

ತುಮಕೂರು: ಕಳೆದ 1 ತಿಂಗಳಿನಿಂದ ನಡೆಯುತ್ತಿದ್ದ ಶಿರಾ ಉಪಚುನಾವಣಾ ಕದನ ಕ್ಲೈಮ್ಯಾಕ್ಸ್ ತಲುಪಿದ್ದು, ಮತದಾನದ ಮುನ್ನಾ ದಿನವಾದ ಸೋಮವಾರ ಮನೆ ಮನೆ ಪ್ರಚಾರದಲ್ಲಿ ಅಭ್ಯರ್ಥಿಗಳು ತೊಡಗಿದ್ದರು.
ನಿನ್ನೆ ಬೆಳಗ್ಗೆಯಿಂದಲೇ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಶಿರಾ ನಗರ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪ್ರಚಾರ ನಡೆಸಿದರು. ಹಾಗೆಯೇ ಬಿಜೆಪಿ ಅಭ್ಯರ್ಥಿ ರಾಜೇಶಗೌಡ ಕೂಡ ಮನೆ ಮನೆ ಪ್ರಚಾರ ಮಾಡಿದರು.
ಶಿರಾ ತಾಲೂಕು ಮುದ್ದಿಗೆರೆ ಕಾವಲ್ ನಲ್ಲಿ ಜಯಚಂದ್ರ ಮನೆ ಮನೆಗೆ ತೆರಳಿ ಪ್ರಚಾರ ಮಾಡಿದರು.
ಉಪಚುನಾವಣೆಯ ಸಾರ್ವಜನಿಕ ರ್ಯಾಲಿಯಲ್ಲಿ ಕೆಲ ದಿನಗಳ ಹಿಂದಷ್ಟೇ ಪಾಲ್ಗೊಂಡಿದ್ದ ಜೆಡಿಎಸ್ ಅಭ್ಯರ್ಥಿ ಅಮ್ಮಜಮ್ಮ ಅವರು, ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆಯ ಚುನಾವಣಾ ಪ್ರಚಾರ ಕಾರ್ಯದಿಂದ ಅಮ್ಮಜಮ್ಮ ಅವರು ದೂರ ಉಳಿದಿದ್ದರು. ಆದರೆ, ಸಂಜೆ ವೇಳೆಗೆ ತಮ್ಮ ಪತಿ ಹಾಗೂ ಮಾಜಿ ಸಚಿವ ಬಿ.ಸತ್ಯನಾರಾಯಣ ಅವರ ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಿದರು.
ನನ್ನ ಪತಿ ಶಾಸಕರಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಜನರ ಮತ ನನ್ನ ಪರವಾಗಿರಲಿದೆ ಎಂದು ನಂಬಿದ್ದೇನೆ. ಇದಲ್ಲದೆ ಅಪ್ಪಾಜಿ (ದೇವೇಗೌಡ) ಅವರ ಪ್ರಬಲ ಪ್ರಚಾರ ನನಗೆ ಗೆಲುವು ತಂದುಕೊಡಲಿದೆ ಎಂಬ ವಿಶ್ವಾಸವಿದೆ.
ಮಂಗಳವಾರ ಬೆಳಿಗ್ಗೆ 9.30ಕ್ಕೆ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಶಿರಾ ನಗರದ ಗಾಂಧಿನಗರದಲ್ಲಿರುವ ಬೂತ್ ನಂಬರ್ 171ರ ರಂಗನಾಥ ಕಾಲೇಜಿನಲ್ಲಿ ಮತದಾನ ಮಾಡಲಿದ್ದಾರೆ. ಹಾಗೆಯೇ ಕಾಂಗ್ರೆಸ್ ಅಭ್ಯರ್ಥಿ ಟಿಬಿ ಜಯಚಂದ್ರ ಅವರು ಜ್ಯೋತಿ ನಗರದಲ್ಲಿರುವ ಬೂತ್ ನಂಬರ್ 179ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತದಾನ ಮಾಡಲಿದ್ದಾರೆ.
ಇನ್ನು ಬಿಜೆಪಿ ಅಭ್ಯರ್ಥಿ ರಾಜೇಶಗೌಡ ಶಿರಾ ತಾಲೂಕಿನ ಚಿರತನಹಳ್ಳಿಯಲ್ಲಿ ಬೆಳಿಗ್ಗೆ 7 ಗಂಟೆಗೆ ಮತದಾನ ಮಾಡಲಿದ್ದಾರೆ.