

ಬೆಳಗಾವಿ: ಈ ತಿಂಗಳ ಕೊನೆಯ ವಾರದಲ್ಲಿ ಇಲ್ಲವೇ ಜನವರಿ ಮೊದಲ ವಾರದಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೋಳಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ತಡವಾಗಿದೆ. ಈ ತಿಂಗಳ ಕೊನೆಯಲ್ಲಿ ಅಥವಾ ಜನವರಿ ಮೊದಲ ವಾರದಲ್ಲಿ ಆಗುವ ಸಾಧ್ಯತೆ ಇದೆ ಎಂದರು.
ಇನ್ನು ಪರಿಷತ್ ಗದ್ದಲಕ್ಕೆ ಸಂಬಂಧಿಸಿದ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಭಾಪತಿ ಪ್ರತಾಪ್ ಶೆಟ್ಟಿ ಒಳ್ಳೆಯ ವ್ಯಕ್ತಿ. ಆದರೇ ಅವರಿಗೆ ಬಹುಮತವಿಲ್ಲ. ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವುದು ಒಳ್ಳೆಯದು ಎಂದು ತಿಳಿಸಿದರು.
ಲೋಕಸಭಾ ಉಪ ಚುನಾವಣೆ ಘೋಷಣೆಯಾದ ಬಳಿಕ ಅಭ್ಯರ್ಥಿ ಆಯ್ಕೆ ನಡೆಯಲಿದೆ. ಹೈಕಮಾಂಡ್ ಯಾರನ್ನು ಸೂಚಿಸುತ್ತದೋ ಅವರನ್ನು ಗೆಲ್ಲಿಸಲೂ ಪ್ರಯತ್ನಿಸಲಾಗುವುದು. ಅದೇ ರೀತಿ ತಾಲೂಕುಗಳ ವಿಂಗಡಣೆಯಾಗಿ ಗೋಕಾಕ್ ಮತ್ತು ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯಾದರೇ ಒಳ್ಳೆಯದು ಎಂದರು.
ಇದೇ ವೇಳೆ ಲಖನ್ ಜಾರಕಿಹೊಳಿಯೊಂದಿಗಿನ ವೈರಲ್ ಫೋಟೊ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ರಮೇಶ ಜಾರಕಿಹೊಳಿ, ನಾವೂ ರಾಜಕೀಯದಲ್ಲಿ ಬೇರೆ ಬೇರೆ ಆದರೇ ಮನೆಯ ಸಮಾರಂಭದಲ್ಲಿ ಒಂದೇ ಎಂದು ಹೇಳುವ ಮೂಲಕ ಮತ್ತೊಮ್ಮೆ ತಮ್ಮ ಕುಟುಂಬದ ಒಗ್ಗಟ್ಟನ್ನು ಪ್ರದರ್ಶಿಸಿದರು. ತಮ್ಮ ಪುತ್ರ ಸದ್ಯದಲ್ಲೇ ರಾಜಕೀಯಕ್ಕೆ ಬರುವುದಿಲ್ಲ ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.