆ. ನಾಮಪತ್ರ ಸಲ್ಲಿಕೆಗೆ ನಾಳೆ ಕಡೆಯ ದಿನವಾಗಿದೆ. ಇಲ್ಲಿಯವರೆಗೆ 96 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.


ನಿನ್ನೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಹೆಚ್ ಡಿ ಕುಮಾರಸ್ವಾಮಿ ಹೊಸಕೋಟೆ ಮತ್ತು ಹುಣಸೂರು ಕ್ಷೇತ್ರಗಳಲ್ಲಿ ಮತಯಾಚಿಸಿದ್ದಾರೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಿನ್ನೆ ಪಕ್ಷದ ನಾಯಕರಲ್ಲಿ ಮಾತುಕತೆಯಲ್ಲಿಯೇ ನಿರತರಾಗಿದ್ದರು. ಅನರ್ಹ ಶಾಸಕರಿಗೆ ಟಿಕೆಟ್ ಹಂಚಿಕೆ ಮಾಡಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಯಡಿಯೂರಪ್ಪ ಮುಂದಿರುವ ಸದ್ಯದ ಸವಾಲಾಗಿದೆ. 


ನಿನ್ನೆ ಸಿಎಂ ಬೆಂಗಳೂರಿನ ಮಹಾಲಕ್ಷ್ಮಿ ಲೇ ಔಟ್ ಮತ್ತು ಯಶವಂತಪುರ ವಿಧಾನಸಭಾ ಕ್ಷೇತ್ರಗಳ ಪಕ್ಷದ ನಾಯಕರೊಂದಿಗೆ ಮಾತುಕತೆಯಲ್ಲಿ ನಿರತರಾಗಿದ್ದರು. ಶುಕ್ರವಾರ ಡಿಸಿಎಂ ಲಕ್ಷ್ಮಣ ಸವದಿ, ಅನರ್ಹ ಶಾಸಕರು, ಪಕ್ಷದ ಟಿಕೆಟ್ ಆಕಾಂಕ್ಷಿಗಳ ಸಮಾಧಾನಪಡಿಸಿದ್ದ ಸಿಎಂ ಚುನಾವಣಾ ಪ್ರಚಾರದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ತೊಡಗಿಸಿಕೊಳ್ಳುವಂತೆ ಕೇಳಿಕೊಂಡರು. ನಾಳೆ ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂ ಟಿ ಬಿ ನಾಗರಾಜ್ ಅವರ ಪರವಾಗಿ ಸಿಎಂ ಮತಯಾಚನೆ ಮಾಡಲಿದ್ದಾರೆ.


ಈ ಮಧ್ಯೆ ಕಾಂಗ್ರೆಸ್ ನಿನ್ನೆ ಮಾಜಿ ಸಚಿವರುಗಳನ್ನು ಎಲ್ಲಾ 15 ಕ್ಷೇತ್ರಗಳಲ್ಲಿ ಚುನಾವಣಾ ಉಸ್ತುವಾರಿಗಳನ್ನಾಗಿ ನೇಮಕ ಮಾಡಿದ್ದು ಶಾಸಕರು, ಮಾಜಿ ಸಚಿವರುಗಳು ಸೇರಿ 253 ನಾಯಕರುಗಳನ್ನು ವೀಕ್ಷಕರನ್ನಾಗಿ ನೇಮಿಸಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಅನರ್ಹ ಶಾಸಕರನ್ನು ಉಪ ಚುನಾವಣೆಯಲ್ಲಿ ಸೋಲಿಸಲಿದ್ದೇವೆ ಎಂದರು. ನಿನ್ನೆ ಹೊಸಕೋಟೆಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಅಭ್ಯರ್ಥಿ ಪದ್ಮಾವತಿ ಸುರೇಶ್ ಪರವಾಗಿ ಮತಯಾಚಿಸಿದರು. ಇಲ್ಲಿ ಮಾಜಿ ಸಚಿವ ಕೃಷ್ಣ ಭೈರೇಗೌಡ ಚುನಾವಣಾ ಉಸ್ತುವಾರಿಯಾಗಿದ್ದಾರೆ.

ಹುಣಸೂರಿನಲ್ಲಿ ನಿನ್ನೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮಾಜಿ ಸಚಿವ ಸಾ ರಾ ಮಹೇಶ್, ಹೆಚ್ ಡಿ ರೇವಣ್ಣ. ಶಾಸಕ ಅಶ್ವಿನ್ ಕುಮಾರ್ ಮತ್ತು ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಪರವಾಗಿ ಮತಯಾಚಿಸಲು ಮೆರವಣಿಗೆ ಮೂಲಕ ಸಾಗಿದರು. ಜೆಡಿಎಸ್ ನಾಯಕ ಟಿಕೆಟ್ ಆಕಾಂಕ್ಷಿ ಗಣೇಶ್ ಗೌಡ ಅವರ ಮನೆಗೆ ಹೋಗಿ ಸಮಾಧಾನಪಡಿಸಿದರು. ಗಣೇಶ್ ಗೌಡ ಟಿಕೆಟ್ ಆಕಾಂಕ್ಷಿಯಾಗಿದ್ದರು. 


ಉಪ ಚುನಾವಣೆಯಲ್ಲಿ ಯಾವುದೇ ಪಕ್ಷಗಳ ಜೊತೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ನಾವು ಚುನಾವಣೆಯಲ್ಲಿ ಗೆಲ್ಲಲು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವುದರಿಂದ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು ಕುಮಾರಸ್ವಾಮಿ.


ಅನರ್ಹ ಶಾಸಕ ಆರ್ ರೋಶನ್ ಬೇಗ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಿದ್ದರೆ ಅವರಿಗೆ ಜೆಡಿಎಸ್ ಬೆಂಬಲ ನೀಡುವುದನ್ನು ತಳ್ಳಿಹಾಕಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com