ರಾಜ್ಯದ ನೆರೆ ಪರಿಹಾರ ವರದಿ ತಿರಸ್ಕರಿಸಿದ ಕೇಂದ್ರ: ಯಡಿಯೂರಪ್ಪ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ

ರಾಜ್ಯದಲ್ಲಿ ಸಂಭವಿಸಿದ ಭಾರೀ ಮಳೆ ಮತ್ತು ಪ್ರವಾಹದಲ್ಲಿ ಉಂಟಾದ ಹಾನಿ ಕುರಿತು ರಾಜ್ಯ ಸರ್ಕಾರ ಸಲ್ಲಿಸಿದ್ದ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ್ದು, ಈ ಬೆಳವಣಿಗೆಗೆ ಕಾಂಗ್ರೆಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಭಾರೀ ಮಳೆ ಮತ್ತು ಪ್ರವಾಹದಲ್ಲಿ ಉಂಟಾದ ಹಾನಿ ಕುರಿತು ರಾಜ್ಯ ಸರ್ಕಾರ ಸಲ್ಲಿಸಿದ್ದ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ್ದು, ಈ ಬೆಳವಣಿಗೆಗೆ ಕಾಂಗ್ರೆಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಎಂ.ಬಿ.ಪಾಟೀಲ್, ರಾಜ್ಯ ಸರ್ಕಾರದ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕಾರ ಮಾಡಿರುವುದು ಹಾಗೂ ಹಾನಿ ಬಗ್ಗೆ ಕೇಂದ್ರ ಸರ್ಕಾರ ಸಾಕ್ಷಿ ಕೇಳುತ್ತಿರುವುದು ಖಂಡನೀಯ ಎಂದಿದ್ದಾರೆ.

ಸದಾಶಿವನಗರದ ನಿವಾಸದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ನೆರೆ ಪರಿಹಾರ ವರದಿ ತಿರಸ್ಕರಿಸಿ
ಮತ್ತೆ ವರದಿ ಕಳಿಸುವಂತೆ ರಾಜ್ಯಕ್ಕೆ ನಿರ್ದೇಶನ ನೀಡಿದೆ. ಎನ್ ಡಿಆರ್ ಎಫ್ ನಿಯಮಗಳನ್ನು ಸರ್ಕಾರ ತಿರಸ್ಕರಿಸಿದ್ದು, ಇದನ್ನು ನಾವು ಪ್ರಶ್ನಿಸುತ್ತಿದ್ದೇವೆ ಎಂದರು. 

ರಾಜ್ಯದ ವರದಿಯನ್ನೇ ಕೇಂದ್ರ ಸರ್ಕಾರ ತಿರಸ್ಕರಿಸಿದೆ ಅಂದಮೇಲೆ ರಾಷ್ಟ್ರೀಯ ವಿಪತ್ತು ನೆರವು ಇನ್ನೆಲ್ಲಿ ದೊರೆಯಲಿದೆ ಎಂದು ಪ್ರಶ್ನಿಸಿರುವ ಅವರು, ನರೇಂದ್ರ ಮೋದಿ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯ ಆಗಿದೆ. 2009 ರಲ್ಲಿ ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ 1600 ಕೋಟಿ ಹಣ ಬಿಡುಗಡೆ ಮಾಡಿತ್ತು. ಆದರೆ ಈ ಬಾರಿ ಹಿಂದಿಗಿಂತಲೂ ಬಹಳ ದೊಡ್ಡ ಮಟ್ಟದಲ್ಲಿ ನೆರೆಯಿಂದ ನಷ್ಟವಾಗಿದೆ. ಆದರೆ ರಾಜ್ಯ ಸರ್ಕಾರ ಸಹ ಸರಿಯಾಗಿ ನೆರೆ ನಷ್ಟದ ಸಮೀಕ್ಷೆ ನಡೆಸಿಲ್ಲ. ರಾಜ್ಯದ ನೆರೆ ಸಂತ್ರಸ್ತರು ಸಂಕಷ್ಟದಲ್ಲಿದ್ದರೂ ಸಹ ಬಿಜೆಪಿಯ ಸಂಸದರು ಈ ಬಗ್ಗೆ ಧ್ವನಿ ಎತ್ತದಿರುವುದು ಸರಿಯಲ್ಲ. ಇದೆಲ್ಲವನ್ನೂ ನೋಡಿದರೆ ಬಿಜೆಪಿ ಸರ್ಕಾರಕ್ಕೆ ಬದ್ಧತೆ ಆಗಲಿ, ಇಚ್ಛಾಶಕ್ತಿ ಆಗಲಿ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಚಿವರಾದ ಕೆ.ಎಸ್.ಈಶ್ವರಪ್ಪ, ಲಕ್ಷಣ ಸವದಿ, ಮಾಧು ಸ್ವಾಮಿ, ಸಂಸದರಾದ ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ ಸೇರಿದಂತೆ ಕೆಲವು ಬಿಜೆಪಿ ನಾಯಕರು ನೆರೆ ಸಂತ್ರಸ್ತರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸಂಕಷ್ಟದಲ್ಲಿರುವವರ ಬಗ್ಗೆ ಹೀಗೆ ಹಗುರವಾಗಿ ಮಾತನಾಡುವವರನ್ನು ಕರೆದುಕೊಂಡು ಹೋಗಿ ಪ್ರವಾಹದ ನಡುಗಡ್ಡೆಯಲ್ಲಿ ನಿಲ್ಲಿಸಬೇಕು. ಆಗ ಅವರಿಗೆ ಪ್ರವಾಹದ ಪರಿಸ್ಥಿತಿ ಏನು ಎಂಬುದು ಅರಿವಾಗಲಿದೆ ಎಂದರು. ಆದರೆ ಬಿಜೆಪಿಯ ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ಹಾಗೂ ಚಕ್ರವರ್ತಿ ಸೂಲಿಬೆಲೆ ಅವರು ಈ ಬಗ್ಗೆ ಪಕ್ಷ ಬೇಧ ಮರೆತು ಸರ್ಕಾರವನ್ನು ಪ್ರಶ್ನಿಸಿರುವುದನ್ನು ಅಭಿನಂದಿಸುವುದಾಗಿ ಎಂ.ಬಿ ಪಾಟೀಲ್ ಹೇಳಿದರು.
.
ಬಿಹಾರದ ಪ್ರವಾಹದ ಬಗ್ಗೆ ಮೋದಿ ಟ್ವೀಟ್ ಮಾಡಿ ಸಾಂತ್ವಾನ ಹೇಳಿದ್ದಾರೆ. ಆದರೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಕೂಡ ಸಂತ್ರಸ್ತರಿಗೆ ಮೋದಿ ಒಂದೇ ಒಂದು ಸಾಂತ್ವಾನದ ನುಡಿ ಆಡಿಲ್ಲ. ಇದನ್ನು ನೋಡಿದರೆ ಮಲತಾಯಿ ಧೋರಣೆ ಅನುಸರಿಸಿವುದು ಸ್ಟಪ್ಟವಾಗಿದೆ. ಜನರ ಬದುಕಿಗೆ ಆಗದ ಸರ್ಕಾರ ಅಧಿಕಾರದಲ್ಲಿದ್ದು ಏನು ಪ್ರಯೋಜನ ಎಂದು ಎಂ.ಬಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಹಾಗೂ ಕೇಂದ್ರ ಎರಡರಲ್ಲೂ ಬಿಜೆಪಿ ಸರ್ಕಾರವಿದೆ. ಎರಡೂ ಸರ್ಕಾರಗಳು ಸೇರಿ ರಾಜ್ಯದ  ಜನರ ಕಷ್ಟ  ಪರಿಹರಿಸಬಹುದಿತ್ತು. ಆದರೆ ಬಿಜೆಪಿ ನಾಯಕರು ಜನರಿಗೆ ಬದುಕು ಕಟ್ಟಿಕೊಡಲು ವಿಫಲರಾಗಿದ್ದಾರೆ. ಜನರಿಗೆ ನೆರವು ಕೊಡಿಸಲು ಯಡಿಯೂರಪ್ಪ ಅವರು ಅಸಹಾಯಕರಾಗಿದ್ದು. ತಮ್ಮ ವೈಫಲ್ಯ ಒಪ್ಪಿಕೊಂಡು ಮುಖ್ಯಮಂತ್ರಿ ಸ್ಥಾನಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟು ನಿರ್ಗಮಿಸಬೇಕು ಎಂದು ಎಂ.ಬಿ.ಪಾಟೀಲ್ ಆಗ್ರಹಿಸಿದರು.

ಯಡಿಯೂರಪ್ಪ  ಹಾಗೂ ಅಮಿತ್ ಶಾ, ಮೋದಿ ನಡುವೆ ಏನೇ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಜನರ ಮೇಲೆ ಹೇರುವುದು ಸರಿಯಲ್ಲ. ಅವರುಗಳ ದ್ವೇಷಕ್ಕೆ ರಾಜ್ಯದ ಜನ ಸಾಯಬೇಕೆ? ಎಂದು ಎಂ.ಬಿ. ಪಾಟೀಲ್ ಖಾರವಾಗಿ ಪ್ರಶ್ನಿಸಿದರು.

ಬಿಜೆಪಿಯ ನಾಯಕರಿಗೆ ಧೈರ್ಯವಿರುವುದೇ ಆದರೆ ನೆರೆಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಿ ಎಂದು ಸವಾಲು ಹಾಕಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬಿಜೆಪಿ ವಿರುದ್ಧ ಹರಿಹಾಯ್ದಿದ್ದು, ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿ ಎರಡು ತಿಂಗಳು ಕಳೆದಿದೆ. ಆದರೂ ಇದುವರೆಗೂ ಒಂದು ಬಿಡಿಗಾಸನ್ನು ಮೋದಿ ಸರ್ಕಾರ ನೀಡಿಲ್ಲ. ಕರ್ನಾಟಕ ಸರ್ಕಾರದ ನೆರೆ ಪರಿಹಾರದ ವರದಿಗೂ ಕಿಮ್ಮತ್ತು ನೀಡುತ್ತಿಲ್ಲ. ರಾಜ್ಯದ ನೆರೆನಷ್ಟ ವರದಿಯನ್ನು ತಿರಸ್ಕರಿಸಿರುವುದು ಗಾಯದ ಮೇಲೆ ಬರೆ ಎಳೆದಂತೆ ಎಂದು‌ ಟ್ವೀಟ್ ಮಾಡಿದ್ದಾರೆ.

ಈಗಲಾದರೂ ಮುಖ್ಯಮಂತ್ರಿ ಯಡಿಯೂರಪ್ಪ ಸರ್ವಪಕ್ಷದ ಮುಖಂಡರ ಸಭೆಯನ್ನು ತಕ್ಷಣ ಕರೆಯುವಂತೆ ಒತ್ತಾಯಿಸಿದ ದಿನೇಶ್ ಗುಂಡೂರಾವ್, ಕೇಂದ್ರದಿಂದ ಆಗುತ್ತಿರುವ ಘೋರ ಅನ್ಯಾಯದ ಬಗ್ಗೆ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com