ಯಡಿಯೂರಪ್ಪ ನೋಡಿದರೆ ಕರುಣೆ ಬರುತ್ತದೆ, ರಾಜೀನಾಮೆ ನೀಡುವುದು ಒಳ್ಳೆಯದು: ಸಿದ್ದರಾಮಯ್ಯ

ತಂತಿ ಮೇಲೆ ನಡೆಯುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  ಹಗ್ಗದಿಂದ ಬಿದ್ದುಹೋಗಬಹುದು. ಸರ್ಕಾರ ಮುನ್ನಡೆಸಲು ಯಡಿಯೂರಪ್ಪ ಅವರಿಗೆ ಸಾಧ್ಯವಾಗದೇ ಹೋದರೆ ತಮ್ಮ  ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಯಡಿಯೂರಪ್ಪ-ಸಿದ್ದರಾಮಯ್ಯ
ಯಡಿಯೂರಪ್ಪ-ಸಿದ್ದರಾಮಯ್ಯ

ರಾಯಚೂರು: ತಂತಿ ಮೇಲೆ ನಡೆಯುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  ಹಗ್ಗದಿಂದ ಬಿದ್ದುಹೋಗಬಹುದು. ಸರ್ಕಾರ ಮುನ್ನಡೆಸಲು ಯಡಿಯೂರಪ್ಪ ಅವರಿಗೆ ಸಾಧ್ಯವಾಗದೇ ಹೋದರೆ ತಮ್ಮ  ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ನೋಡಿದರೆ ಅಯ್ಯೋ ಪಾಪ ಎನಿಸುತ್ತದೆ. ಯಡಿಯೂರಪ್ಪ ಒಬ್ಬ ದುರ್ಬಲ ಮುಖ್ಯಮಂತ್ರಿ. ಯಡಿಯೂರಪ್ಪ ರಚಿಸಿರುವುದು 105 ಶಾಸಕರಿರುವ ಅಲ್ಪಸಂಖ್ಯೆಯುಳ್ಳ ಅನೈತಿಕ ಸರ್ಕಾರ. ನಮ್ಮ ಹಾಗೂ ಜೆಡಿಎಸ್ ಶಾಸಕರಿಗೆ ಆಮೀಷ ತೋರಿಸಿ ಸರ್ಕಾರ ರಚಿಸಿದ್ದಾರೆ. ಇದು ಭವಿಷ್ಯವಿಲ್ಲದ ಸರ್ಕಾರ ಎಂದು ಟೀಕಿಸಿದರು.

ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರ ಬೆಳೆ ಪರಿಹಾರ ನೀಡಿಲ್ಲ. ಸುಮಾರು 2.5 ಲಕ್ಷಕ್ಕೂ ಹೆಚ್ಚು ಮನೆಗಳು ನಾಶವಾಗಿದ್ದು, ಸಂತ್ರಸ್ತರಿಗೆ ಇದುವರೆಗೂ ಮನೆಗಳನ್ನು ಕಟ್ಟಿಕೊಟ್ಟಿಲ್ಲ. ಇದೊಂದು ಕಣ್ಣು, ಕಿವಿ, ಮೂಗು ಇಲ್ಲದ ದಪ್ಪಚರ್ಮದ ಸರ್ಕಾರ ಎಂದರು. 

ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದಿಲ್ಲ.15 ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಲಿದೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸಲೇಬೇಕೆಂದು ಸರ್ಕಾರವನ್ನು ಈ ಸಂದರ್ಭದಲ್ಲಿ ಆಗ್ರಹಿಸಿದರು‌. ಪ್ರಜಾಪ್ರಭುತ್ವದಲ್ಲಿ ಗೆಲುವು ಸೋಲು ಸ್ವಾಭಾವಿಕ. ಸರ್ಕಾರದಲ್ಲಿ ದ್ವೇಷದ ರಾಜಕಾರಣ ವ್ಯವಸ್ಥಿತವಾಗಿ ನಡೆಯುತ್ತಿದೆ. ವಿರೋದ ಪಕ್ಷದ ನಾಯಕರನ್ನ ಹತ್ತಿಕ್ಕುವ ಮೂಲಕ ರಾಜಕೀಯವಾಗಿ ಮುಗಿಸಲು ಎಲ್ಲಾ ರೀತಿಯ ಷಡ್ಯಂತ್ರ ನಡೆಸಲಾಗುತ್ತಿದೆ. ಚುನಾವಣೆ ಆಯೋಗ, ಇಡಿ, ಸಿಬಿಐ ಎಲ್ಲಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರುಪಯೋಗ  ಮಾಡಿಕೊಳ್ಳಲಾಗುತ್ತಿದೆ. ವಿದ್ಯುನ್ಮಾನ ಮತಯಂತ್ರಗಳ ದುರ್ಬಳಕೆ ಆಗುತ್ತಿದ್ದು, ಪೇಪರ್ ಬ್ಯಾಲೆಟ್ ಮತದಾನಕ್ಕೆ ಚುನಾವಣಾ ಆಯೋಗ ಮುಂದಾಗಬೇಕು ಎಂದು ಆತಂಕ ವ್ಯಕ್ತಪಡಿಸಿದರು.

ಮೂಲ ಮತ್ತು ವಲಸಿಗ ಕಾಂಗ್ರೆಸಿಗರ ಕಚ್ಚಾಟದ ಬಗ್ಗೆ ಮಾತನಾಡಲು ಇಚ್ಛಿಸದ ಸಿದ್ದರಾಮಯ್ಯ, ಪಕ್ಷದ ಆಂತರಿಕ ವಿಚಾರವನ್ನು ಸಾರ್ವಜನಿಕವಾಗಿ ಮಾತನಾಡುವುದಿಲ್ಲ. ತಮ್ಮ ಹಾಗೂ ಕೋಲಾರ ಮಾಜಿ ಸಂಸದ ಕೆ.ಹೆಚ್ ಮುನಿಯಪ್ಪ ಮಧ್ಯೆ ಏನೂ ನಡೆದಿಲ್ಲ. ಮುನಿಯಪ್ಪ ತಮ್ಮ ವಿರುದ್ಧ ಕೆಪಿಸಿಸಿಗೆ ದೂರು ನೀಡಿಲ್ಲ ಎಂದರು. ತಾವೇ ಪಕ್ಷದ ಶಾಸಕಾಂಗ ನಾಯಕ ಎಂದು ಒತ್ತು ಹೇಳಿದ ಸಿದ್ದರಾಮಯ್ಯ, ಆದಷ್ಟು ಬೇಗ ವಿರೋಧಪಕ್ಷ ನಾಯಕರ ಆಯ್ಕೆಯನ್ನು ಹೈಕಮಾಂಡ್ ಮಾಡಲಿದೆ ಎಂದರು.

ಸರ್ಕಾರ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಲು ಹೊರಟಿರುವುದಕ್ಕೆ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಈ ಸರ್ಕಾರದಲ್ಲಿ ಸಚಿವರು ಇದ್ದಾರೋ ಇಲ್ಲವೋ ಎನ್ನುವುದೇ ಗೊತ್ತಾಗುತ್ತಿಲ್ಲ. ಎಲ್ಲಿಯೂ ಸಚಿವರು ಕಾಣಿತ್ತಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಮರಿಚಿಕೆ ಆಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು. ಮೈಸೂರು ಜಿಲ್ಲೆಯವರಾದ ತಾವು ಈ ಹಿಂದೆ ಹಲವು ಬಾರಿ ದಸರಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೆ. ಹಲವಾರು ಉತ್ಸವಗಳನ್ನು ಆಯೋಜಿಸಿರುವ ಅನುಭವವೂ ತಮಗಿದೆ. ಈ ಬಾರಿ ದಸರೆಗೆ ದಸರಾ ಸಮಿತಿಯಿಂದ ತಮಗೆ ಆಹ್ವಾನ ಬಂದಿಲ್ಲ. ಆಹ್ವಾನವಿಲ್ಲದೇ ಹೋಗುವುದು ಸರಿಯಲ್ಲ ಎಂದು ಸೂಚ್ಯವಾಗಿ ಹೇಳಿದರು.
ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆ ಮಾಡುತ್ತಿದೆ.‌ ಮಾಡಲಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಅನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ಹೀಗಾಗಿ ಅದೇ ಕಾರಣಕ್ಕೆ ಹೊಟ್ಟೆ ಉರಿಯಿಂದ ತಮ್ಮ ಹಾಗೂ ದಿನೇಶ್ ಗುಂಡೂರಾವ್ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com