ನೆರೆ ಪರಿಹಾರ: ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ವಿಪಕ್ಷಗಳು

ನೆರೆ ಪರಿಹಾರ ಕುರಿತಂತೆ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಗುರುವಾರ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ವಿರೋಧ ಪಕ್ಷಗಳು ತೀವ್ರವಾಗಿ ಕಿಡಿಕಾರಿವೆ. 
ವಿಧಾನಮಂಡಲ ಅಧಿವೇಶನ (ಪೋಟೋಕೃಪೆ: ಕೆಪಿಎನ್)
ವಿಧಾನಮಂಡಲ ಅಧಿವೇಶನ (ಪೋಟೋಕೃಪೆ: ಕೆಪಿಎನ್)

ಬೆಂಗಳೂರು: ನೆರೆ ಪರಿಹಾರ ಕುರಿತಂತೆ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಗುರುವಾರ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ವಿರೋಧ ಪಕ್ಷಗಳು ತೀವ್ರವಾಗಿ ಕಿಡಿಕಾರಿವೆ. 

ನೆರೆಪೀಡಿತರ ಸಂಕಷ್ಟ ಹಾಗೂ ಪರಿಹಾರ ಕಾರ್ಯದಲ್ಲಿ ವಿಳಂಬ ಕುರಿತು ಚರ್ಚಿಸಲು ನಿಲುವಳಿ ಸೂಚನೆ ಮಂಡಿಸಲು ಮುಂದಾದ ಪ್ರತಿಪಕ್ಷಕ್ಕೆ ಅವಕಾಶ ನೀಡದೆ ಬಜೆಟ್ ಕುರಿತ ಪೂರಕ ಅಂದಾಜು ಮಂಡನೆಗೆ ಸ್ಪೀಕರ್ ಅವಕಾಶ ನೀಡಿದ್ದು, ವಿಧಾನಮಂಡಲ ಅಧಿವೇಶನದ ಮೊದಲ ದಿನವಾದ ಗುರುವಾರ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ತೀವ್ರ ವಾಗ್ವಾದಕ್ಕೆ ಮತ್ತು ಸದನದಲ್ಲಿ ಕಾವೇರಿದ ವಾತಾವರಣ ನಿರ್ಮಾಣವಾಗಿತ್ತು. 

ಈ ನಡುವೆ ಮಾತನಾಡಿರುವ ಆಡಳಿತಾರೂಢ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿಯವರು, ಸರ್ಕಾರ ಈ ವರೆಗೂ ರೂ.2,949 ಕೋಟಿ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರ ರೂ.1,200 ಕೋಟಿ ಬಿಡುಗಡೆ ಮಾಡಿದೆ ಎಂದು ಹೇಳಿದರು. ಪೂಜಾರಿಯವರ ಈ ಹೇಳಿಕೆ ಅಧಿವೇಶನದಲ್ಲಿದ್ದ ಕಾಂಗ್ರೆಸ್ ನಾಯಕರನ್ನು ಕೆಂಡಾಮಂಡಲಗೊಳಿಸಿತು. ಅಲ್ಲದೆ, ಮತ್ತಷ್ಟು ಪರಿಹಾರ ಬಿಡುಗಡೆಗೆ ಆಗ್ರಹಿಸಿದರು. 

ಇದಕ್ಕೂ ಮುನ್ನ ಮಾತನಾಡಿದ ವಿಪಕ್ಷ ನಾಯಕ ಎಸ್ಆರ್.ಪಾಟೀಲ್ ಅವರು, ರಾಜ್ಯದಲ್ಲಿ ಪ್ರವಾಹದಿಂದಾಗಿ ಎದುರಾಗಿರುವ ನಷ್ಟಗಳ ಪಟ್ಟಿಯನ್ನು ತಿಳಿಸಿದರು. ರಾಜ್ಯದಲ್ಲಿ 2.5 ಲಕ್ಷ ಮನೆಗಳು ನಾಶಗೊಂಡಿವೆ. ರಾಜ್ಯದ 22 ಜಿಲ್ಲೆಯಗಳ 106 ತಾಲೂಕು, 2,177 ಗ್ರಾಮಗಳ ಮೇಲೆ ಪ್ರವಾಹ ಗಂಭೀರ ಪರಿಣಾಮ ಬೀರಿದೆ. 22 ಲಕ್ಷ ಹೆಕ್ಟೇರ್ ಗಳಷ್ಟು ಭೂಮಿ ಹಾಗೂ ಕೃಷಿ ನಾಶಗೊಂಡಿದೆ. ಇದು ಕೇವಲ ಕೃಷಿಯಲ್ಲ ಇಡೀ ಕೃಷಿ ಭೂಮಿಯೇ ನಾಶಗೊಂಡಿದೆ. ಮತ್ತೆ ಆ ಭೂಮಿಯಲ್ಲಿ ಮೊದಲಿನಿಂದ ಬೆಳೆಗಳನ್ನು ಬೆಳೆಯಬೇಕಿದೆ. ಮತ್ತೆ ಮೊದಲಿನಂತೆ ಬೆಳೆ ಬೆಳೆಯಲು 3-4 ವರ್ಷಗಳ ಕಾಲ ಬೇಕಾಗುತ್ತದೆ. ಎನ್'ಡಿಆರ್'ಎಫ್ ನಿಯಮಗಳ ಪ್ರಕಾರ ಕೇವಲ ಕೃಷಿ ಭೂಮಿ ನಷ್ಟಕ್ಕಷ್ಟೇ ಪರಿಹಾರ ಬಿಡುಗಡೆ ಮಾಡಲಾಗಿದೆ. ಸಂಪೂರ್ಣವಾಗಿ ನಾಶಗೊಂಡಿರುವ ಮರಗಳ ಕಥೆಯೇನು? ಎಂದು ಪ್ರಶ್ನಿಸಿದರು. 

10,988 ಕಟ್ಟಡಗಳು, ಶಾಲೆಗಳು, ಅಂಗನವಾಡಿ ಕೇಂದ್ರಗಳು, ಪಂಚಾಯತಿ ಕಚೇರಿಗಳು ನಾಶಗೊಂಡಿವೆ. 1914ರಲ್ಲಿ ಸಂಭವಿಸಿದ ಪ್ರವಾಹದಲ್ಲಿ, ಜನರು ನೀರಿನ ಮಟ್ಟಕ್ಕೆ ಮಾನದಂಡವಾಗಿ ಕಲ್ಲು ಹಾಕಿದ್ದರು. ಆದರೆ, ಈ ಬಾರಿ ದಾಖಲೆ ಮುರಿದಿದೆ. ಪರಿಸ್ಥಿತಿ ಇಷ್ಟೊಂದು ಗಂಭೀರವಾಗಿರಬೇಕಾದರೆ, ಪ್ರಸ್ತುತ ಕೇಂದ್ರ ಬಿಡುಗಡೆ ಮಾಡಿರುವ ಪರಿಹಾರ ಮೊತ್ತ ಎಲ್ಲಿ ಸಾಕಾಗುತ್ತದೆ? ಎಂದು ಪ್ರಶ್ನಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com