ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪರಿಷತ್ ಚುನಾವಣೆ: ಮೂರರಲ್ಲಿ ಬಿಜೆಪಿ ಜಯಭೇರಿ, ಮೇಲ್ಮನೆಯಲ್ಲಿ ಬಲ ಹೆಚ್ಚಿಸಿಕೊಂಡ ಬಿಜೆಪಿ

ವಿಧಾನಪರಿಷತ್'ನ ನಾಲ್ಕು ಕ್ಷೇತ್ರಗಳಿಗೆ ನಡೆದ ಚುನಾವಣೆ ಪೈಕಿ ಫಲಿತಾಂಶ ಪ್ರಕಟವಾದ ಮೂರು ಕ್ಷೇತ್ರಗಳನ್ನು ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಂಡು ಹಿರಿಯ ಮನೆಯಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಂಡಿದೆ. 
Published on

ಬೆಂಗಳೂರು: ವಿಧಾನಪರಿಷತ್'ನ ನಾಲ್ಕು ಕ್ಷೇತ್ರಗಳಿಗೆ ನಡೆದ ಚುನಾವಣೆ ಪೈಕಿ ಫಲಿತಾಂಶ ಪ್ರಕಟವಾದ ಮೂರು ಕ್ಷೇತ್ರಗಳನ್ನು ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಂಡು ಹಿರಿಯ ಮನೆಯಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಂಡಿದೆ. 

ಕಾಂಗ್ರೆಸ್ ವಶದಲ್ಲಿದ್ದ ಈಶಾನ್ಯ ಶಿಕ್ಷಕರ ಕ್ಷೇತ್ರ, ಜೆಡಿಎಸ್ ತೆಕ್ಕೆಯಲ್ಲಿದ್ದ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸಿದೆ. ಪಶ್ಚಿಮ ಪದವೀಧರ ಕ್ಷೇತ್ರವನ್ನು ಉಳಿಸಿಕೊಂಡಿದೆ, ಆಗ್ನೇಯ ಪದವೀಧರ ಕ್ಷೇತ್ರದ ಮತ ಎಣಿಕೆ ಆರಂಭ ತಡವಾದ ಕಾರಣ ಬುಧವಾರ ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಹೊಮ್ಮಲಿದೆ. 

ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವುದರಿಂದ 75 ಸದಸ್ಯರು ಇರುವ ಮೇಲ್ಮನೆಯಲ್ಲಿ ಬಿಜೆಪಿಯ ಬಲ ಇನ್ನು ಮುಂದೆ 30ಕ್ಕೆ (ಈವರೆಗೆ 27 ಇತ್ತು) ಹೆಚ್ಚಾಗಿದೆ. ಕಾಂಗ್ರೆಸ್ 27 ( ಈವರೆಗೆ 28) ಹಾಗೂ ಜೆಡಿಎಸ್ ಬಲ 13ಕ್ಕೆ ಇಳಿದಿದೆ. ಉಳಿದಂತೆ ಸಭಾಪತಿ ಹಾಗೂ ಒಬ್ಬರು ಪಕ್ಷೇತರ ಸದಸ್ಯರಿದ್ದಾರೆ. 

ಆಗ್ನೇಯ ಪದವೀಧರ ಕ್ಷೇತ್ರದಲ್ಲಿಯೂ ಬಿಜೆಪಿ ಗೆಲುವು ಸಾಧಿಸಿದ್ದೇ ಆದರೆ, ಪಕ್ಷೇತರರು ಬೆಬಲ ನೀಡಿದ್ದೇ ಆದರೆ, ಬಿಜೆಪಿ ಬಲ 33ಕ್ಕೆ ಏರಿಕೆಯಾಗುವ ಸಾಧ್ಯತೆಗಳಿವೆ. ಪಕ್ಷೇತರರು ಬೆಂಬಲ ನೀಡಿದ್ದೇ ಆದರೆ, ಮೇಲ್ಮನೆಯಲ್ಲಿ ಬಿಜೆಪಿ ಏಕೈಕ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಮೇಲ್ಮನೆಯಲ್ಲಿ ಬಹುಮತಕ್ಕೆ 38 ಸ್ಥಾನಗಳ ಅಗತ್ಯವಿದೆ. 

ಈ ವರೆಗೆ ಸತತವಾಗಿ ಜೆಡಿಎಸ್'ನಿಂದ ಮೂರು ಬಾರಿ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಪುಟ್ಟಣ್ಣ 4ನೇ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾಯಿತರಾಗಿದ್ದಾರೆ. ಅದೇ ರೀತಿ ಈಶಾನ್ಯ ಪದವೀಧರ ಕ್ಷೇತ್ರದ ಸದಸ್ಯರಾಗಿದ್ದ ಕಾಂಗ್ರೆಸ್'ನ ಶರಣಪ್ಪ ಮಟ್ಟೂರು ಅವರನ್ನು ಸೋಲಿಸುವ ಮೂಲಕ ಶಶಿಲ್ ನಮೋಶಿ ಮತ್ತೇ ಮೇಲ್ಮನೆ ಪ್ರವೇಶಿಸಿದ್ದಾರೆ. ಶಶಿಲ್ ನಮೋಶಿ 4ನೇ ಬಾರಿ ಪರಿಷತ್ ಸದಸ್ಯರಾದಂತಾಗಿದೆ. ಪಶ್ಚಿಮ ಪದವೀಧರ ಕ್|ೇತ್ರದಿಂದ ಬಿಜೆಪಿ ಅಭ್ಯರ್ಥಿ ಪ್ರೊ.ಎಸ್.ವಿ.ಸಂಕನೂರ 2ನೇ ಬಾರಿ ಪುನರಾಯ್ಕೆಯಾದರು. 

ಬಿಜೆಪಿ ಸಂಖ್ಯಾಬಲ ಹೆಚ್ಚಿರುವ ಹಿನ್ನೆಲೆಯಲ್ಲಿ ಸಭಾಪತಿ ಸ್ಥಾನ ಬದಲಾಯಿಸುವ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಗಳನ್ನೂ ಇದೇ ವೇಳೆ ತಳ್ಳಿ ಹಾಕುವಂತಿಲ್ಲ. ಈ ಹಿಂದೆ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯದಲ್ಲಿ ಪ್ರತಾಪಚಂದ್ರಶೆಟ್ಟಿ ಅವರನ್ನು ಸಭಾಪತಿಯಾಗಿ, ಜೆಡಿಎಸ್'ನ ಧರ್ಮೇಗೌಡ ಅವರು ಉಪಸಭಾಪತಿಯಾಗಿ ಆಯ್ಕೆ ಮಾಡಲಾಗಿತ್ತು. ಆದರೆ, ಈಗ ಜೆಡಿಎಸ್-ಬಿಜೆಪಿ ನಡುವೆ ಸ್ನೇಹ ಚಿಗುರಿದೆ. 

ಕಳೆದ ಅಧಿವೇಶನದ ವೇಳೆ ಸರ್ಕಾರದ ಪ್ರಮುಖ ವಿಧೇಯಕಗಳ ಮಂಡನೆ, ಅನುಮೋದನೆ ವಿಚಾರದಲ್ಲಿ ಪಕ್ಷಪಾತ ಮಾಡಿದ್ದಾರೆಂದು ಬಿಜೆಪಿ ಸದಸ್ಯರು ಪಕ್ಷದ ನಾಯಕರಲ್ಲಿ ದೂರಿದ್ದರು. ಹೀಗಾಗಿ ಸಭಾಪತಿ ಪ್ರತಾಪಚಂದ್ರಶೆಟ್ಟಿಯವರನ್ನು ಕೆಳಗಿಳಿಸಿ ಬಿಜೆಪಿ ಸದಸ್ಯರನ್ನು ಸಭಾಪತಿ ಮತ್ತು ಉಪಸಭಾಪತಿಯಾಗಿರುವ ಧರ್ಮೇಗೌಡರನ್ನು ಅದೇ ಸ್ಥಾನದಲ್ಲಿ ಮುಂದುವರೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com