ರೈತ ವಿರೋಧಿ ಮಸೂದೆ ವಿರುದ್ಧ ರಣಕಹಳೆ ಊದಿದ ಕಾಂಗ್ರೆಸ್!

ಕೃಷಿ ಮಸೂದೆ ವಿರುದ್ಧ ಶನಿವಾರ ಕಾಂಗ್ರೆಸ್ ನಡೆಸಿದ ರೈತ ಸಮ್ಮೇಳನವು ಉಪಚುನಾವಣೆಗೆ ನಾಂದಿ ಹಾಡಿದ್ದು, ಸಮ್ಮೇಳನದಲ್ಲಿ ಕೇಂದ್ರ ಮತ್ತು ರಾಜ್ಯದ ಸರ್ಕಾರದ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ಟೀಕಾಪ್ರಹಾರ ನಡೆಸಿದರು. 
ರೈತ ಸಮ್ಮೇಳನದಲ್ಲಿ ಕಾಂಗ್ರೆಸ್ ನಾಯಕರು
ರೈತ ಸಮ್ಮೇಳನದಲ್ಲಿ ಕಾಂಗ್ರೆಸ್ ನಾಯಕರು
Updated on

ಮಂಡ್ಯ: ಕೃಷಿ ಮಸೂದೆ ವಿರುದ್ಧ ಶನಿವಾರ ಕಾಂಗ್ರೆಸ್ ನಡೆಸಿದ ರೈತ ಸಮ್ಮೇಳನವು ಉಪಚುನಾವಣೆಗೆ ನಾಂದಿ ಹಾಡಿದ್ದು, ಸಮ್ಮೇಳನದಲ್ಲಿ ಕೇಂದ್ರ ಮತ್ತು ರಾಜ್ಯದ ಸರ್ಕಾರದ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ಟೀಕಾಪ್ರಹಾರ ನಡೆಸಿದರು. 

ರೈತ ಸಮ್ಮೇಳನದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕರು ಮತ ಹಾಕಿ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಿದ್ದೇ ಆದರೆ, ರೈತ ವಿರೋಧಿ ಕಾಯ್ದೆಗಳನ್ನು ರದ್ದುಪಡಿಸುವ ಭರವಸೆಯನ್ನು ನೀಡಿದ್ದಾರೆ. 

ಇನ್ನು ಕೆಲವೇ ದಿನಗಳಲ್ಲಿ ರಾಜರಾಜೇಶ್ವರಿ ನಗರ ಹಾಗೂ ಶಿರಾದಲ್ಲಿ ಉಪಚುನಾವಣೆ ನಡೆಯಲಿದ್ದು, ಈ ಎರಡೂ ಕ್ಷೇತ್ರಗಳಲ್ಲೂ ಒಕ್ಕಲಿಗರ ಸಂಖ್ಯೆ ಹೆಚ್ಚಾಗಿದೆ. ಚುನಾವಣೆ ವೇಳೆ ಈ ಕ್ಷೇತ್ರಗಳಲ್ಲಾಗುವ ಬೆಳವಣಿಗೆಗಳು ಮಂಡ್ಯ ಮೇಲೂ ಪರಿಣಾಮ ಬೀರಲಿದೆ. ಏಕೆಂದರೆ ಮಂಡ್ಯದಲ್ಲಿಯೂ ಒಕ್ಕಲಿಗರ ಸಂಖ್ಯೆ ಹೆಚ್ಚಾಗಿದ್ದು, ಇಲ್ಲಿನ ಬಹುತೇಕ ಜನರು ಸಾಂಪ್ರದಾಯಿಕವಾಗಿ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಇದರಿಂದ ರೈತರು ಸರ್ಕಾರದ ವಿರುದ್ಧ ತಿರುಗಿಬೀಳುವ ಸಾಧ್ಯತೆಗಳಿವೆ. ಇದನ್ನು ಅರಿತ ಕಾಂಗ್ರೆಸ್ ರೈತ ಸಮ್ಮೇಳನದ ಮೂಲಕ ಕೃಷಿ ಮಸೂದೆ ಕುರಿತು ಪ್ರತಿಭಟನಾ ಧ್ವನಿ ಎತ್ತಿದ್ದಾರೆ. 

ಮಂಡ್ಯದ ಅಂಬೇಡ್ಕರ್ ಭವನದಲ್ಲಿ ನಿನ್ನೆ ರೈತ ಸಮ್ಮೇಳನವನ್ನು ನಡೆಸಲಾಗಿದ್ದು, ಸಾಕಷ್ಟು ರೈತರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿರುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ತೀವ್ರವಾಗಿ ಟೀಕಾಪ್ರಹಾರ ನಡೆಸಿದರು. 

ಕೇಂದ್ರದ ಬಿಜೆಪಿ ನೇತೃತ್ವದ ಪ್ರಧಾನಿ ನರೇಂದ್ರಮೋದಿ ಸರ್ಕಾರ ಕೃಷಿ ಸಂಬಂಧಿತ ಕಾಯ್ದೆಗಳ ಮೂಲ ಸ್ವರೂಪವನ್ನೇ ತಿದ್ದುಪಡಿ ಮಾಡುವ ಮೂಲಕ ಅಂಬಾನಿ-ಅದಾನಿಗಳಿಗೆ ಅನುಕೂಲ ಮಾಡಿ ರೈತರಿಗೆ ಮರಣ ಶಾಸನ ಬರೆಯಲು ಮುಂದಾಗಿದೆ. 2014ರಲ್ಲಿ ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ರೈತರ ಭೂಸ್ವಾಧೀನ ಕಾಯ್ದೆ ರೈತರಿಗೆ ಭದ್ರತೆ ಒದಗಿಸಿತ್ತು. ಆದರೆ ನಂತರ ಬಂದ ಮೋದಿ ಸರ್ಕಾರ ರೈತರ ಈ ಹಕ್ಕುಗಳನ್ನು ಮೊಟಕುಗೊಳಿಸಿ ಅವರನ್ನು ದುರ್ಬಲ ಮಾಡಲು ಹೊರಟಿದೆ ಎಂದು ಕಿಡಿಕಾರಿದರು. ಕನಿಷ್ಠ ಬೆಂಬಲ ಬೆಲೆ ಕೂಡ ರದ್ದು ಮಾಡಲು ಕೇಂದ್ರ ಸರ್ಕಾರ ಹೊರಟಿದೆ. ಆ ಮೂಲಕ ಕೈಗಾರೀಕರಣ ಮತ್ತು ಖಾಸಗೀಕರಣಕ್ಕೆ ಕೆಂಪು ಹಾಸು ಹಾಸಿದೆ. ಇದನ್ನು ಪ್ರತಿಯೊಬ್ಬರೂ ವಿರೋಧಿಸಬೇಕಿದೆ ಎಂದು ಹೇಳಿದ್ದಾರೆ. 

ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಖಂಡಿತವಾಗಿಯೂ ಮತ್ತೆ ಅಧಿಕಾರಕ್ಕೆ ಬರಲಿದೆ. ಅಧಿಕಾರಕ್ಕೆ ಬಂದ ಕೂಡಲೇ ಕೃಷಿ ಮಸೂದೆಯನ್ನು ರದ್ದುಪಡಿಸಲಾಗುತ್ತದೆ. ಭೂ ಸುಧಾರಣಾ ಕಾಯ್ದೆಯನ್ನು ಪುನಃಸ್ಥಾಪಿಸಿ. ಎಪಿಎಂಸಿ ಕಾಯ್ದೆಗೆ ಅಗತ್ಯ ತಿದ್ದುಪಡಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. 

ಎಪಿಎಂಸಿ ರಾಜ್ಯ ಪಟ್ಟಿಯಲ್ಲಿ ಬರುತ್ತದೆ. ಆದರೆ, ಕೇಂದ್ರದ ಬಿಜೆಪಿ ಸರಕಾರ ರಾಜ್ಯಗಳ ಅಧಿಕಾರದ ಮೇಲೆ ಸವಾರಿ ಮಾಡಲು ಹೊರಟಿದೆ. ರಾಜ್ಯ ಪಟ್ಟಿ ವಿಷಯದಲ್ಲಿ ಅನಗತ್ಯ ಮೂಗು ತೂರಿಸುತ್ತಿದೆ. ಇದು ಸಂವಿಧಾನದ ಸಂಪೂರ್ಣ ಉಲ್ಲಂಘನೆಯಾಗಿದೆ. ಇದಕ್ಕೆ ಸಿಎಂ ಯಡಿಯೂರಪ್ಪ ಕೋಲೆ ಬಸವನಂತೆ ತಲೆ ತೂಗಿಸುತ್ತಿದ್ದಾರೆ. ಇದರ ವಿರುದ್ಧ ಧ್ವನಿ ಎತ್ತಬೇಕಾಗಿದೆ ಎಂದು ಅವರು ಕರೆ ನೀಡಿದ್ದಾರೆ. 

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಬಿಜೆಪಿ ಸರಕಾರದ ಆಡಳಿತದಲ್ಲಿ ರೈತರು, ಕಾರ್ಮಿಕರು, ಯುವಕರು, ಉದ್ಯೋಗಿಗಳು ಸೇರಿದಂತೆ ಯಾವ ವರ್ಗದ ಜನರಿಗೂ ನೆಮ್ಮದಿ ಇಲ್ಲ. ಕೊರೋನ ಸಂದರ್ಭದಲ್ಲಿ ರೈತರ ಬದುಕು ಮೂರಾಬಟ್ಟೆಯಾಗಿದೆ. ಅವರಿಗೆ ಸರಕಾರದಿಂದ ಚಿಕ್ಕಾಸೂ ನೆರವು ಸಿಗದೆ ಬೀದಿಗೆ ಬಿದ್ದಿದ್ದಾರೆ. ಸರಕಾರದ ವಿರುದ್ಧ ರೈತರು ಧ್ವನಿ ಎತ್ತಬೇಕಾಗಿದೆ ಎಂದು ಮನವಿ ಮಾಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com