ವಿಧಾನ ಪರಿಷತ್ ಗೆ ಆಯ್ಕೆ ಮಾಡುವಂತೆ ವಿಶ್ವನಾಥ್, ಎಂಟಿಬಿ ನಾಗರಾಜ್ ಪಟ್ಟು!

ಪರಿಷತ್ ಚುನಾವಣೆ ಸಮೀಪಿಸುತ್ತಿದ್ದಂತೆಯೆ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕೊರೊನಾ ವೈರಸ್, ಲಾಕ್‌ಡೌನ್‌ನಿಂದಾಗಿ ಬಿಜೆಪಿಯಲ್ಲಿ ಕಳೆಗುಂದಿದ್ದ ರಾಜಕೀಯ ಮತ್ತೆ ಶುರುವಾಗಿದೆ. 
ಎಂಟಿಬಿ ನಾಗರಾಜ್ ಮತ್ತು ವಿಶ್ವನಾಥ್
ಎಂಟಿಬಿ ನಾಗರಾಜ್ ಮತ್ತು ವಿಶ್ವನಾಥ್

ಬೆಂಗಳೂರು: ಪರಿಷತ್ ಚುನಾವಣೆ ಸಮೀಪಿಸುತ್ತಿದ್ದಂತೆಯೆ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕೊರೊನಾ ವೈರಸ್, ಲಾಕ್‌ಡೌನ್‌ನಿಂದಾಗಿ ಬಿಜೆಪಿಯಲ್ಲಿ ಕಳೆಗುಂದಿದ್ದ ರಾಜಕೀಯ ಮತ್ತೆ ಶುರುವಾಗಿದೆ. 

ಕಳೆದ ವಿಧಾನಸಭೆಯ ಉಪಚುನಾವಣೆಯಲ್ಲಿ ಪರಾಭವಗೊಂಡವರನ್ನು ವಿಧಾನಪರಿಷತ್‍ಗೆ ಆಯ್ಕೆ ಮಾಡದಿದ್ದರೆ ಮುಂದೆ ಏನು ತೀರ್ಮಾನ ಮಾಡ ಬೇಕು ಎಂಬುದರ ಬಗ್ಗೆ ಎಲ್ಲರೂ  ಒಟ್ಟಾಗಿ ಚರ್ಚೆ ಮಾಡಿ ಮಾಡುತ್ತೇವೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.ಉಪಚುನಾವಣೆಯಲ್ಲಿ ನಾಗರಾಜ್ ಮತ್ತು ವಿಶ್ವನಾಥ್ ಬೇರೆ ಬೇರೆ ಕಾರಣಗಳಿಗೆ ಪರಾಭವ ಗೊಂಡಿದ್ದರು. ಈಗ ವಿಧಾನಪರಿಷತ್‍ಗೆ ಆಯ್ಕೆ ಮಾಡಬೇಕೆಂದು ಪಟ್ಟು ಹಿಡಿದು ಕುಳಿತಿದ್ದಾರೆ.

ನಮ್ಮಹಣೆಬರಹದಲ್ಲಿ ವಿಧಾನಪರಿಷತ್‍ಗೆ ಹೋಗಬೇಕೆಂಬುದು ಇದ್ದರೆ ಹೋಗಿಯೇ ಹೋಗುತ್ತೇನೆ. ಇಲ್ಲದಿದ್ದರೆ ಇಲ್ಲ. ಯಾವುದಕ್ಕೂ ದೇವರ ಅನುಗ್ರಹ ಎಂಬದೊಂದು ಇರಬೇಕು. ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡೋಣ ಎಂದು ಸೂಚ್ಯವಾಗಿ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದರು. ನಾನು ಈಗಲೂ 100ಕ್ಕೆ ನೂರರಷ್ಟು ತಾಳ್ಮೆ ಯಿಂದ ಇದ್ದೇನೆ. ಎಲ್ಲಿಯೂ ಕೂಡ ಸಹನೆ ಕಳೆದುಕೊಂಡಿಲ್ಲ. ದೇವರ ಅನುಗ್ರಹ, ಪಕ್ಷದ ಮುಖಂಡರ ಆಶೀರ್ವಾದ ಇದ್ದರೆ ಏನು ಬೇಕಾದರೂ ಆಗಬಹುದು. ರಾಜಕೀಯದಲ್ಲಿ ಸಾಕಷ್ಟು ಏರುಪೇರುಗಳನ್ನು ನೋಡಿರುವುದರಿಂದ ನನಗೆ ಯಾವುದೇ ಗೊಂದಲವಿಲ್ಲ ಎಂದು ಎಂಟಿಬಿ ಸ್ಪಷ್ಟಪಡಿಸಿದರು.

ಬಿಜೆಪಿಯವರು ಏನೇ ತೀರ್ಮಾನ ಕೈಗೊಂಡರೂ ಅದಕ್ಕೆ ನಮ್ಮ ಸಮ್ಮತಿ ಇದೆ. ಕೊಟ್ಟ ಮಾತಿನಂತೆ ಮುಖ್ಯಮಂತ್ರಿ ಯಡಿಯೂರಪ್ಪನವರು ಉಪಚುನಾವಣೆಯಲ್ಲಿ ನಮಗೆ ಟಿಕೆಟ್ ಕೊಟ್ಟಿದ್ದರು. ಬಹುತೇಕ ಮಂದಿ ಗೆದ್ದರು. ಉಳಿದವರು ಬೇರೆ ಬೇರೆ ಕಾರಣಗಳಿಗೆ ಪರಾಭವಗೊಂಡರು. ಹಾಗಂತ ನಮ್ಮನ್ನು ಬಿಜೆಪಿಯವರೇ ಸೋಲಿಸಿದರು ಎಂದು ಎಲ್ಲಿಯೂ
ಹೇಳಿಲ್ಲ.

ಇದು ಸತ್ಯಕ್ಕೆ ದೂರವಾದ ಆರೋಪ. ನನಗೆ ಹೊಸಕೋಟೆಯಲ್ಲಿ ಸಂಪೂರ್ಣ ಸಹಕಾರ ಮತ್ತು ಬೆಂಬಲ ನೀಡುವುದಾಗಿ ಹಾಲಿ ಸಂಸದರಾದ ಬಿ.ಎನ್.ಬಚ್ಚೇಗೌಡ ಮತ್ತು ಅವರ ಪುತ್ರ ಶರತ್ ಬಚ್ಚೇಗೌಡ ಅವರು ಮುಖ್ಯಮಂತ್ರಿಯವರಿಗೆ ಮಾತು ಕೊಟಿದ್ದರು.  ಆದರೆ ದಿನಕಳೆದಂತೆ ಉಲ್ಟಾ ಹೊಡೆದು ಉಪಚುನಾವಣೆಯಲ್ಲಿ ನನ್ನನ್ನು ಸೋಲಿಸಿದರು. ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಮಾಡಿದ್ದೇನೆ. ಪಕ್ಷ ಏನು  ತೀರ್ಮಾನ ಕೈಗೊಳ್ಳುತ್ತದೆಯೋ ನೋಡೋಣ ಎಂದರು.

ನನ್ನನ್ನು ವಿಧಾನಪರಿಷತ್‍ಗೆ ಆಯ್ಕೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದೇನೆ. ಇದನ್ನು ಅವರು ಸಕಾರಾತ್ಮಕವಾಗಿ ಪರಿಗಣಿಸಲಿದ್ದಾರೆಂಬ ವಿಶ್ವಾಸ ನನಗಿದೆ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದರು. ಯಡಿಯೂರಪ್ಪ ಅವರ ಮೇಲೆ ನಮಗೆ ನಂಬಿಕೆ ಇದೆ. ಕೊಟ್ಟ ಮಾತಿಗೆ ಅವರು ಎಂದೂ ತಪ್ಪುವವರಲ್ಲ ಎಂದು ಹೇಳಿದರು.

ನಾಲಿಗೆಯ ಮೇಲೆ ನಡೆಯುವ ನಾಯಕ ಎಂದರೆ ಅದು ಯಡಿಯೂರಪ್ಪ ಮಾತ್ರ. ನನಗೆ ಈಗಲೂ ಅವರ ಮೇಲೆ ವಿಶ್ವಾಸವಿದೆ. ಮುಂದೇನಾಗುತ್ತೋ ನೊಡೋಣ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com