ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ವಿಫಲ- ಸೆ 24ಕ್ಕೆ ಬೆಳಗಾವಿಯಲ್ಲಿ ಕಾಂಗ್ರೆಸ್ ಬೃಹತ್  ಪ್ರತಿಭಟನೆ 

ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರದ ವೈಫಲ್ಯ ಹಾಗೂ ಆಡಳಿತ ಯಂತ್ರದ ನಿಷ್ಕ್ರಿಯತೆಯನ್ನು ರಾಜಕೀಯವಾಗಿ ಬಳಸಿಕೊಳ್ಳಲು ವಿರೋಧಪಕ್ಷ ಕಾಂಗ್ರೆಸ್ ನಿರ್ಧರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು:  ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರದ ವೈಫಲ್ಯ ಹಾಗೂ ಆಡಳಿತ ಯಂತ್ರದ ನಿಷ್ಕ್ರಿಯತೆಯನ್ನು ರಾಜಕೀಯವಾಗಿ ಬಳಸಿಕೊಳ್ಳಲು ವಿರೋಧಪಕ್ಷ ಕಾಂಗ್ರೆಸ್ ನಿರ್ಧರಿಸಿದೆ.

ಪ್ರವಾಹ ಮತ್ತು ಬರಪೀಡಿತ ಪರಿಸ್ಥಿತಿ ನಿಭಾಯಿಸಲು ಸರ್ಕಾರದ ಅಸಮರ್ಥತೆ, ಪರಿಹಾರ ಘೋಷಣೆಗೆ ಮೀನಾಮೇಷ ನೀತಿ ಅನುಸರಿಸುತ್ತಿರುವ ಕೇಂದ್ರ ಸರ್ಕಾರ ವಿರುದ್ಧ ಹೋರಾಟ, ಬೆಳಗಾವಿ ಅಧಿವೇಶನ ನಡೆಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವುದೂ ಸೇರಿದಂತೆ ಮತ್ತಿತರ ಮಹತ್ವದ ವಿಚಾರಗಳನ್ನು ಮುಂದಿಟ್ಟು ಸರ್ಕಾರದ ವಿರುದ್ಧ ರಾಜ್ಯಾದ್ಯಂತ ವಿವಿಧ ರೀತಿಯ ಹೋರಾಟ ರೂಪಿಸುವ  ಕಾರ್ಯತಂತ್ರಗಳನ್ನು ಶಾಸಕಾಂಗ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ  ಬುಧವಾರ ನಡೆದ ಶಾಸಕಾಂಗ ಸಭೆಯಲ್ಲಿ ಹೆಣೆಯಲಾಗಿದೆ.

ಬರ ಮತ್ತು ಪ್ರವಾಹಪೀಡಿತ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಕೂಡಲೇ ಪರಿಹಾರ ನೀಡುವಂತೆ ಒತ್ತಾಯಿಸಲು ಪ್ರದೇಶವಾರು ಆಂದೋಲನ, ಸಹಕಾರ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ರೈತರ ಸಾಲ ಮನ್ನಾ ಹಾಗೂ ಬರ,ನೆರೆಪೀಡಿತ ಪ್ರದೇಶಗಳ‌ಘೋಷಣೆಗೆ ಸರ್ಕಾರಕ್ಕೆ ಒತ್ತಾಯ, ಸೆ 24 ರಂದು ಬೆಳಗಾವಿಯಲ್ಲಿ ಬೃಹತ್ ಮಟ್ಟದ ಪ್ರತಿಭಟನೆ ನಡೆಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು‌.

ಉತ್ತರ ಕರ್ನಾಟಕ ಭಾಗದಲ್ಲಿನ‌ ಸಂತ್ರಸ್ತರ ಕುರಿತ‌ ಚರ್ಚೆಗೆ ಬೆಳಗಾವಿ ಅಧಿವೇಶನ ನಡೆಸಲು ಸರ್ಕಾರಕ್ಕೆ ಆಗ್ರಹ , ಮುಖಂಡ ಡಿ.ಕೆ.ಶಿವಕುಮಾರ್ ಪರ ನಿಲ್ಲಲು ಹಾಗೂ ದ್ವೇಷದ ರಾಜಕಾರಣ ಮಾಡುತ್ತಿರುವ ಬಿಜೆಪಿ ವಿರುದ್ಧ ಪ್ರತಿತಂತ್ರ ರೂಪಿಸಲು ಶಾಸಕಾಂಗ ಸಭೆ ಅನುಮೋದಿಸಿದೆ.

ಸಭೆ ಬಳಿಕ ಸಿದ್ದರಾಮಯ್ಯ ಮಾತನಾಡಿ, ಇಂದು ವಿಶೇಷ ಶಾಸಕಾಂಗ ಸಭೆ ನಡೆದಿದೆ.ರಾಜ್ಯದ  22  ಜಿಲ್ಲೆಗಳ 103 ,ತಾಲೂಕುಗಳಲ್ಲಿ ಹಿಂದೆಂದೂ ಆಗದ ರೀತಿ ಭೀಕರ ಪ್ರವಾಹವಾಗಿದೆ.ಇಷ್ಟೊಂದು ದೊಡ್ಡಮಟ್ಟದಲ್ಲಿ ನೆರೆಹಾನಿಯಾಗಿದ್ದರೂ ಸರ್ಕಾರ ಸಮರ್ಪಕವಾಗಿ ಪರಿಹಾರ ನೀಡಿಲ್ಲ. ನೀರು ನುಗ್ಗಿದ ಕುಟುಂಬಗಳಿಗೆ ಇನ್ನೂ ಹತ್ತು ಸಾವಿರ ರೂ. ಪರಿಹಾರ ನೀಡಿಲ್ಲ. ತಾತ್ಕಾಲಿಕ ಶೆಡ್ ಗಳನ್ನು ಸಹ ನಿರ್ಮಿಸಿಲ್ಲ.ಕೇವಲ 10  ಸಾವಿರ ರೂ.ಗಳನ್ನು ಪಾತ್ರೆ, ಬಟ್ಟೆ, ಮಕ್ಕಳ ಪುಸ್ತಕ ಹಾಸಿಗೆಗಳಿಗೆ ಮಾತ್ರ ನೀಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. 

ಕೇಂದ್ರ ಸರ್ಕಾರ ಪ್ರವಾಹಕ್ಕೂ ತನಗೂ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದೆ‌. ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಗಮನವೇ ಹರಿಸುತ್ತಿಲ್ಲ. ಸರ್ಕಾರದ ಸಚಿವರಾಗಲೀ,ಬಿಜೆಪಿ ಸಂಸದರಾಗಲೀ ಕೇಂದ್ರದ ಮೇಲೆ ಒತ್ತಡ ಹೇರುವ ಕೆಲಸ ಮಾಡುತ್ತಿಲ್ಲ. ಬೆಂಗಳೂರಿಗೆ ಭೇಟಿ ನೀಡಿದ್ದ ಮೋದಿ, ರಾಜ್ಯದ ಪ್ರವಾಹ ಸಮೀಕ್ಷೆ ನಡೆಸುವುದಾಗಲಿ, ಸಂತ್ರಸ್ತರಿಗೆ ಸಾಂತ್ವನವನ್ನು ಹೇಳುವುದಾಗಲಿ ಮಾಡಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.

ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ, ಬರ, ನೆರೆಪೀಡಿತ ತಾಲೂಕುಗಳನ್ನು ಘೋಷಿಸುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳನ್ನು ಒತ್ತಾಯಿಸಲಾಗುವುದು ಎಂದರು.

ಸಚಿವ ಕೆ.ಎಸ್. ಈಶ್ವರಪ್ಪ ಸಂಸ್ಕೃತಿ ಇಲ್ಲದ ವ್ಯಕ್ತಿ. ಸಾರ್ವಜನಿಕ ಜೀವನದಲ್ಲಿ ಇರಲು ಅವರು ನಾಲಾಯಕ್. ಅವಾಚ್ಯ ಪದಗಳನ್ನು ಬಳಸಲು ಎಲ್ಲರಿಗೂ ಬರುತ್ತದೆ. ಸಾರ್ವಜನಿಕ ಜೀವನದಲ್ಲಿ ಇರುವ ಜನಪ್ರತಿನಿಧಿಗಳು ಯೋಚಿಸಿ ಮಾತನಾಡಬೇಕಾಗುತ್ತದೆ. ಹೊಲಸು ಪದಪ್ರಯೋಗ, ಹೊಲಸು ಭಾಷೆಗಳನ್ನಾಡುವುದು ಈಶ್ವರಪ್ಪಗೆ  ಕಸುಬಾಗಿ ಹೋಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಬಿಜೆಪಿಗೆ ಮತಹಾಕುವ ಮುಸ್ಲೀಮರು ಮಾತ್ರವೇ ದೇಶಭಕ್ತರು, ಕಾಂಗ್ರೆಸ್ ಗೆ  ಮತಚಲಾಯಿಸುವವರು ಪಾಕಿಸ್ತಾನದ ಪರ ಎನ್ನುವ ಈಶ್ವರಪ್ಪ ಮಾತಿಗೆ ಯಾವುದಾದರೂ ಅರ್ಥವಿದೆಯಾ. ಸಚಿವಸ್ಥಾನಕ್ಕೇರಿದರೂ ಈಶ್ವರಪ್ಪಗೆ ಇನ್ನೂ ಬುದ್ಧಿಬಂದಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com