ಮೇಲ್ಮನೆಯಲ್ಲಿ ಜೆಡಿಎಸ್ ಮತ್ತು ಪಕ್ಷೇತರ ಸದಸ್ಯರೇ ನಿರ್ಣಾಯಕ: ಸಭಾಪತಿ ಸ್ಥಾನದ ಭವಿಷ್ಯ ಜೆಡಿಎಸ್ ಕೈಯಲ್ಲಿ!

ಮೇಲ್ಮನೆಯಲ್ಲಿ ಐದು ನಾಮನಿರ್ದೇಶನ ಸ್ಥಾನಗಳ ಮೂಲಕ ಬಿಜೆಪಿ ಸಂಖ್ಯಾಬಲ ಹೆಚ್ಚಿಸಿಕೊಂಡಿದೆ. ಐವರ ನಾಮಕರಣದ ನಂತರವೂ ಸಹ ವಿಧಾನ ಪರಿಷತ್ತಿನಲ್ಲಿ ಸದ್ಯಕ್ಕೆ ಬಿಜೆಪಿಗೆ ಬಹುಮತವಿಲ್ಲದಂತಾಗಿದೆ. 
ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಮೇಲ್ಮನೆಯಲ್ಲಿ ಐದು ನಾಮನಿರ್ದೇಶನ ಸ್ಥಾನಗಳ ಮೂಲಕ ಬಿಜೆಪಿ ಸಂಖ್ಯಾಬಲ ಹೆಚ್ಚಿಸಿಕೊಂಡಿದೆ. ಐವರ ನಾಮಕರಣದ ನಂತರವೂ ಸಹ ವಿಧಾನ ಪರಿಷತ್ತಿನಲ್ಲಿ ಸದ್ಯಕ್ಕೆ ಬಿಜೆಪಿಗೆ ಬಹುಮತವಿಲ್ಲದಂತಾಗಿದೆ. 

ಒಂದು ವೇಳೆ ಮುಂಬರಲಿರುವ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸಿದರಷ್ಟೇ ಸಭಾಪತಿ ಮತ್ತು ಉಪಸಭಾಪತಿ ಸ್ಥಾನ ಬಿಜೆಪಿಗೆ ದೊರೆಯಲಿದೆ. ಜೆಡಿಎಸ್ ಮತ್ತು ಪಕ್ಷೇತರರು ಬೆಂಬಲ ನೀಡಿದರೆ ಮಾತ್ರ ಸಭಾಪತಿ ಹುದ್ದೆಯಲ್ಲಿ ಪೈಪೋಟಿ ನಡೆಸಬಹುದು. ಜೆಡಿಎಸ್ ಮತ್ತು ಪಕ್ಷೇತರರು ಬೆಂಬಲಿಸಿದರೆ ಮಾತ್ರ ಮೇಲ್ಮನೆಯಲ್ಲಿ ಬಿಜೆಪಿಗೆ ಸಭಾಪತಿ ಸ್ಥಾನ ಪ್ರಾಪ್ತವಾಗಲಿದೆ. 

ವಿಧಾನಪರಿಷತ್ತಿನಲ್ಲಿ ಒಟ್ಟು 75 ಸ್ಥಾನಗಳಿದ್ದು, ಈ ಪೈಕಿ ಕಾಂಗ್ರೆಸ್ 28, ಬಿಜೆಪಿ 27, ಜೆಡಿಎಸ್ 14, ಪಕ್ಷೇತರ 1 ಹಾಗೂ ಸಭಾಪತಿ ಅವರಿಗೆ ಒಂದು ಮತಗಳಿವೆ. ಮೇಲ್ಮನೆಯಲ್ಲಿ ಹಾಲಿ ಸಭಾಪತಿ ಸ್ಥಾನ ಕಾಂಗ್ರೆಸ್ ನ ಪ್ರತಾಪ್ ಚಂದ್ರಶೆಟ್ಟಿ ಜೆಡಿಎಸ್ ನಿಂದ ಉಪಸಭಾಪತಿಯಾಗಿ ಧರ್ಮೇಗೌಡರು ಇದ್ದಾರೆ.

ಈ ಜೂನ್ ನಲ್ಲಿಯೇ ವಿಧಾನಪರಿಷತ್ತಿನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಬೇಕಿತ್ತು. ಆದರೆ ಕೋವಿಡ್ 19 ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಿಕೆಯಾಗಿದೆ. ಈವರೆಗೆ ವೇಳಾಪಟ್ಟಿ ಪ್ರಕಟವಾಗಿಲ್ಲ. ಈ ಚುನಾವಣೆಗಳು ನಡೆಯುವವರೆಗೂ ಮೇಲ್ಮನೆಯಲ್ಲಿ ಬಿಜೆಪಿಗೆ ಬಹುಮತ ದೊರೆಯುವುದಿಲ್ಲ. ಒಂದು ವೇಳೆ ಈ ಎರಡೂ ಚುನಾವಣೆಗಳಲ್ಲಿ ಬಿಜೆಪಿ 2 ಸ್ಥಾನಗಳನ್ನು ಗೆದ್ದರೆ ಕಾಂಗ್ರೆಸ್ ಪಕ್ಷವನ್ನು ಹಿಂದೆ ಸರಿಸಲಿದೆ. ಇನ್ನೂ ಕಾಂಗ್ರೆಸ್ 1 ಸ್ಥಾನ ಗೆದ್ದರೆ ಬಿಜೆಪಿ ಮತ್ತು ಕಾಂಗ್ರೆಸ್ 29 ಸ್ಥಾನಗಳನ್ನು ಪಡೆದು ಸಮಬಲ ಸಾಧಿಸಲಿದೆ. 

ಕಾಂಗ್ರೆಸ್ ಮತ್ತು ಬಿಜೆಪಿ ಸಮಬಲ ಸಾಧಿಸಿದರೆ ಪಕ್ಷೇತರ ಅಭ್ಯರ್ಥಿ ವಿವೇಕ್ ರಾವ್ ಪಾಟೀಲ್ ಬೆಂಬಲ ಸಭಾಪತಿ ಸ್ಥಾನಕ್ಕೆ ಏರುವ ಪಕ್ಷಕ್ಕೆ ಅಗತ್ಯವಾಗಿದೆ. ವಿವೇಕ್ ರಾವ್ ಪಾಟೀಲ್ ಸಚಿವ ರಮೇಶ್ ಜಾರಕಿಹೊಳಿ ಬೆಂಬಲಿತರಾಗಿರುವುದುರಿಂದ ಬಹುತೇಕ ಬಿಜೆಪಿಗೆ ಬೆಂಬಲ ಸೂಚಿಸುವ ಸಾಧ್ಯತೆಯೇ ಹೆಚ್ಚಾಗಿದೆ. ಇನ್ನು ಜೆಡಿಎಸ್ ಸಹ ಯಾರಿಗೆ ಬೆಂಬಲ ಸೂಚಿಸುತ್ತದೆ ಎನ್ನುವುದರ ಮೇಲೂ ಸಭಾಪತಿ ಸ್ಥಾನದ ಭವಿಷ್ಯ ನಿಂತಿದೆ. ಜೆಡಿಎಸ್ ನ ಹಾಲಿ 14 ಸ್ಥಾನಗಳ ಪೈಕಿ ಈಗಾಗಲೇ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಪುಟ್ಟಣ ಬಿಜೆಪಿಗೆ ಸೇರಿದ್ದಾರೆ. ಮೇಲ್ಮನೆಯಲ್ಲಿ ತನ್ನ ಪಾರಮ್ಯ ಸಾಧಿಸಲು ಬಿಜೆಪಿ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಎರಡಕ್ಕಿಂತ ಹೆಚ್ಚಿನ ಸ್ಥಾನ ಗೆಲ್ಲಲೇ ಬೇಕಿರುವ ಅನಿವಾರ್ಯತೆಗೆ ಸಿಲುಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com