
ತುಮಕೂರು: ರಾಜ್ಯದ ತುಮಕೂರು ಜಿಲ್ಲೆಯ ಶಿರಾ ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ನಗರದ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ರಾಜ್ಯದ ಪ್ರಮುಖ ಮೂರು ಪಕ್ಷಗಳಾಗಿರುವ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಬಿರುಸಿನ ಪ್ರಚಾರ ಕಾರ್ಯ ಆರಂಭಿಸಿವೆ.
ಈ ನಡುವೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ಜೆಡಿಎಸ್ ಪಕ್ಷದ ಯುವನಾಯಕ ನಿಖಿಲ್ ಕುಮಾರಸ್ವಾಮಿ ಕೂಡ ಪ್ರಚಾರ ಕಾರ್ಯಕ್ಕೆ ಧುಮುಕಿದ್ದಾರೆ.
ಶನಿವಾರ ಜಿಲ್ಲೆಯ ಪಟ್ಟನಾಯಕನಹಳ್ಳಿ ಮಠಕ್ಕೆ ಭೇಟಿ ನೀಡಿದ ಕುಮಾರಸ್ವಾಮಿಯವರು, ಪಟ್ಟನಾಯಕನಹಳ್ಳಿ ಮಠದ ನಂಜಾವಧೂತ ಸ್ವಾಮೀಜಿಗಳ ಆಶೀರ್ವಾರ ಪಡೆದು ಬಳಿಕ ಪ್ರಚಾರ ಕಾರ್ಯ ಆರಂಭಿಸಿದರು.
ಕಳೆದ ಏಪ್ರಿಲ್ ತಿಂಗಳಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಿಖಿಲ್ ಅವರು, ವಿವಾಹವಾದ ಬಳಿಕ ಮೊದಲ ಬಾರಿಗೆ ರಾಜಕೀಯ ಪ್ರವಾಸ ಕೈಗೊಂಡಿದ್ದಾರೆ.
ಕ್ಷೇತ್ರ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸುತ್ತಿರುವ ಜೆಡಿಎಸ್ ಜನರ ಮನವೊಲಿಸಲು ಸಾಕಷ್ಟು ಪ್ರಚಾರಗಳನ್ನು ನಡೆಸುತ್ತಿದೆ. ಗುರುವಾರವಷ್ಟೇ ಪ್ರಜ್ವಲ್ ಅವರು ಬೈಕ್ ರ್ಯಾಲಿ ನಡೆಸಿದ್ದರು. ದೇವೇಗೌಡ ಅವರೂ ಕೂಡ ಶಿರಾದಲ್ಲಿಯೇ ಉಳಿದುಕೊಂಡಿದ್ದು, ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.
2019 ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಿಖಿಲ್ ಅವರು, ಸುಮಲತಾ ಅಂಬರೀಶ್ ವಿರುದ್ಧ ಸೋಲುಕಂಡಿದ್ದರು. 2016 ರಲ್ಲಿ ಜಾಗ್ವಾರ್ ದ್ವಿಭಾಷಾ ಚಿತ್ರದ ಮೂಲಕ ಸ್ಯಾಂಡಲ್'ವುಡ್'ಗೆ ಪಾದಾರ್ಪಣೆ ಮಾಡಿದ್ದರು. ಆರ್.ಆರ್.ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ನಿರ್ಮಿಸಿದ್ದ ಕನ್ನಡ ಚಿತ್ರ ಕುರುಕ್ಷೇತ್ರದಲ್ಲಿಯೂ ನಿಖಿಲ್ ನಟಿಸಿದ್ದರು.
Advertisement