ನಮ್ಮಿಂದಲೇ ಕಾಂಗ್ರೆಸ್ ಪಕ್ಷ ಎಂಬ ಭ್ರಮೆ ಬೇಡ: ಡಿ.ಕೆ.ಶಿವಕುಮಾರ್

ನಮ್ಮಿಂದಲೇ ಪಕ್ಷ ಎಂದು ಭಾವಿಸಿದ್ದಾರೆ, ಅದು ಕೇವಲ ಭ್ರಮೆ, ಅದರಿಂದ ಹೊರಗೆ ಬನ್ನಿ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಾರ್ಯಕರ್ತರಿಗೆ ಸಂದೇಶ ರವಾನಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್

ಉಡುಪಿ: ಕಾಂಗ್ರೆಸ್ ಪಕ್ಷದಲ್ಲಿರುವುದು ನಮ್ಮ ಸೌಭಾಗ್ಯ. ಪಕ್ಷ ಇದ್ದರೆ ಮಾತ್ರ ನಾವು ಅಧಿಕಾರಕ್ಕೆ ಬರಲು ಸಾಧ್ಯ. ಯಾರು ಕೂಡ ಪಕ್ಷಕ್ಕೆ ಮುಜುಗರ ತರುವ ಕೆಲಸ ಮಾಡಬಾರದು. ಇಲ್ಲಿ ಎಲ್ಲರೂ ಕಾರ್ಯಕರ್ತರಾಗಿ ದುಡಿಯಬೇಕು. ನಮ್ಮಿಂದಲೇ ಪಕ್ಷ ಎಂದು ಭಾವಿಸಿದ್ದಾರೆ, ಅದು ಕೇವಲ ಭ್ರಮೆ, ಅದರಿಂದ ಹೊರಗೆ ಬನ್ನಿ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಾರ್ಯಕರ್ತರಿಗೆ ಸಂದೇಶ ರವಾನಿಸಿದ್ದಾರೆ.

ಉಡುಪಿಯಲ್ಲಿ ಭಾನುವಾರ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಡಿ.ಕೆ ಶಿವಕುಮಾರ್ , ಇಲ್ಲಿ ಎನ್ಎಸ್ ಯುಐ, ಸೇವಾದಳ, ಯೂತ್ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ರೈತ ಘಟಕ, ಕಾರ್ಮಿಕ ಘಟಕಗಳು ಕಾರ್ಯಾಚರಿಸುತ್ತಿವೆ. ಎಲ್ಲ ಘಟಕಗಳು ಮುಖ್ಯವೇ. ಎಲ್ಲರೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಕೆಳಗೆ ಕೆಲಸ ಮಾಡಬೇಕಿದೆ. ಎಲ್ಲರೂ ಕೂಡ ಕಡ್ಡಾಯವಾಗಿ ಪಂಚಾಯ್ತಿ ಮಟ್ಟದಲ್ಲಿ ಸಮಿತಿ ಮಾಡಬೇಕು. ಪ್ರತಿಯೊಬ್ಬರು ಬೂತ್ ಮಟ್ಟದಲ್ಲಿ ಶ್ರಮಿಸಬೇಕು ಎಂದು ಕರೆ ನೀಡಿದರು.

ನಾವು ಬೂತ್ ಮಟ್ಟದಲ್ಲಿ ಸಮಿತಿ ಮಾಡಲು ತೀರ್ಮಾನಿಸಿದ್ದು, ಅದರಲ್ಲಿ ಎಲ್ಲ ಘಟಕದವರು ಭಾಗಿಯಾಗಿರಬೇಕು. ಅದಕ್ಕಾಗಿ ಆಪ್ ಸಿದ್ಧಪಡಿಸುತ್ತಿದ್ದೇವೆ. ಎಲ್ಲೋ ಶಾಸಕರ ಮನೆಯಲ್ಲಿ ಕೂತು ಪಟ್ಟಿ ಮಾಡುವುದಲ್ಲ. ಬೂತ್ ಬಳಿ ಹೋಗಿ ಅಲ್ಲೇ ಆ ಸಮಿತಿ ರಚನೆಯಾಗಬೇಕು ಎಂದರು.

ಪಕ್ಷ ಇಲ್ಲವಾದರೆ ನಾವು ಯಾರು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಹೀಗಾಗಿ ನಾವು ನಮ್ಮ ಮನೆ ಸರಿ ಮಾಡಿಕೊಳ್ಳಬೇಕು. ಯಾರು ಕೂಡ ಪಕ್ಷಕ್ಕೆ ಮುಜುಗರ ತರುವ  ಹೇಳಿಕೆ ನಾನು ಸಹಿಸುವುದಿಲ್ಲ. ಸಮಸ್ಯೆ ಏನೇ ಇದ್ದರೂ ತಮ್ಮ ಬಳಿ ಬಂದು ಮಾತನಾಡಿ, ನನ್ನಿಂದಲೇ ಕಾಂಗ್ರೆಸ್ ಪಕ್ಷ ಎಂದು ತಿಳಿದಿದ್ದರೆ ಅದು ಭ್ರಮೆ. ಅದರಿಂದ ಹೊರಗೆಬಂದು ಕೆಲಸ ಮಾಡಿ. ಕಾಂಗ್ರೆಸ್ ಪಕ್ಷದಲ್ಲಿರುವುದು ನಮ್ಮ ಸೌಭಾಗ್ಯ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ತಾವು ಹಾಗೂ ವಿನಯ್ ಅವರು ಒಟ್ಟಿಗೆ ವಿದ್ಯಾರ್ಥಿಯಾದಾಗಿನಿಂದ ರಾಜಕೀಯಕ್ಕೆ ಪ್ರವೇಶಿಸಿದೆವು. ನಾವು ವಿದ್ಯಾರ್ಥಿ ಸಂಘಟನೆಗಳಲ್ಲಿ ಸೇರಿದ್ದೆವು. ಪಕ್ಷದಲ್ಲಿರುವ ಯುವ, ವಿದ್ಯಾರ್ಥಿ, ಮಹಿಳಾ ಹಾಗೂ ಇತರೆ ಘಟಕಗಳು ಪಕ್ಷದ ಆಧಾರಸ್ತಂಭ. ಆಸ್ಕರ್ ಫರ್ನಾಂಡಿಸ್, ಜನಾರ್ದನ ಪೂಜಾರಿಯಂತಹ ನಾಯಕರು ತಮ್ಮ ಅವಧಿಯಲ್ಲಿ ಹತ್ತಾರು ನಾಯಕರನ್ನು ಬೆಳೆಸಿದ್ದಾರೆ. ಆಸ್ಕರ್ ಫರ್ನಾಂಡಿಸ್ ಅವರು ಧೀಮಂತ ನಾಯಕ. ಅವರ ಮಾರ್ಗದರ್ಶನ ನಮಗೆ, ನಿಮಗೆ ಹಾಗೂ ಪಕ್ಷಕ್ಕೆ ಅವಶ್ಯಕತೆ ಇದೆ. ಅವರ ಆರೋಗ್ಯ ಇನ್ನು ಗಟ್ಟಿಯಾಗಲಿ ಎಂದು ನಾವು ನೀವು ಪ್ರಾರ್ಥಿಸೋಣ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com