ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

ಸಚಿವ ಸ್ಥಾನಕ್ಕೆ ರಾಜ್ಯ ಬಿಜೆಪಿಯಲ್ಲಿ ತೀವ್ರ ಲಾಬಿ

ಗುರುವಾರ ನಡೆಯಲಿರುವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕಾಗಿ ಆಡಳಿತರೂಢ ಬಿಜೆಪಿ ಪಕ್ಷದಲ್ಲಿ ಲಾಭಿ ಜೋರಾಗಿದೆ. 
Published on

ಬೆಂಗಳೂರು: ಗುರುವಾರ ನಡೆಯಲಿರುವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕಾಗಿ ಆಡಳಿತರೂಢ ಬಿಜೆಪಿ ಪಕ್ಷದಲ್ಲಿ ಲಾಭಿ ಜೋರಾಗಿದೆ. 

13 ಸಚಿವ ಸ್ಥಾನಗಳ ಪೈಕಿ 10ನ್ನು ಉಪ ಚುನಾವಣೆಯಲ್ಲಿ ಗೆದ್ದಿರುವ ನೂತನ ಶಾಸಕರಿಗೆ ನೀಡಲಾಗುತ್ತಿದೆ. ಉಳಿದ ಸ್ಥಾನಗಳಿಗಾಗಿ ಹಿರಿಯರು ಸೇರಿದಂತೆ ಪಕ್ಷದ ಶಾಸಕರು ತೀವ್ರ ಲಾಭಿ ನಡೆಸುತ್ತಿರುವುದಾಗಿ ಬಿಜೆಪಿ ರಾಜ್ಯ ಘಟಕದ ವಕ್ತಾರ ಜಿ. ಮಧುಸೂಧನ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಬಹು ನಿರೀಕ್ಷೆಯ ಸಂಪುಟ ವಿಸ್ತರಣೆಗೆ ಪಕ್ಷದ ಹೈ ಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ ಬಳಿಕ ಫೆಬ್ರವರಿ 6 ರಂದು 13 ಶಾಸಕರು ಸಚಿವರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾನುವಾರ ಪ್ರಕಟಿಸಿದ್ದರು. ಆದಾಗ್ಯೂ,  ಸಚಿವರಾಗುವವರ ಹೆಸರನ್ನು ಹೇಳಿರಲಿಲ್ಲ.

ಡಿಸೆಂಬರ್ 5 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ 12 ನೂತನ ಶಾಸಕರ ಪೈಕಿ 10 ಜನರನ್ನು ಸಚಿವರನ್ನಾಗಿ ಮಾಡಲಾಗುತ್ತಿದೆ. ಮಹೇಶ್ ಕುಮಟ್ಟಳ್ಳಿ ಅವರಿಗೆ  ನವ ದೆಹಲಿಯಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗುತ್ತದೆ ಎಂದು ಮಧುಸೂಧನ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ರಮೇಶ್ ಜಾರಕಿಹೊಳಿ, ಎಸ್. ಟಿ ಸೋಮಶೇಖರ್, ಬೈರತಿ ಬಸವರಾಜ್, ಕೆ. ಸುಧಾಕರ್, ಶಿವರಾಂ ಹೆಬ್ಬಾರ್, ಶ್ರೀಮಂತ್ ಪಾಟೀಲ್ , ಬಿ. ಸಿ. ಪಾಟೀಲ್ , ಆನಂದ್ ಸಿಂಗ್ ಹಾಗೂ ಜೆಡಿಎಸ್ ಪಕ್ಷದ ಕೆ. ಗೋಪಾಲಯ್ಯ, ಕೆ. ಸಿ. ನಾರಾಯಣಗೌಡ ಸಚಿವರಾಗಲಿದ್ದಾರೆ. 

ಉಳಿದ ಸ್ಥಾನಗಳಿಗಾಗಿ ಎಂಟು ಬಾರಿ ಶಾಸಕರಾಗಿರುವ ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ, ಹಾಲಪ್ಪ ಅಚಾರ್, ಎಸ್. ಅಂಗಾರ ಮತ್ತು ಮಾಜಿ ಶಾಸಕ ಸಿ. ಪಿ. ಯೋಗೇಶ್ವರ್ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ ಎಂದು ಮಧುಸೂದನ ತಿಳಿಸಿದ್ದಾರೆ.

225 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 117, ಕಾಂಗ್ರೆಸ್ 68 ಹಾಗೂ ಜೆಡಿಎಸ್ 34 ಸದಸ್ಯರನ್ನು ಹೊಂದಿದೆ. 34 ಸಂಪುಟ ದರ್ಜೆಯ ಸಚಿವರ ಪೈಕಿ ಮುಖ್ಯಮಂತ್ರಿ ಸೇರಿದಂತೆ  ಈಗಾಗಲೇ 18 ಸಚಿವರು ಇದ್ದಾರೆ. 13 ಶಾಸಕರನ್ನು ಸೇರಿಸಿದ ನಂತರ ಮೂರು ಖಾಲಿ ಹುದ್ದೆಗಳು ಉಳಿಯುತ್ತವೆ. ಸಾಂವಿಧಾನಿಕ ಮಿತಿಗಳಿಂದಾಗಿ ಎಲ್ಲಾ ಶಾಸಕರನ್ನು ಮಂತ್ರಿಗಳನ್ನಾಗಿ ಮಾಡಲು ಸಾಧ್ಯವಿಲ್ಲದ ಕಾರಣ, ಉಳಿದ ಕೆಲವರನ್ನು ನಿಗಮ , ಮಂಡಳಿಗಳ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ. 

ವಿಧಾನಸಭೆ ಉಪ ಚುನಾವಣೆಯಲ್ಲಿ ಸೋತಿರುವ ಎಂಟಿಬಿ ನಾಗರಾಜ್ ಹಾಗೂ ಹೆಚ್ ವಿಶ್ವನಾಥ್ ಕೂಡಾ ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಮುಖ್ಯಮಂತ್ರಿ ಅವರ ಮೇಲೆ ಒತ್ತಡ ಹಾಕುತ್ತಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com