ಮತ ಹಾಕಿಸಲು ಮಠಾಧೀಶರು ಬೇಕು, ಸಚಿವ ಸ್ಥಾನ ಕೇಳಿದ್ರೆ ತಪ್ಪಾ?: ಯಡಿಯೂರಪ್ಪಗೆ ಡಿಕೆಶಿ ಪ್ರಶ್ನೆ

ಒಕ್ಕಲುತನ ಮಾಡುವವರೆಲ್ಲರೂ ಒಕ್ಕಲಿಗರೆ. ನಮ್ಮ ಸಮಾಜ ಬರೀ ಒಕ್ಕಲುತನ  ಮಾಡುವ ಒಕ್ಕಲಿಗರನ್ನು ಮಾತ್ರ ಹೊಂದಿಲ್ಲ. ಪಂಚಸಾಲಿ ಬೆಳೆಯುವ ಪಂಚಮಸಾಲಿಯವರನ್ನೂ ಹೊಂದಿದೆ ಎಂದು ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸ್ವಾಮೀಜಿ-ಯಡಿಯೂರಪ್ಪ-ಡಿಕೆ ಶಿವಕುಮಾರ್
ಸ್ವಾಮೀಜಿ-ಯಡಿಯೂರಪ್ಪ-ಡಿಕೆ ಶಿವಕುಮಾರ್

ದಾವಣಗೆರೆ: ಒಕ್ಕಲುತನ ಮಾಡುವವರೆಲ್ಲರೂ ಒಕ್ಕಲಿಗರೆ. ನಮ್ಮ ಸಮಾಜ ಬರೀ ಒಕ್ಕಲುತನ  ಮಾಡುವ ಒಕ್ಕಲಿಗರನ್ನು ಮಾತ್ರ ಹೊಂದಿಲ್ಲ. ಪಂಚಸಾಲಿ ಬೆಳೆಯುವ ಪಂಚಮಸಾಲಿಯವರನ್ನೂ ಹೊಂದಿದೆ ಎಂದು ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಇಲ್ಲಿನ  ಹರಿಹರದಲ್ಲಿ ಬುಧವಾರ ನಡೆದ ಹರ ಜಾತ್ರಾ ಮಹೋತ್ಸವ ಹಾಗೂ ವೀರಶೈವ ಲಿಂಗಾಯತ ಪಂಚಮಸಾಲಿ  ಜಗದ್ಗುರು ಶ್ರೀ ವಚನಾನಂದ ಸ್ವಾಮಿಗಳ ದ್ವಿತೀಯ ಪೀಠಾರೋಹಣ ಕಾರ್ಯಕ್ರಮದಲ್ಲಿ ಮಾಜಿ ಸಚಿವ  ಡಿ.ಕೆ ಶಿವಕುಮಾರ್ ಭಾಗವಹಿಸಿ ಮಾತನಾಡಿದರು.

ಒಕ್ಕಲುತನ ಮಾಡುವ ರೈತರು ಐದು  ನಮೂನೆಯ ಧಾನ್ಯಗಳಾದ ಪಂಚಸಾಲಿಯನ್ನು ಬೆಳೆಯುತ್ತಾರೆ ಎಂದು ನಮ್ಮ ಇತಿಹಾಸ ಹೇಳುತ್ತದೆ. ತಾವು ಒಕ್ಕಲಿಗರಾದರೂ ತಮ್ಮನ್ನು ಗೌಡರೆಂದು ಕರೆದರೂ ತಾವು ಮೂಲತಃ  ಜಿಲ್ಲೆಯ ವೀರಶೈವ ಸಮಾಜದ ಮುಖಂಡ ಗಂಗಾಧರಯ್ಯ ಅವರ ಶಿಷ್ಯ. ಇದು ನಮ್ಮ ನಮ್ಮ ವಿಷಯ ಎಂದು  ಮಾರ್ಮಿಕವಾಗಿ ನುಡಿದರು. ಜಾತಿ ಮತ್ತು ಧರ್ಮವನ್ನೂ ಮೀರಿದ ನಡೆ ತಮ್ಮದಾಗಿರುವ  ಕಾರಣ ಈ ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸಲಾಗಿದೆ. ಜಾತಿ, ಧರ್ಮವನ್ನು ಮೀರಿದ್ದು  ಸಹೋದರತ್ವ ಎಂದು ಶಿವಕುಮಾರ್ ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಭಾಷಣದಲ್ಲಿ  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ತಿರುಗೇಟು ನೀಡಿದ ಶಿವಕುಮಾರ್, ರಾಜಕಾರಣಿಗಳು  ರಾಜಕೀಯಕ್ಕಾಗಿ ಮಠಗಳನ್ನು, ಸ್ವಾಮೀಜಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ರಾಜಕಾರಣಿಗಳು ಮಠಾಧೀಶರ ಮಾತನ್ನು ತಾಳ್ಮೆಯಿಂದ ಕೇಳಬೇಕು. ಅಧಿಕಾರದಲ್ಲಿರುವವರಿಗೆ ಅವಕಾಶ ನೀಡುವಂತೆ ಕೇಳುವುದು ಸಹಜ. ಅಧಿಕಾರ ಇಲ್ಲದವರನ್ನು ಯಾರು ಕೇಳಲು ಆಗುವುದಿಲ್ಲ ಎಂದು ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಪರ ಬ್ಯಾಟ್ ಬೀಸಿದರು.

ತಾವು ದೆಹಲಿಗೆ ಹೋಗುವುದಾಗಿ ಪತ್ರಿಕೆಗಳಲ್ಲಿ ಬಂದಿತ್ತು. ಆದರೆ ದೆಹಲಿಗೆ ಹೋಗದೇ ಶ್ರೀಗಳಿಗೆ ಅಭಯ ನೀಡಲು ಬಂದಿದ್ದೇನೆ. ಸ್ವಾಮಿಗಳೇ ಬೇಸರಿಸಿಕೊಳ್ಳಬೇಡಿ, ತಲೆಕೆಡಿಸಿಕೊಳ್ಳಬೇಡಿ. ನಡೆಯುವವರು ಎಡವುತ್ತಾರೆ. ಕೂದಲು ಮುಪ್ಪಾದಾಗ ಸರಿಯಾಗುತ್ತಾರೆ ಎಂದು ಪರೋಕ್ಷವಾಗಿ ಯಡಿಯೂರಪ್ಪರನ್ನು ಕುಟುಕಿದರು.

ಪಕ್ಷದ  ಪರ ಮತ ಹಾಕಿಸಲು ಮಠಾಧೀಶರು ಬೇಕು. ಆದರೆ ಸಚಿವ ಸ್ಥಾನ ಕೇಳಲು ಬೇಡ ಎಂದರೆ ಹೇಗೆ?  ಪ್ರಶ್ನಿಸಿದ ಶಿವಕುಮಾರ್, ಸಭೆಯಲ್ಲಿ ಸನ್ಮಾನಕ್ಕಾಗಿ ತಾವು ಬಂದಿಲ್ಲ. ವಚನಾನಂದ ಶ್ರೀಗಳ  ಪೀಠದ ಜೊತೆ ಇದ್ದೇನೆ ಎಂದು ಹೇಳಲು ಅಭಯ ನೀಡಲು ಬಂದಿದ್ದೇನೆ. ಸ್ವಾಮೀಜಿಗಳ ಜೊತೆ ನಿಮ್ಮೆಲ್ಲರ ಆಶೀರ್ವಾದವು ಸಹ ತಮ್ಮ ಮೇಲಿರಲಿ ಎಂದು ಮನವಿ ಮಾಡಿದರು. ಕಾರ್ಯಕ್ರಮಕ್ಕೂ  ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಕೆಪಿಸಿಸಿಯೂ ಸೇರಿದಂತೆ ಯಾವುದೇ  ಸ್ಥಾನದ ಆಕಾಂಕ್ಷಿ ಅಲ್ಲ. ಎಲ್ಲಿಯೂ ತಮ್ಮ ಹೆಸರು ಪ್ರಸ್ತಾಪವಾಗಿಲ್ಲ ಎಂದರು. 

ಕಪಾಲಿಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣವನ್ನು ವಿರೋಧಿಸಿ ಮತ್ತೊಂದು ಕಡೆ ಚರ್ಚ್ ನ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಡೆ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ್, ಅವರವರ ನೀತಿ, ಧರ್ಮ, ಪಕ್ಷ ಅವರ ಮತಗಳ ವಿಚಾರ. ಅವರು ಏನು  ಬೇಕಾದರೂ ಮಾಡಿಕೊಳ್ಳಲಿ. ಅದಕ್ಕೆ ಏಕೆ ತಲೆ ಕೆಡಿಸಿಕೊಳ್ಳಬೇಕು?. ತಾವು ಎಂದಿಗೂ ಮತ ಬ್ಯಾಂಕ್ ರಾಜಕಾರಣ ಮಾಡುವುದಿಲ್ಲ. ತಮಗೆ ಎಲ್ಲಾ ಸಮುದಾಯದವರು ಬೇಕು. ಕನಕಪುರದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಯಡಿಯೂರಪ್ಪ ವಿರೋಧಿಸಿದ್ದಾರೆ. ಕ್ಷೇತ್ರದ ಶಾಸಕನಾಗಿ ತಾವು ತಮ್ಮ ಕರ್ತವ್ಯ ನಿಭಾಯಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com