ಮುಖ್ಯ ಎಂಜಿನಿಯರ್ ಹುದ್ದೆಗಳನ್ನು ಮಾರುಕಟ್ಟೆಯಲ್ಲಿ ಬಿಡ್ ಮಾಡುವಂತೆ ಹರಾಜಿಗಿಟ್ಟಿದ್ದಾರೆ- ಎಚ್ ಡಿ ರೇವಣ್ಣ

ರಾಜ್ಯದಲ್ಲಿ ಎಪಿಎಂಸಿ ಮಾರುಕಟ್ಟೆಗಳಲ್ಲಿ ತರಕಾರಿ, ರೈತರ ಉತ್ಪನ್ನಗಳಿಗೆ ಬಿಡ್ ಕೂಗುವಂತೆ ಮುಖ್ಯ ಎಂಜಿನಿಯರ್ ಹುದ್ದೆಗಳಿಗೆ ಬಿಡ್ ಕೂಗಲಾಗುತ್ತಿದೆ. ಈ ಪಾಪದ ಕೆಲಸ ಮಾಡಲು ಯಡಿಯೂರಪ್ಪ ಮುಖ್ಯಮಂತ್ರಿ ಆಗಿರಬೇಕೆ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಸರ್ಕಾರದ ನಡೆ ವಿರುದ್ಧ ಕಿಡಿಕಾರಿದ್ದಾರೆ.

Published: 19th September 2019 04:29 PM  |   Last Updated: 19th September 2019 04:29 PM   |  A+A-


HDRevanna

ಎಚ್ ಡಿ ರೇವಣ್ಣ

Posted By : Nagaraja AB
Source : UNI

ಹಾಸನ: ರಾಜ್ಯದಲ್ಲಿ ಎಪಿಎಂಸಿ ಮಾರುಕಟ್ಟೆಗಳಲ್ಲಿ ತರಕಾರಿ, ರೈತರ ಉತ್ಪನ್ನಗಳಿಗೆ ಬಿಡ್ ಕೂಗುವಂತೆ ಮುಖ್ಯ ಎಂಜಿನಿಯರ್ ಹುದ್ದೆಗಳಿಗೆ ಬಿಡ್ ಕೂಗಲಾಗುತ್ತಿದೆ. ಈ ಪಾಪದ ಕೆಲಸ ಮಾಡಲು ಯಡಿಯೂರಪ್ಪ ಮುಖ್ಯಮಂತ್ರಿ ಆಗಿರಬೇಕೆ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಸರ್ಕಾರದ ನಡೆ ವಿರುದ್ಧ ಕಿಡಿಕಾರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯ ಎಂಜಿನಿಯರ್ ಗಳ ಪದೋನ್ನತಿ ಕಡತವನ್ನು ಎರಡು ತಿಂಗಳುಗಳಿಂದ ವಿಲೇವಾರಿ ಮಾಡದೆ ಇರಿಸಿಕೊಂಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, 24 ಮುಖ್ಯ ಎಂಜಿನಿಯರ್ ಗಳಿಗೆ ಬಡ್ತಿ ಮೂಲಕ ಪದೋನ್ನತಿ ನೀಡುವ ಕಡತಕ್ಕೆ ಸಹಿ ಹಾಕಿದ್ದಾರೆ.24 ಜನರಲ್ಲಿ 17 ಎಂಜಿನಿಯರ್ ಗಳಿಗೆ ಮಾತ್ರ ಬಡ್ತಿ ಆದೇಶ ನೀಡಿದ್ದು, ಒಂದು ಸಮಾಜಕ್ಕೆ ಸೇರಿದವರು ಎಂಬ ಕಾರಣಕ್ಕಾಗಿ ಏಳು ಜನರ ಪದೋನ್ನತಿ ತಡೆ ಹಿಡಿದಿದ್ದಾರೆ. ಒಂದು ಸಮಾಜವನ್ನು ಗುರಿಯಾಗಿಸಿಕೊಂಡು ಕೆಲಸ ಮಾಡುತ್ತಿರುವುದು ನಾಚಿಕೇಗೇಡಿನ ಸಂಗತಿ ಎಂದರು.

ಒಂದೊಂದು ಬಡ್ತಿಗೆ ಎಷ್ಟೆಷ್ಟು ಹಣ ಪಡೆದಿದ್ದೀರಾ? ಈ ಅಧಿಕಾರಿಗಳ ಮೇಲೆ ತನಿಖೆ ಏಕೆ ನಡೆಯುತ್ತಿಲ್ಲ? ಏಳು ಜನರ ಬಡ್ತಿಗೆ ತಡೆ ಹಿಡಿದಿರುವ ಕಾರಣ ಬಹಿರಂಗಪಡಿಸಲಿ ಎಂದು ಅವರು ಸರ್ಕಾರಕ್ಕೆ ಸವಾಲು ಹಾಕಿದರು.

ಒಕ್ಕಲಿಗ ಸಮಾಜವನ್ನು ಮುಗಿಸಬೇಕು ಎನ್ನುವ ಕಾರಣಕ್ಕಾಗಿಯೇ ಡಿಕೆ ಶಿವಕುಮಾರ್ ಅವರನ್ನು ಗುರಿಯಾಗಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆದರೆ, ಆ ಸಮಾಜವನ್ನು ಮುಗಿಸಲು ಬಿಜೆಪಿಯಿಂದ ಸಾಧ್ಯವಿಲ್ಲ. ಎಪ್ಪತ್ತೈದು ವರ್ಷ ದಾಟಿದವರಿಗೆ ಹುದ್ದೆ ಇಲ್ಲ ಎಂಬ ನಿಯಮದಿಂದ ಯಡಿಯೂರಪ್ಪ ಅವರಿಗೆ ಬಿಜೆಪಿ ವಿನಾಯಿತಿ ನೀಡಿದೆ. ಅವರಿಗೆ ದೇವರು ಶಿಕ್ಷೆ ಕೊಡುವ ಕಾಲ ಬರುತ್ತದೆ. ಸಮಾಜದವರನ್ನು ಮುಗಿಸಲು ಪ್ರಯತ್ನ ಪಟ್ಟವರು ಮನೆಗೆ ಹೋಗಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ದೇವೇಗೌಡರ ಕುಟುಂಬದಲ್ಲಿ ಉತ್ತರಾಧಿಕಾರಿ ನೇಮಕ ಪದ್ಧತಿ ಇಲ್ಲ. ಜನರು ಒಪ್ಪುವವರೆಗೆ ಮಾತ್ರ ರಾಜಕೀಯದಲ್ಲಿರುತ್ತೇವೆ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಉತ್ತರಾಧಿಕಾರಿಯಾಗಿ ಬಿ.ವೈ. ವಿಜಯೇಂದ್ರ ಅವರನ್ನು ನೇಮಿಸಿದ್ದಾರೆ. ಮುಂದೆ ಅವರಿಗೆ ಅಧಿಕಾರ ಸಿಗುವುದಿಲ್ಲ ಎಂದು ತಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ಸಾಕಾಗುವಷ್ಟು ಹಣ ಮಾಡಿಕೊಳ್ಳುವ ಉದ್ದೇಶದಿಂದ ತಮ್ಮ ಪುತ್ರನಿಗೆ ಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು

Stay up to date on all the latest ರಾಜಕೀಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp