ಲಿಂಗಾಯತರ ಮನಗೆಲ್ಲಲು ಭಾವನಾತ್ಮಕ ಮಾರ್ಗ ಹಿಡಿದ ಯಡಿಯೂರಪ್ಪ: ವಿರೋಧ ಪಕ್ಷಗಳಿಂದ ತೀವ್ರ ಕಿಡಿ

ಮುಂದಿನ ಲಿಂಗಾಯತ ನಾಯಕನಿಗಾಗಿ ಬಿಜೆಪಿಯ ಕೇಂದ್ರೀಯ ನಾಯಕತ್ವ ಹುಡುಕಾಟ ನಡೆಸುತ್ತಿದ್ದು, ಈ ನಡುವಲ್ಲೇ ಲಿಂಗಾಯತರ ಮನ ಗೆಲ್ಲಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭಾವನಾತ್ಮಕ ಮಾರ್ಗ ಹಿಡಿದಿದ್ದು, ಅದಕ್ಕೆ ವಿರೋಧ ಪಕ್ಷಗಳು ತೀವ್ರವಾಗಿ ಕಿಡಿಕಾರುತ್ತಿವೆ. 
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ಮುಂದಿನ ಲಿಂಗಾಯತ ನಾಯಕನಿಗಾಗಿ ಬಿಜೆಪಿಯ ಕೇಂದ್ರೀಯ ನಾಯಕತ್ವ ಹುಡುಕಾಟ ನಡೆಸುತ್ತಿದ್ದು, ಈ ನಡುವಲ್ಲೇ ಲಿಂಗಾಯತರ ಮನ ಗೆಲ್ಲಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭಾವನಾತ್ಮಕ ಮಾರ್ಗ ಹಿಡಿದಿದ್ದು, ಅದಕ್ಕೆ ವಿರೋಧ ಪಕ್ಷಗಳು ತೀವ್ರವಾಗಿ ಕಿಡಿಕಾರುತ್ತಿವೆ. 

ದಾವಣಗೆರೆಯಲ್ಲಿ ಭಾನುವಾರ ರಂಭಾಪುರಿ ಜಗದ್ಗುರುಗಳ 10 ದಿನಗಳ ಶರನ್ನವರಾತ್ರಿ ಧರ್ಮ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಯಡಿಯೂರಪ್ಪ ಅವರು, ಪ್ರತೀ ನಿರ್ಧಾರದಲ್ಲೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಪ್ರತೀ ನಿರ್ಧಾರ, ಹೆಜ್ಜೆಯಿಡುವಾಗಲು ತಂದಿ ಮೇಲೆ ನಡೆಯುತ್ತಿದ್ದೇನೆಂದು ಭಾಸವಾಗುತ್ತದೆ ಎಂದು ಹೇಳಿದ್ದಾರೆ. 

ನಾನು ತಂತಿಯ ಮೇಲೆ ನಡೆಯುತ್ತಿದ್ದೇನೆ. ಯಾವುದೇ ತೀರ್ಮಾನಕ್ಕೂ ಮುನ್ನ ಹತ್ತಾರು ಬಾರಿ ಯೋಚನೆ ಮಾಡಬೇಕಾಗಿದೆ. ಯಾವುದೇ ತೀರ್ಮಾನ ಕೈಗೊಳ್ಳುವ ಮುನ್ನ ಬೇರೆ ಸಮಾಜದ ಮೇಲೆ ಅದು ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಹತ್ತಾರು ಬಾರಿ ಆಲೋಚಿಸಿ ಸ್ಪಂದಿಸಬೇಕಾದ ಸ್ಥಿತಿಯಿದೆ ಎಂದು ಹೇಳಿದ್ದರು. 

ಯಡಿಯೂರಪ್ಪ ಅವರ ಈ ಮಾತು ಇದೀಗ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಅಲ್ಲದೆ, ಕಾಂಗ್ರೆಸ್, ಜೆಡಿಎಸ್ ಮುಖಂಡರು ಹೇಳಿಕೆ ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಯಡಿಯೂರಪ್ಪ ಅವರು, ನಾನು ಹೇಳಿದ್ದು, ಸಮುದಾಯ ಅಭಿವೃದ್ಧಿಗೆ ಮನವಿ ಮಾಡಲಾಗಿರುವ ಅನುದಾನಗಳ ಬಿಡುಗಡೆ ಬಗ್ಗೆಯೇ ಹೊರತು ಬೇರೆ ಯಾವುದೇ ವಿಚಾರಗಳ ಕುರಿತು ಅಲ್ಲ ಎಂದು ತಿಳಿಸಿದ್ದಾರೆ. 
 
ಯಡಿಯೂರಪ್ಪ ದುರ್ಬಲ ಮುಖ್ಯಮಂತ್ರಿ. ಅವರ ಬಗ್ಗೆ ಕರುಣೆ ಬರುತ್ತಿದೆ. ಅವರ ರೆಕ್ಕೆಗಳನ್ನು ಮುರಿದು ಹಾಕಲಾಗಿದೆ. ಅಮಿತ್ ಶಾಗಾಗಲೀ, ಮೋದಿಗಾಗಲೀ ಅವರು ಪ್ರಶ್ನೆ ಮಾಡುವಂತಿಲ್ಲ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ. 

ಯಡಿಯೂರಪ್ಪ ಅವರು ಸಾಂದರ್ಭಿಕ ಮುಖ್ಯಮಂತ್ರಿಯಾಗಿದ್ದಾರೆ. ಏಕೆಂದರೆ, ಅವರು ವಯಸ್ಸಾಗಿರುವ ವ್ಯಕ್ತಿ ತರಾತುರಿಯಲ್ಲಿದ್ದಾರೆ. ಮುಖ್ಯಮಂತ್ರಿಯಾಗಿ ಅವರಲ್ಲಿರುವ ಸಾಮರ್ಥ್ಯಕ್ಕೆ ತಕ್ಕಂತೆ ಅವರು ಕೆಲಸ ಮಾಡುತ್ತಿದ್ದಾರೆ. ಎಲ್ಲಾ ರೀತಿಯಲ್ಲಿ ಅವರು ವಿಫಲರಾಗಿದ್ದಾರೆ. ಶಾಗಾಗಿ ಜನರನ್ನು ಸೇರಿಸುವಲ್ಲಿಯೇ ಆಗಲೀ, ಸಂತ್ರಸ್ತರಿಗೆ ಪರಿಹಾರ ಸಂಗ್ರಹಿಸುವಲ್ಲೇ ಆಗಲೀ ಅವರು ವಿಫಲರಾಗಿದ್ದಾರೆ. ತಮ್ಮ ವಿಫಲತೆಯನ್ನು ತೋರಿಸಿಕೊಳ್ಳಲು ಸಾಧ್ಯವಾಗದೆ, ತಂತಿ ಮೇಲೆ ನಡೆಯುತ್ತಿದ್ದೇನೆಂದು ಹೇಳುತ್ತಿದ್ದಾರೆಂದು ಜೆಡಿಎಸ್ ವಕ್ತಾರ ತನ್ವೀರ್ ಅಹ್ಮದ್ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com