ಕಾಗೇರಿ ಅವರಂತಹ ವಿಧಾನಸಭಾಧ್ಯಕ್ಷರನ್ನು ಹಿಂದೆಂದೂ ನೋಡಿಲ್ಲ- ಸಿದ್ದರಾಮಯ್ಯ

ವಿಶ್ವೇಶ್ವರ ಹೆಗಡೆ ಕಾಗೇರಿ ಅವರಂತಹ ವಿಧಾನಸಭಾದ್ಯಕ್ಷರನ್ನು ಹಿಂದೆಂದೂ ನೋಡಿಲ್ಲ. ಪ್ರತಿಪಕ್ಷ ಸದಸ್ಯರು ಮಾತನಾಡುವುದನ್ನು ತಡೆಯುವ ಪ್ರವೃತ್ತಿಯನ್ನು ಅವರು ಮುಂದುವರೆಸಿದ್ದೇ ಆದಲ್ಲಿ ಅಧಿವೇಶನ ನಡೆಸಲು ಅವಕಾಶ ನೀಡುವುದಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಚಿಕ್ಕಮಗಳೂರು: ವಿಶ್ವೇಶ್ವರ ಹೆಗಡೆ ಕಾಗೇರಿ ಅವರಂತಹ ವಿಧಾನಸಭಾದ್ಯಕ್ಷರನ್ನು ಹಿಂದೆಂದೂ ನೋಡಿಲ್ಲ. ಪ್ರತಿಪಕ್ಷ ಸದಸ್ಯರು ಮಾತನಾಡುವುದನ್ನು ತಡೆಯುವ ಪ್ರವೃತ್ತಿಯನ್ನು ಅವರು ಮುಂದುವರೆಸಿದ್ದೇ ಆದಲ್ಲಿ ಅಧಿವೇಶನ ನಡೆಸಲು ಅವಕಾಶ ನೀಡುವುದಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಪ್ರತಿಪಕ್ಷದ ಶಾಸಕರು ಮಾತಾನಾಡುವಾಗ ಸ್ಪೀಕರ್ ಅವರು ತಡೆಯುವುದು ಸರಿಯಲ್ಲ. ನಾನು ಎಂದೂ ಈ ತರಹದ ಸ್ವೀಕರ್ ನೋಡಿಲ್ಲ. ಅವರ ವರ್ತನೆ ಹೀಗೆ ಮುಂದುವರೆದರೆ ವಿಧಾನಸಭೆ ನಡೆಯಲು ಬಿಡುವುದಿಲ್ಲ. ಈ ಸಲ ಒಪ್ಪಿಕೊಂಡಿದ್ದೇನೆ. ಮುಂದೆ ಸಹಿಸುವುದಿಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ. ಆರ್ ಎಸ್ ಎಸ್  ನವರಿಗೆ ಪ್ರಜಾಪ್ರಭುತ್ವ ಸಂಸ್ಥೆಗಳ ಬಗ್ಗೆ ನಂಬಿಕೆ ಬರಲು ಸಾಧ್ಯವೇ ಇಲ್ಲ. ಪ್ರಧಾನಿ ಮೋದಿ ಅವರಿಗೆ ಮಾತೃ ಹೃದಯ ಇರಬೇಕು. ಅವರ  ಎದೆ ಎಷ್ಟು ಇಂಚು ಇದ್ದರೆ ಏನು ಪ್ರಯೋಜನ. ನೂರು ಇಂಚು ಎದೆ ಇಟ್ಟುಕೊಂಡರೂ ಪರವಾಗಿಲ್ಲ. ಜನರಿಗೆ ಸ್ಪಂದಿಸುವ ಮಾತೃ ಹೃದಯ ಇರಬೇಕು ಎಂದರು. 

ರಾಜ್ಯದಲ್ಲಿ ಈ ವರ್ಷ ಪ್ರವಾಹ ಹಾಗೂ ಬರ ಎರಡೂ ಇದ್ದು, ಕಂದಾಯ ಸಚಿವ ಆರ್ ಅಶೋಕ್ ಅವರೇ ಇದನ್ನು ಒಪ್ಪಿಕೊಂಡಿದ್ದಾರೆ. ಪ್ರವಾಹ ಪರಿಹಾರ ಬಂದ 60 ದಿನ ಆದ ನಂತರ ಕೇಂದ್ರ ಸರ್ಕಾರ, ಪೂಜೆ ಮಾಡುವಾಗ ದೂಪ ಹಾಕುವ ಹಾಗೇ ರಾಜ್ಯಕ್ಕೆ 1200 ಕೋಟಿ ರೂ ಅನುದಾನ ನೀಡಿದೆ. ಅಲ್ಲದೇ ಪ್ರಧಾನಿ ಮೋದಿ ರಾಜ್ಯದ ನರೆ ಪೀಡಿತ ಪ್ರದೇಶಗಳಿಗೆ ಭೇಟಿಯೇ ನೀಡಿಲ್ಲ. ಸುಮಾರು 2 ಕೋಟಿ ಜನ ಕರ್ನಾಟಕದಲ್ಲಿ ನಲುಗಿದ್ದರೂ ಅವರ ಮನಸು ಕರಗಲಿಲ್ಲ ಎಂದರು.

ಕರ್ನಾಟಕದಲ್ಲಿ 25 ಜನ ಸಂಸದರು ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ.  ಶೋಭಾ ಕರಂದ್ಲಾಜೆ ಎಲ್ಲಿ ಇದ್ದಾರೋ ಗೊತ್ತಿಲ್ಲ. ಚುನಾವಣೆ ಮುನ್ನ ಗೋ ಬ್ಯಾಕ್ ಶೋಭಾ ಎನ್ನುತ್ತಿದ್ದರು. ಈಗ ಅಂತಹವರನ್ನು 3 ಲಕ್ಷ ಅಂತರದಿಂದ ಗೆಲ್ಲಿಸಿದ್ದಾರೆ. ಅಬ್ಬಾ ಏನಪ್ಪಾ ಇದು ಆ ದೇವರೆ ಬಲ್ಲ ಎಂದು ಅಚ್ಚರಿಗೊಳಗಾದರು.

ಬಿಜೆಪಿ ಸರ್ಕಾರ ಸರ್ವಾಧಿಕಾರ ಧೋರಣೆ ಅನುಸರಿಸುತ್ತಿದ್ದು,ಸರ್ಕಾರ ಹುಳುಕು, ವೈಫಲ್ಯಗಳು ಜನರಿಗೆ ಗೊತ್ತಾಗುತ್ತದೆ ಎಂದು ಮಾಧ್ಯಮದವರನ್ನು ಅಧಿವೇಶನದಲ್ಲಿ ದೂರ ಇಟ್ಟಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರನ್ನು ದೂರವಿರಿಸಿ ಏನು ಮಾಡಲು ಸಾಧ್ಯವಿಲ್ಲ.   ವಿಧಾನಸಭೆಯಲ್ಲಿ ನಡೆಯುವ ಕಲಾಪ ಎಲ್ಲರಿಗೂ ಗೊತ್ತಾಗಬೇಕು. ಕಲಾಪ ಗೌಪ್ಯವಾಗಿ ನಡೆಯುವುದಿಲ್ಲ.  ಎಲ್ಲರಿಗೂ ಗೊತ್ತಾಗಲಿ ಎಂದೇ ನಾವು ಚರ್ಚೆ ಮಾಡುತ್ತೇವೆ.  ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಇಬ್ಬರೂ ಸೇರಿಯೇ ಮಾಧ್ಯಮದವರನ್ನುನಿರ್ಬಂಧಿಸುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಅವರು ಆರೋಪಿಸಿದರು.

ಬಿಜೆಪಿಯವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದು, ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಪ್ರಜಾತಂತ್ರ ಯಶಸ್ವಿಯಾಗಬೇಕಾದರೇ, ನಾಲ್ಕು ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾ ರಂಗದ ಪಾತ್ರ ಅತ್ಯಂತ ಮುಖ್ಯ. ಪ್ರತಿ ನಿಯಮಾಯಳಿಗಳನ್ನು ನಾವೇ ಮಾಡಿಕೊಂಡಿರುವುದು.  ನಿಯಮಾವಳಿಗಳು ದೇವಲೋಕದಿಂದ ಇಳಿದು ಬಂದಿಲ್ಲ. ಅವರು ಮಾನವ ನಿರ್ಮಿತ. ಆದರೆ ನಿಯಮಾವಳಿಗಳ ಮೇಲೆ ಬಿಜೆಪಿ ಅವರಿಗೆ ನಂಬಿಕೆ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com