ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದಾಗ ಶಾಸಕರಿಗೆ ನೀವೆಷ್ಟು ಗೌರವ ಕೊಟ್ಟಿದ್ದೀರಿ: ಕಾಂಗ್ರೆಸ್ ವಿರುದ್ಧ ಮುನಿರತ್ನ ಕಿಡಿ

ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರ ನಡೆಸುತ್ತಿದ್ದಾಗ ಶಾಸಕರು ನಿಮ್ಮ ಬಳಿ ಪತ್ರ ತೆಗೆದುಕೊಂಡು ಬಂದಾಗ ನೀವೆಷ್ಟು ಗೌರವ ಕೊಟ್ಟಿದ್ದಿರಿ ಎಂಬುದನ್ನು ನೆನಪಿಸಿಕೊಳ್ಳಿ ಎಂದು ಕಾಂಗ್ರೆಸ್ ವಿರುದ್ಧ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ಬಿಜೆಪಿ ನಾಯಕರು
ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ಬಿಜೆಪಿ ನಾಯಕರು

ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರ ನಡೆಸುತ್ತಿದ್ದಾಗ ಶಾಸಕರು ನಿಮ್ಮ ಬಳಿ ಪತ್ರ ತೆಗೆದುಕೊಂಡು ಬಂದಾಗ ನೀವೆಷ್ಟು ಗೌರವ ಕೊಟ್ಟಿದ್ದಿರಿ ಎಂಬುದನ್ನು ನೆನಪಿಸಿಕೊಳ್ಳಿ ಎಂದು ಕಾಂಗ್ರೆಸ್ ವಿರುದ್ಧ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಕಿಡಿಕಾರಿದ್ದಾರೆ. 

ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಮಾತನಾಡಿರುವ ಮುನಿರತ್ನ ಅವರು, ಉಪಚುನಾವಣೆ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಟೀಕೆ ಮಾಡುತ್ತಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಶಾಸಕರು ನಿಮ್ಮ ಬಳಿ ಪತ್ರ ತೆಗೆದುಕೊಂಡು ಬಂದಾಗ ನೀವೆಷ್ಟು ಗೌರವ ಕೊಟ್ಟಿದ್ದೀರಿ ಎಂಬುದನ್ನು ನೆನಪಿಸಿಕೊಳ್ಳಿ. ನೀವು ಸರಿ ಇದ್ದಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ. ಒಬ್ಬರಲ್ಲ 17 ಶಾಸಕರು ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿದ್ದೆವು. ನಾವು ನಮ್ಮ ಸ್ವಂತ ಕೆಲಸಕ್ಕೆ, ಸ್ವಾರ್ಥಕ್ಕೆ ನಿಮ್ಮ ಬಳಿ ಬಂದಿರಲಿಲ್ಲ. ಮತದಾರ ದೇವರುಗಳ ಋಣ ತೀರಿಸುವ ಜವಾಬ್ದಾರಿ ನಮ್ಮ ಮೇಲಿತ್ತು. ಆ ಕೆಲಸ ಮಾಡಲು ಸಾಧ್ಯವಿಲ್ಲದಿದ್ದರೆ ಆ ಜಾಗದಲ್ಲಿ ಇರಬಾರದೆಂದು ತೀರ್ಮಾನಿಸಿ ನಾವು ಬಿಜೆಪಿಗೆ ಬಂದೆವು ಎಂದು ಹೇಳಿದ್ದಾರೆ. 

ತಾಯಿಗೆ ಮೋಸ ಮಾಡಿದ್ದಾರೆಂದು ಹೇಳುತ್ತಿದ್ದೀರಿ. ಆದರೆ, ಚೆಲುವರಾಯಸ್ವಾಮಿ, ಬಾಲಕೃಷ್ಣ, ಜಮೀರ್ ಅವರನ್ನು ಎಲ್ಲಿಂದ ಕರೆದುಕೊಂಡು ಬಂದಿದ್ದೀರಿ. 80 ಶಾಸಕರನ್ನು ಸರಿಯಾಗಿ ಇಟ್ಟುಕೊಳ್ಳಲು ಆಗಲಿಲ್ಲ ನಿಮಗೆ. ಬೆಂಗಳೂರು ಜನ, ರಾಜರಾಜೇಶ್ವರಿವಗರ ಕ್ಷೇತ್ರದ ಜನ ಪ್ರಜ್ಞಾವಂತರು, ಬುದ್ದಿ ಜೀವಿಗಳಾಗಿದ್ದಾರೆ. ದಬ್ಬಾಳಿಕೆ, ದೌರ್ಜನ್ಯ ಸಹಿಸುವುದಿಲ್ಲ. ರಾಜರಾಜೇಶ್ವರಿ ನಗರವನ್ನು ಕೆಜೆ ಹಳ್ಳಿ, ಡಿಜಿ ಹಳ್ಳಿ ಮಾಡಬೇಡಿ. ಒಬ್ಬ ಶಾಸಕನಿಗೆ ರಕ್ಷಣೆ ನೀಡಲು ನಿಮ್ಮಿಂದ ಆಗಲಿಲ್ಲ. ತಪ್ಪು ಮಾಡಿದ ವ್ಯಕ್ತಿಗೆ ಶಿಕ್ಷೆ ನೀಡಿ ಎಂದು ಯಾವ ನಾಯಕರು ಹೇಳಲಿಲ್ಲ. ಆದ್ದರಿಂದ ಈಗ ನಾವು ಹೊರಗೆ ಬಂದಿದ್ದು, ನಮ್ಮ ಕೆಲಸವನ್ನು ಮಾಡಿಕೊಳ್ಳಲು ಬಿಡಿ ಎಂದು ತಿಳಿಸಿದ್ದಾರೆ. 

ಆರ್.ಆರ್ ನಗರ ಕ್ಷೇತ್ರ ಬಹುದೊಡ್ಡ ಕ್ಷೇತ್ರವಾಗಿದ್ದು, ಸಾಕಷ್ಟು ಅಭಿವೃದ್ಧಿ ಕೆಲಸಗಳು ಬಾಕಿ ಉಳಿದಿದೆ. ನಮ್ಮ ಸರ್ಕಾರ ಅವಧಿ ಇನ್ನೂ 2 ವರ್ಷ ಇದೆ. ಆದ್ದರಿಂದ ಕ್ಷೇತ್ರದಲ್ಲಿ ಗೆಲುವು ಪಡೆದರೇ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಬಹುದು. ಸಿಎಂ ಯಡಿಯೂರಪ್ಪ ಕೊಟ್ಟ ಮಾತಿಗೆ ತಪ್ಪಲಿಲ್ಲ ಎಂಬ ಮಾತು ಕೇಳಿದ್ದೆ. ಈಗ ನಿಜ ಜೀವನದಲ್ಲಿ ನೋಡಿದ್ದೇನೆ. ರಾಜರಾಜೇಶ್ವರಿ ನಗರ ಕ್ಷೇತ್ರ, ಬೆಂಗಳೂರು ಅಭಿವೃದ್ಧಿ ಆಗಬೇಕು, ಅದನ್ನ ಯಡಿಯೂರಪ್ಪ ಸರ್ಕಾರ ಮಾಡುತ್ತೆ. ನ್ಯಾಯಯುತವಾಗಿ ಮತದಾನ ಮಾಡಿ, ಅಭಿವೃದ್ಧಿಗೆ ಸಹಕರಿಸಿ, ನನಗೆ ಮತ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com