ಇಲ್ಲಿ ಪೂಜ್ಯನೀಯವಾದ ಗೋವು ಗೋವಾದಲ್ಲೇನು?: ಸಿ.ಟಿ. ರವಿಗೆ ದಿನೇಶ್ ಗುಂಡೂರಾವ್ ಪ್ರಶ್ನೆ
ಗೋಹತ್ಯೆ ನಿಷೇಧ ಸಮರ್ಥಿಸಿ ಮಾತಾಡುವ ಗೋವಾ ಉಸ್ತುವಾರಿ ಸಿ.ಟಿ. ರವಿಯವರು ಗೋವಾದಲ್ಲಿ ಗೋ ಮಾಂಸ ಸರಬರಾಜಿಗೆ ಟೆಂಡರ್ ಪಡೆದಿದ್ದಾರೆಯೆ? ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಹಿರಿಯ ನಾಯಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
Published: 23rd December 2020 10:33 AM | Last Updated: 23rd December 2020 01:27 PM | A+A A-

ದಿನೇಶ್ ಗುಂಡೂ ರಾವ್
ಬೆಂಗಳೂರು: ಗೋಹತ್ಯೆ ನಿಷೇಧ ಸಮರ್ಥಿಸಿ ಮಾತಾಡುವ ಗೋವಾ ಉಸ್ತುವಾರಿ ಸಿ.ಟಿ. ರವಿಯವರು ಗೋವಾದಲ್ಲಿ ಗೋ ಮಾಂಸ ಸರಬರಾಜಿಗೆ ಟೆಂಡರ್ ಪಡೆದಿದ್ದಾರೆಯೆ? ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಹಿರಿಯ ನಾಯಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕರ್ನಾಟಕದಂತೆ ಗೋವಾದಲ್ಲೂ ಗೋ ಹತ್ಯೆ ನಿಷೇಧ ಮಾಡಿಸುವ ಧೈರ್ಯ ಸಿ.ಟಿ. ರವಿಯವರಿಗೆ ಯಾಕಿಲ್ಲ?. ಇಲ್ಲಿ ಪೂಜ್ಯನೀಯವಾದ ಗೋವು ಗೋವಾದಲ್ಲೇನು? ಎಂದು ಅವರು ಪ್ರಶ್ನಿಸಿದ್ದಾರೆ.
ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯ ಕುರಿತು ಬಿಜೆಪಿ ನಾಯಕರು ದ್ವಂದ್ವ ನಿಲುವು ಹಾಗೂ ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ ಎಂದು ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧ ಮತ್ತು ಕಠಿಣ ನಿಯಮಗಳನ್ನು ರೂಪಿಸಿರುವುದರಿಂದ ಗೋವಾದಲ್ಲಿ ಬೀಫ್ ಕೊರತೆಯಾಗಿದೆ. ಸದ್ಯಕ್ಕೆ ಮಾಂಸಕ್ಕೆ ಸಂಬಂಧಿಸಿದಂತೆ ಬಿಕ್ಕಟ್ಟು ಸೃಷ್ಟಿಯಾಗಿದೆ. ಗೋವಾ ರಾಜ್ಯಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಕರ್ನಾಟಕದಿಂದಲೇ ದನದ ಮಾಂಸ ಪೂರೈಕೆಯಾಗುತ್ತಿತ್ತು. ಆದರೆ ಕರ್ನಾಟಕ ದಿಢೀರನೆ ಕಾನೂನು ರೂಪಿಸಿ ಗೋ ಹತ್ಯೆ ಗೆ ನಿಷೇಧ ಹೇರಿದ್ದರಿಂದ ಸಮಸ್ಯೆಯಾಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಇತ್ತೀಚೆಗೆ ತಿಳಿಸಿದ್ದರು.
ಗೋಮಾತೆಯನ್ನು ನಾವು ಪೂಜಿಸುತ್ತೇವೆ, ಆದರೆ ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಯೂ ಸಹ ನನ್ನ ಜವಾಬ್ದಾರಿಯಾಗಿದೆ. ಅಲ್ಪಸಂಖ್ಯಾತರಿಗೆ ದನದ ಮಾಂಸ ನಿತ್ಯದ ಆಹಾರವಾಗಿದೆ. ಆಹಾರ ಕೊರತೆಯಾಗದಂತೆ ಕ್ರಮಕೈಗೊಳ್ಳಲಾಗುವುದು ಎಂದು ಸಾವಂತ್ ಹೇಳಿದ್ದರು. ಈ ಸುದ್ದಿಯನ್ನು ತಮ್ಮ ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಿರುವ ದಿನೇಶ್ ಗುಂಡೂರಾವ್ ಬಿಜೆಪಿ ನಾಯಕರ ದ್ವಂದ್ವ ನಿಲುವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.